ಕನ್ನಡಪ್ರಭ ವಾರ್ತೆ ಮಂಡ್ಯ
‘ಬೂದನೂರು ಉತ್ಸವ’ದ ಪ್ರಯುಕ್ತ ತಾಲೂಕಿನ ೩೦ ಗ್ರಾಮಗಳಲ್ಲಿ ರಂಗೋಲಿ ಸ್ಪರ್ಧೆ ಕಾರ್ಯಕ್ರಮ ಆಯಾಯ ಗ್ರಾಮಗಳಲ್ಲಿ ಬುಧವಾರ ಏರ್ಪಡಿಸಲಾಗಿತ್ತು.೩೦ ಗ್ರಾಮಗಳಲ್ಲಿ ನೂರಾರು ಮಹಿಳೆಯರು ವಿವಿಧ ಬಣ್ಣ ಬಣ್ಣದ ರಂಗೋಲಿಗಳನ್ನು ಬಿಡಿಸಿ, ಇಡೀ ಗ್ರಾಮಗಳಿಗೆ ಕಳೆತಂದರು. ಈ ಸ್ಪರ್ಧೆಯಲ್ಲಿ ೧೮ ವರ್ಷ ಮೇಲ್ಪಟ್ಟ ಮಹಿಳೆಯರು ಭಾಗವಹಿಸಲು ಅವಕಾಶ ನೀಡಿದ್ದರಿಂದ ೧೮ ರಿಂದ ೮೦ ವರ್ಷದವರೆಗಿನ ಮಹಿಳೆಯರು ಭಾಗವಹಿಸಿ ರಂಗೋಲಿ ಬಿಡಿಸಿ, ಬಣ್ಣ ಹಚ್ಚಿ ತಮ್ಮ ಮನೆಯ ಹಬ್ಬದಂತೆ ಖುಷಿಪಟ್ಟರು.
ಇಡೀ ರಾಜ್ಯದಲ್ಲಿ ಒಂದೇ ಬಾರಿಗೆ ೩೦ ಗ್ರಾಮಗಳಲ್ಲಿ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಿದ್ದು ಇದೇ ಪ್ರಥಮವಾಗಿದ್ದು, ಇದು ದಾಖಲೆಯಾಗಿದೆ. ಇದಕ್ಕೆ ಪ್ರಮುಖ ಕಾರಣ ಶಾಸಕ ಪಿ.ರವಿಕುಮಾರ್. ಸದಾ ಹೊಸದನ್ನು ಬಯಸುವ ಅವರು ಬೂದನೂರು ಉತ್ಸವಕ್ಕೆ ಮೆರುಗು ನೀಡಲು ಈಗಾಗಲೇ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿ ಯಶಸ್ವಿಯಾಗಿದ್ದಾರೆ. ಈ ಸ್ಪರ್ಧೆಯಲ್ಲಿ ೫ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಶಾಸಕ ರವಿಕುಮಾರ್ ಅವರೇ ಉಡುಗೊರೆ ನೀಡಿದ್ದರು.ಎಲ್ಲರಿಗೂ ಸಮಾಧಾನಕರ ಬಹುಮಾನ:
ರಂಗೋಲಿ ಸ್ಪರ್ಧೆಯಲ್ಲಿ ಬಿಡಿಸಿರುವ ರಂಗೋಲಿಗಳನ್ನು ವೀಕ್ಷಿಸಿ ಮಾತನಾಡಿದ ಶಾಸಕ ರವಿಕುಮಾರ್ ಅವರು, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಸಮಾಧಾನಕರ ಬಹುಮಾನವನ್ನು ವಿತರಿಸಲಾಗುವುದು. ಪ್ರತಿ ಗ್ರಾಮಕ್ಕೂ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ರಂಗೋಲಿ ಸ್ಪರ್ಧೆಯಲ್ಲಿ ವಿವಿಧ ರೀತಿಯ ರಂಗೋಲಿಗಳಾದ ಬೂದನೂರು ಉತ್ಸವದ ಲೋಗೋ, ಕಾಂತಾರ, ೩ಡಿ ರಂಗೋಲಿ ಮತ್ತು ಗೃಹಲಕ್ಷ್ಮೀ ಯೋಜನೆಯ ಕುರಿತು ಮಾಹಿತಿ ನೀಡುವಂತಹ ವಿವಿಧ ರೀತಿಯ ರಂಗೋಲಿ ಬಿಡಿಸಿರುವುದನ್ನು ವೀಕ್ಷಣೆ ಮಾಡಿ ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್ ನಂದಿನಿ, ಉಪ ವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ವಿಶ್ವನಾಥ್, ತಾಪಂ ಇಒ ಲೋಕೇಶ್ವರ್, ಬೂದನೂರು ಪಿಡಿಒ ಸ್ವಾಮಿ, ಮುಖಂಡರಾದ ಬಿ.ಎನ್.ರಘು, ಮಂಜು, ಚೈತ್ರೇಶ್, ಕೆಂಪೇಗೌಡ, ಜಯರಾಮು, ಶಂಕರ್ ಇತರರಿದ್ದರು.