ಕನ್ನಡಪ್ರಭ ವಾರ್ತೆ ಮಂಡ್ಯ
ಮೈಷುಗರ್ ಕಾರ್ಖಾನೆಗೆ ಜಿಲ್ಲಾಕಾರಿ ಡಾ.ಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೇ, ಸಾಮಾಜಿಕ ಕಾರ್ಯಕರ್ತರಿಂದ ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದಂತೆ ಅಹವಾಲು ಸ್ವೀಕರಿಸಿ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಕಾರ್ಖಾನೆ ಆವರಣಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಯವರು ಕಂಪನಿಯ ಕಬ್ಬು ಅರೆಯುವ ಘಟಕ, ಸಂಸ್ಕರಣಾ ಘಟಕ, ಸಕ್ಕರೆ ತಯಾರಿಕಾ ಘಟಕ ಸೇರಿದಂತೆ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರ್ಖಾನೆಯಲ್ಲಿದ್ದ ಅನುಪಯುಕ್ತ ವಸ್ತುಗಳ ಬಗ್ಗೆಯೂ ಮಾಹಿತಿ ಪಡೆದ ಅವರು, ಮುಂದಿನ ಹಂಗಾಮಿನಲ್ಲಿ ಕಬ್ಬು ಅರೆಯಲು ನಡೆಸಿರುವ ಸಿದ್ಧತೆಗಳ ಕುರಿತಂತೆ ಮಾಹಿತಿ ಪಡೆದರು.
ನಂತರ ನಗರಸಭೆ ಮಾಜಿ ಸದಸ್ಯ ಶಿವಕುಮಾರ್ ಕೆಂಪಯ್ಯ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಕಾರ್ಖಾನೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ದೂರುಗಳನ್ನು ಸಲ್ಲಿಸಿದರು. ದೂರನ್ನು ಪರಿಶೀಲಿಸಿದ ಜಿಲ್ಲಾಕಾರಿ ಡಾ.ಕುಮಾರ ಅವರು ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೇ, ಮಾಹಿತಿದಾರರು ಕೇಳಿರುವ ಮಾಹಿತಿಯನ್ನು ತಕ್ಷಣ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಮುಖ್ಯಮಂತ್ರಿಗಳು ಸಹ ದೂರುದಾರರು ನೀಡಿರುವ ಮಾಹಿತಿಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ವಹಿಸುವಂತೆ ಸೂಚನೆ ನೀಡಿದ್ದರೂ ಸಹ ಈ ಬಗ್ಗೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮಂಗಲ್‌ದಾಸ್ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ವ್ಯವಸ್ಥಾಪಕ ನಿರ್ದೇಶಕರ ಕರ್ತವ್ಯ ಲೋಪ ಮತ್ತು ಬೇಜವಾಬ್ದಾರಿತನದಿಂದಾಗಿ ಕಂಪನಿಗೆ ಸಾಕಷ್ಟು ನಷ್ಟ ಉಂಟಾಗಿದೆ. ಅತಿ ಹೆಚ್ಚು ಬೆಲೆ ಬಾಳುವ ಅನುಪಯುಕ್ತ ವಸ್ತುಗಳ ಮಾರಾಟದಲ್ಲೂ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಇದಕ್ಕೆ ಕಾರಣರಾದ ವ್ಯವಸ್ಥಾಪಕ ನಿರ್ದೇಶಕ ಮಂಗಲ್‌ದಾಸ್ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿದರು.
ಕಂಪನಿ ಅಧ್ಯಕ್ಷ ಸಿ.ಡಿ.ಗಂಗಾಧರ್, ವ್ಯವಸ್ಥಾಪಕ ನಿರ್ದೇಶಕ ಮಂಗಲ್‌ದಾಸ್, ಅಧಿಕಾರಿಗಳಾದ ಸ್ವಾಮಿಗೌಡ ಸೇರಿದಂತೆ ಇತರರು ಹಾಜರಿದ್ದರು.ಬಫರ್‌ಜೋನ್ ಜಾಗ ತೆರವಿಗೆ ತಹಸೀಲ್ದಾರ್ ಆದೇಶಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಚಿಕ್ಕಮಂಡ್ಯ ಕೆರೆಯಂಗಳ ಸರ್ವೆ ನಂ.೫೦೭ರಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ನೀರಾವರಿ ಇಲಾಖೆಗೆ ಸೇರಿದ ಬಫರ್‌ಜೋನ್ ಜಾಗವನ್ನು ತೆರವುಗೊಳಿಸುವಂತೆ ತಹಸೀಲ್ದಾರ್ ಅವರು ಆದೇಶ ಹೊರಡಿಸಿದ್ದಾರೆ.ಈ ಜಾಗವು ಕೆರೆಯಂಗಳ ಸಮೀಪ ಬೀಡಿ ಕಾಲೋನಿ ಪಕ್ಕದಲ್ಲಿ ಹರಿಯುವ ಹಳ್ಳದ ಪಕ್ಕದ ಬಫರ್‌ಜೋನ್ ಜಾಗವಾಗಿದೆ. ಇದು ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ ಜಾಗವಾಗಿದ್ದು, ಸರ್ಕಾರಿ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ಕಲ್ಲುಗಳನ್ನು ನೆಟ್ಟು ಅಕ್ರಮವಾಗಿ ನಿವೇಶನಗಳನ್ನು ರಚಿಸಿದ್ದರು. ಈ ಕುರಿತು ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ, ಆಟೋ ಚಾಲಕರ ವೇದಿಕೆ ಅಧ್ಯಕ್ಷ ಟಿ.ಕೃಷ್ಣ ಮತ್ತಿತರರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು.ಈ ಕುರಿತು ಪರಿಶೀಲನೆ ನಡೆಸಿ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ತಹಸೀಲ್ದಾರ್ ಅವರಿಗೆ ಸೂಚಿಸಿದ್ದು. ಅದರಂತೆ ತಹಸೀಲ್ದಾರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಂಡು ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿವೇಶನಗಳನ್ನು ಹಂಚಿಕೆ ಮಾಡಿರುವುದನ್ನು ರದ್ದುಗೊಳಿಸಿ ಹಂಚಿಕೆ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನಗರಸಭೆ ಪೌರಾಯುಕ್ತರು, ಮುಡಾ ಆಯುಕ್ತರು ಮತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.