ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ದೇಶದ ಪ್ರಮುಖ ಶಕ್ತಿಪೀಠಗಳಲ್ಲೊಂದಾದ ಕೊಲ್ಲೂರು ಶ್ರೀ ಮುಕಾಂಬಿಕೆಯ ಸನ್ನಿಧಿಯಲ್ಲಿ ಮತ್ತೆ ಉತ್ಸವಗಳ ಪರ್ವ ಆರಂಭವಾಗಿದೆ.ಪಶ್ಚಿಮದಲ್ಲಿ ಭೋರ್ಗರೆಯುವ ನೀಲಿ ಸಮುದ್ರ, ಪೂರ್ವದಲ್ಲಿ ಕಣ್ಮನ ಸೆಳೆಯುವ ಕೊಡಚಾದ್ರಿ ತಪ್ಪಲಲ್ಲಿರುವ ಕೊಲ್ಲೂರು, ಸುಮಾರು 12 ಶತಮಾನಗಳಷ್ಟು ಹಿಂದೆ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರು ಪ್ರತಿಷ್ಠಾಪಿಸಿದ ನಾಲ್ಕು ಕ್ಷೇತ್ರಗಳಲ್ಲಿ ಈ ಕ್ಷೇತ್ರವೂ ಒಂದು. ಜೊತೆಗೆ ದಕ್ಷಿಣ ಭಾರತದ ದ್ರಾವಿಡ ಜನರ ಆರಾಧ್ಯ ದೇವತೆ ಮೂಕಾಂಬಿಕೆಯ ಈ ಪುಣ್ಯಕ್ಷೇತ್ರ ಸಪ್ತ ಮುಕ್ತಿಸ್ಥಳಗಳಲ್ಲೊಂದಾಗಿದೆ.
ಪುರಾಣ ಐತಿಹ್ಯದ ಪ್ರಕಾರ ಕೊಲಾ ಮಹರ್ಷಿ ತಪಸ್ಸು ಮಾಡಿದ ಸ್ಥಳವಾದ್ದರಿಂದ ಈ ಪರಿಸರಕ್ಕೆ ಕೊಲ್ಲೂರು ಎಂಬ ಹೆಸರುಂಟಾಗಿದೆ. ಇಲ್ಲಿ ಕೊಲಾ ಮಹರ್ಷಿಯ ತಪಸ್ಸಿಗೆ ಉಪಟಳ ಕೊಡುತ್ತಿದ್ದ ಮೂಕಾಸುರ ಎಂಬ ರಾಕ್ಷಸನನ್ನು ಆದಿಶಕ್ತಿಯು ಸಂಹರಿಸಿ, ಮುಂದೆ ಇಲ್ಲಿ ಮುಕಾಂಬಿಕೆ ಎಂಬ ಹೆಸರಿನಲ್ಲಿ ನೆಲೆಯಾಗುತ್ತಾಳೆ.ಮೂಕಾಂಬಿಕೆಯು ಶಿವ ಮತ್ತು ಶಕ್ತಿಯ ಆವಿರ್ಭಾವ ರೂಪವಾಗಿದ್ದು, ಇಲ್ಲಿ ಧ್ಯಾನ ನಿರತರಾಗಿದ್ದ ಆದಿಶಂಕರಾಚಾರ್ಯರಿಗೆ ಒಲಿದು ಜ್ಯೋತಿರ್ಲಿಂಗವಾಗಿ ಪ್ರತಿಷ್ಠಾಪನೆಗೊಂಡಿದ್ದಾಳೆ. ಇಲ್ಲಿ ಮೂಕಾಂಬಿಕೆಯ ಜೊತೆಗೆ ಶ್ರೀ ಸುಬ್ರಮಣ್ಯ, ಶ್ರೀ ಪಾರ್ಥೀಶ್ವರ, ಶ್ರೀ ಪಂಚಮುಖ ಗಣಪತಿ, ಶ್ರೀ ಚಂದ್ರಮೌಳೀಶ್ವರ, ಶ್ರೀ ಪ್ರಾಣಲಿಂಗೇಶ್ವರ, ಶ್ರೀ ನಂಜುಂಡೇಶ್ವರ, ಶ್ರೀ ಆಂಜನೇಯ, ಶ್ರೀ ವೆಂಕಟರಮಣ, ಶ್ರೀ ತುಳಸಿ ಗೋಪಾಲಕೃಷ್ಣ ದೇವರ ಸನ್ನಿಧಿಯೂ ಇದೆ.
ಇಲ್ಲಿ ನಡೆಯುವ ನವರಾತ್ರಿಯೂ ಅತ್ಯಂತ ಪ್ರಸಿದ್ಧ ಹಬ್ಬವಾಗಿದ್ದು, ಕೇರಳ, ತಮಿಳುನಾಡಿನ ಲಕ್ಷಾಂತರ ಮಂದಿ ಭಕ್ತರು ಇಲ್ಲಿಗಾಗಮಿಸುತ್ತಾರೆ. ನವರಾತ್ರಿಯ ಕೊನೆಯ ದಿನ ಇಲ್ಲಿನ ಸರಸ್ವತಿ ಮಂಟಪದಲ್ಲಿ ಮಕ್ಕಳಿಗೆ ನಡೆಸುವ ವಿದ್ಯಾರಂಭಕ್ಕೆ ಬಹಳ ಮಹತ್ವ ಇದೆ. ನಿತ್ಯವೂ 2 ಬಾರಿ ಸಾವಿರಾರು ಮಂದಿಗೆ ಅನ್ನದಾನ ನೀಡುವ ಈ ಕ್ಷೇತ್ರ ರಾಜ್ಯದಲ್ಲಿ ಅತಿ ಹೆಚ್ಚು ಭಕ್ತರು ಆಗಮಿಸುವ ಕ್ಷೇತ್ರಗಳಲ್ಲೊಂದಾಗಿದೆ.8 ದಿನ ಮಹಾರಥೋತ್ಸವ:
ಈ ಮೂಕಾಂಬಿಕೆಯ ಸನ್ನಿಧಿಯಲ್ಲಿ ನಡೆಯುವ ಇನ್ನೊಂದು ಪ್ರಸಿದ್ಧ ಹಬ್ಬ ಶ್ರೀ ಮನ್ಮಹಾರಥೋತ್ಸವ ಮಾ. 15ರಿಂದ ಮೊದಲ್ಗೊಂಡಿದ್ದು, ಮಾ.24ರ ಪರ್ಯಂತ ಅತ್ಯಂದ ವೈಭವದಿಂದ ನಡೆಯಲಿದೆ. ಮಾ.22ರಂದು ರಥೋತ್ಸವವು ನಡೆಯಲಿದ್ದು ರಾಜ್ಯ, ಹೊರರಾಜ್ಯಗಳ ಲಕ್ಷಾಂತರ ಮಂದಿ ಇದರಲ್ಲಿ ಭಾಗವಹಿಸಲಿದ್ದಾರೆ.ಪ್ರಸ್ತುತ ದೇವಾಲಯದ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ನೇತೃತ್ವದಲ್ಲಿ ಸರ್ವಸದಸ್ಯರು ಮತ್ತು ಅಧಿಕಾರಿಗಳು ಈ ಮಹಾರಥೋತ್ಸವವನ್ನು ವಿಜೃಂಭಣೆಯಿಂದ ನಡೆಸಲು ಸಕಲ ಸಿದ್ಧತೆ ಕೈಗೊಂಡಿದ್ದಾರೆ.
ಕೊಲ್ಲೂರು ಕ್ಷೇತ್ರದಲ್ಲಿ ಈ ಎಂಟು ದಿನಗಳ ಕಾಲ ಪ್ರತಿದಿನ ಸಂಜೆ ಮಂಗಲ್ಯೋತ್ಸವ ನಡೆಯುತ್ತವೆ. ಜೊತೆಗೆ ಕ್ರಮವಾಗಿ ನಗರೋತ್ಸವ, ಮಯೂರೋತ್ಸವ, ಡೋಲಾರೋಹಣೋತ್ಸವ, ಪುಷ್ಪಮಂಟಪಾರೋಹಣೋತ್ಸವ, ವೃಷಭಾರೋಹಣೋತ್ಸವ, ಗಜಾರೋಹಣೋತ್ಸವ, ಸಿಂಹಾರೋಹಣೋತ್ಸವ ಮತ್ತು ಕೊನೆಯ ದಿನ ಶ್ರೀ ಮನ್ಮಹಾರಥೋತ್ಸವಗಳು ಭಕ್ತರ ಭಕ್ತಿಭಾವಪರವಶತೆಗೆ ಕಾರಣವಾಗುತ್ತವೆ.