ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ
ಚರಂಡಿ ದುರಸ್ತಿ ಕಾಣದೆ ಟ್ಯಾಂಕ್ ಹಾಗೂ ಮಳೆಯ ನೀರು ರಸ್ತೆಯಲ್ಲಿ ಹರಿಯುವ ಕಾರಣ ಕ್ರಿಮಿ ಕೀಟಗಳ ಹಾವಳಿಯಿಂದ ಡೆಂಘೀ ಹರಡುವ ಭೀತಿ ಎದುರಾಗಿದೆ ಎಂದು ತಾಲೂಕಿನ ಗಡಿ ಗ್ರಾಮ ಬಲ್ಲೇನಹಳ್ಳಿಯ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಜೆ.ಅಚ್ಚಮ್ಮನಹಳ್ಳಿ ಗ್ರಾಪಂ ವ್ಯಾಪ್ತಿಯ ಬಲ್ಲೇನಹಳ್ಳಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮದಲ್ಲಿ ಅನೈರ್ಮಲ್ಯ ತಾಂಡವಾಗುತ್ತಿದ್ದು, ಶುಚಿತ್ವ ಹಾಗೂ ಚರಂಡಿಯ ದುರಸ್ತಿ ವಿಚಾರವಾಗಿ ಗ್ರಾಮಸ್ಥರ ಮನವಿಗೆ ಗ್ರಾಪಂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ದಿನೇ ದಿನೇ ಡೆಂಘೀ ಜ್ವರದ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ಸಂಬಂಧ ಮುಂಜಾಗ್ರತ ಕ್ರಮವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯಿಂದ ಗ್ರಾಮಗಳಲ್ಲಿ ಚರಂಡಿ ದುರಸ್ತಿ ಹಾಗೂ ನೈರ್ಮಲ್ಯ ಶುಚಿತ್ವ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರೂ ತಾಲೂಕಿನ ಜೆ.ಅಚ್ಚಮ್ಮನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಇತರೆ ತಾಪಂ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುವ ಕಾರಣ ಬಲ್ಲೇನಹಳ್ಳಿ ಗ್ರಾಮದಲ್ಲಿ ಕುಡಿವ ನೀರಿಗೆ ಬಳಸುವ ಟ್ಯಾಂಕ್ ಭರ್ತಿಯಾಗಿ ಹೊರಬರುವ ಹಾಗೂ ಸತತವಾಗಿ ಬಿದ್ದ ಮಳೆಯ ನೀರು ಸದಾ ಹರಿಯುವ ಕಾರಣ ರಸ್ತೆಗಳೆಲ್ಲಾ ಜಲಾವೃತ್ತವಾಗಿವೆ ಎಂದು ಗ್ರಾಮಸ್ಥರು ದೂರಿದರು.
ಸರ್ಮಪಕ ಚರಂಡಿ ವ್ಯವಸ್ಥೆಯಿಲ್ಲದ ಪ್ರಯುಕ್ತ ರಸ್ತೆಯ ನೀರು ಮನೆಗಳಿಗೆ ನುಗ್ಗುತ್ತಿವೆ. ಹಾಲಿ ಇರುವ ಚರಂಡಿಗಳು ದುರಸ್ತಿ ಕಾಣದೇ ಚರಂಡಿಯಲ್ಲಿ ಬೃಹದಾಕರವಾಗಿ ಗಿಡಗಂಟೆಗಳು ಬೆಳೆದಿದ್ದು, ಕಸ ಕಟ್ಟಿ ಹಾಕುವ ಕಾರಣ, ರಸ್ತೆ ಹಾಗೂ ಮನೆಗಳಿಂದ ಹರಿದು ಬರುವ ನೀರು ಸರಾಗವಾಗಿ ಹರಿಯದೇ ಅಲ್ಲಲಿ ಸಂಗ್ರವಾಗುತ್ತಿದೆ. ಇದರಲ್ಲಿ ಬಿಡಾಡಿ ಹಂದಿಗಳ ವಾಸ , ಚರಂಡಿಗಳು ಗಬ್ಬುನಾಥ ಹೊಡೆಯುವ ಮೂಲಕ ತ್ಯಾಜ್ಯ ವಿಲೇವಾರಿ ಸಂಗ್ರಹದ ತೊಟ್ಟಿಯಾಗಿವೆ. ಈ ಬಗ್ಗೆ ಆನೇಕ ಬಾರಿ ಮನವಿ ಮಾಡಿದರೂ ಜೆ.ಅಚ್ಚಮ್ಮನಹಳ್ಳಿ ಗ್ರಾಪಂ ಪಿಡಿಒ ಹಾಗೂ ಗ್ರಾಪಂ ಕಾರ್ಯದರ್ಶಿ ನಿರ್ಲಕ್ಷ್ಯವಸಿದ್ದಾರೆ ಎಂದು ಆರೋಪಿಸಿದರು.ಇದರಿಂದ ಗ್ರಾಮದಲ್ಲಿ ಸೊಳ್ಳೆ ಹಾಗೂ ಇತರೆ ಕ್ರೀಮಿಕೀಟಗಳ ಹಾವಳಿ ಹೆಚ್ಚಿದ್ದು ಇಡೀ ಊರೇ ಕೆಸರು ಗದ್ದೆಯಂತಾಗಿದೆ. ಚರಂಡಿಗೆ ಹೋಗುವ ನೀರು ಸಂಗ್ರಹವಾಗುವ ಕಾರಣ ಮನೆಗಳ ಮುಂದೆ ನಿಲ್ಲಲು ಸಾಧ್ಯವಾಗುತ್ತಿಲ್ಲ. ಗ್ರಾಮದಲ್ಲಿ ಡೆಂಘೀ ಹರಡುವ ಭೀತಿ ಎದುರಾಗಿದ್ದು ನಿತ್ಯ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದೆ. ರಸ್ತೆಯಲ್ಲಿ ಶೇಖರಣೆಯಾಗುವ ನೀರು ಚರಂಡಿಗೆ ಹೋಗಬೇಕು.ಇತರೆ ನೈರ್ಮಲ್ಯ ಶುಚಿತ್ವ ಕಾಪಾಡುವಂತೆ ಗ್ರಾಮಸ್ಥರು ಒತ್ತಾಯಿಸಿದರು.
ಸಮಸ್ಯೆ ನಿವಾರಣೆಗೆ ತಾಪಂ ಇಒ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ.ನಿರ್ಲಕ್ಷಿತ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒರಲ್ಲಿ ತಾಲೂಕಿನ ಬಲ್ಲೇನಹಳ್ಳಿ ಗ್ರಾಮದ ಅಶೋಕ್, ನಾಗರಾಜು,ಬಿ.ಎಂ.ರಾಮು, ಸುಬ್ಬರಾಯಪ್ಪ ಇತರೆ ಸಾರ್ವಜನಿಕ ಮುಖಂಡರು ಮನವಿ ಮಾಡಿದ್ದಾರೆ.