ಕನ್ನಡಪ್ರಭ ವಾರ್ತೆ ಬೆಳಗಾವಿ
ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮಾತ್ರವಲ್ಲದೇ ಸಾಂಸ್ಕೃತಿಕವಾಗಿಯೂ ಮುಂದೆ ಇರಬೇಕು. ಎಂಜಿನಿಯರಿಂಗ್ ಎಂದ ಮಾತ್ರಕ್ಕೆ ಇದೊಂದು ತಾಂತ್ರಿಕ ಕ್ಷೇತ್ರ ಸಾಂಸ್ಕೃತಿಕವಲ್ಲ ಎಂಬ ಮನೋಭಾವನೆ ತೊಡೆದು ಹಾಕಬೇಕು ಎಂದು ಚಲನಚಿತ್ರ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೇಳಿದರು.ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) 3ನೇ ವರ್ಷದ ಯುಕ್ತಿ-೨೦೨೬ರ ಸಾಂಸ್ಕೃತಿಕ ಮತ್ತು ತಾಂತ್ರಿಕ ಎರಡು ದಿನಗಳ ಮೇಳಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ದೂರದ ಊರುಗಳಿಂದ ಈ ವಿಶ್ವವಿದ್ಯಾಲಯಕ್ಕೆ ಕಲಿಯಲು ಬಂದಿದ್ದೀರಿ. ವಿಶ್ವವಿದ್ಯಾಲಯವು ನಿಮಗೆ ಕಲಿಕೆಯ ಪೂರಕ ವಾತಾವರಣ ಸೃಷ್ಟಿಸಿಕೊಟ್ಟಿದೆ. ಇದನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಯ ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳ ಪರಿಚಯ ಕೂಡ ಇರಬೇಕು ಎಂಬುವುದನ್ನು ಗಮನದಲ್ಲಿಟ್ಟುಕೊಂಡು ನಾನು ಯುಕ್ತಿ ಆರಂಭಿಸಿದೆ. ಕಳೆದ 3 ವರ್ಷದಿಂದ ಬಹಳ ಉತ್ತಮವಾಗಿ ನಡೆಯುತ್ತಿದೆ. ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಗೆ ಪಣ ತೊಡಬೇಕು. ಜೀವನದಲ್ಲಿ ಶಿಸ್ತು ಮತ್ತು ಶ್ರಮದಿಂದ ಕ್ಲಿಷ್ಟವಾದ ಸವಾಲುಗಳನ್ನು ಸುಲಭವಾಗಿ ಎದುರಿಸಬಹುದು ಎಂಬುವುದನ್ನು ಅರಿತುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹಾರೈಸಿದರು.ನಟ ಪ್ರಮೋದ್ ಶೆಟ್ಟಿ ಮಾತನಾಡಿ, ನನ್ನ ಕಾಲೇಜು ದಿನಗಳಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಾನು ತಪ್ಪದೇ ಭಾಗವಹಿಸುತ್ತಿದ್ದೆ. ಈ ವೇಳೆ ನಾನು ತನ್ನ ಪತ್ರಿಭೆಯನ್ನು ಪ್ರದರ್ಶಿಸಿದ ಪರಿಣಾಮ ಒಳ್ಳೆಯ ಅವಕಾಶಗಳು ನನ್ನನ್ನು ನಿಮ್ಮ ಎದುರಿಗೆ ನಿಲ್ಲಿಸಿದೆ. ನಿಮ್ಮಲ್ಲಿರುವ ಪ್ರತಿಭೆಗಳನ್ನು ಪ್ರದರ್ಶಿಸಲು ಇದೇ ಉತ್ತಮವಾದ ಅವಕಾಶವಾಗಿದೆ. ನೀವು ಯಾವುದೇ ಕಾರಣಕ್ಕೂ ಅವಕಾಶಗಳನ್ನು ಕಳೆದುಕೊಳ್ಳಬೇಡಿ. ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿದರು.ಪ್ರಸ್ತುತ ಕನ್ನಡ ಚಿತ್ರರಂಗದಲ್ಲಿರುವ ಬಹುತೇಕ ನಿರ್ದೇಶಕರು ಎಂಜಿನಿಯರ್ ಪದವೀಧರರಾಗಿದ್ದಾರೆ. ಕೆಲವು ವಿದ್ಯಾರ್ಥಿಗಳು ಮನೆಯವರ ಒತ್ತಡಣಕ್ಕೆ ಮಣಿದು ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುತ್ತಾರೆ. ಮುಂದೆ ವಿದ್ಯಾರ್ಥಿಗಳು ತಮ್ಮ ಆಸಕ್ತಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಸಾಧನೆಯನ್ನು ಮಾಡುತ್ತಾರೆ. ಕ್ಷೇತ್ರ ಯಾವುದೇ ಇರಲಿ, ನಿಮ್ಮ ಸಾಧನೆ ಬಹಳ ಮುಖ್ಯ ಎಂದರು.ವಿಟಿಯು ಕುಲಸಚಿವರಾದ (ಆಡಳಿತ) ಪ್ರೊ.ಪ್ರಸಾದ ಬಿ.ರಾಂಪೂರೆ ಸ್ವಾಗತಿಸಿದರು. ಕುಲಸಚಿವ(ಮೌಲ್ಯಮಾಪನ) ಪ್ರೊ.ಉಜ್ವಲ್.ಯು.ಜೆ ವಂದಿಸಿದರು. ಈ ಸಂದರ್ಭದಲ್ಲಿ ವಿತ್ತಾಧಿಕಾರಿ ಡಾ.ಪ್ರಶಾಂತ್ ನಾಯಕ.ಜಿ, ವಿಟಿಯು ಕಾರ್ಯನಿರ್ವಾಹಕ ಸಮಿತಿಯ ಸದಸ್ಯ ಡಾ.ಎಸ್.ಬಿ.ಸಂಗಪ್ಪ, ವಿಶೇಷಾಧಿಕಾರಿ ಹಾಗೂ ಯುಕ್ತಿ ಸಂಯೋಜಕರಾದ ಕು.ಚೈತ್ರಾ.ಕೆ.ಎಂ ಮತ್ತು ಡಾ.ರೋಹನ್ ಗುರವ್ ಇತರರು ಉಪಸ್ಥಿತರಿದ್ದರು.
ಬಾಕ್ಸ್...ರಂಜಿಸಿದ ನಟ, ನಟಿಯರು
ಸಂಜೆ ವೇದಿಕೆಯ ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರ ನಟ-ನಟಿಯರಾದ ಸೋನಾಲ್ ಮೊಂಥೆರೊ, ಸಪ್ತಮಿ ಗೌಡ, ತರುಣ್ ಸುಧೀರ್ ರಂಜಿಸಿದರು.ಕೋಟ್...
ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಯ ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳ ಪರಿಚಯ ಕೂಡ ಇರಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ನಾನು ಯುಕ್ತಿ ಆರಂಭಿಸಿದೆ. ಕಳೆದ ಮೂರು ವರ್ಷದಿಂದ ಬಹಳ ಉತ್ತಮವಾಗಿ ನಡೆಯುತ್ತಿದೆ. ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಗೆ ಪಣ ತೊಡಬೇಕು. ಜೀವನದಲ್ಲಿ ಶಿಸ್ತು ಮತ್ತು ಶ್ರಮದಿಂದ ಕ್ಲಿಷ್ಟವಾದ ಸವಾಲುಗಳನ್ನು ಸುಲಭವಾಗಿ ಎದುರಿಸಬಹುದು ಎಂಬುದನ್ನು ಅರಿತುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು.
-ಪ್ರೊ.ಎಸ್.ವಿದ್ಯಾಶಂಕರ್, ಕುಲಪತಿ, ವಿಟಿಯು.ಬಾಕ್ಸ್...ಮನಸೂರೆಗೊಳಿಸಿದ ಸಾಂಸ್ಕೃತಿಕ ಕಲಾ ಸಂಗಮ
ವಿದ್ಯಾರ್ಥಿಗಳಲ್ಲಿರುವ ಸುಪ್ತ ಪತ್ರಿಭೆಗಳ ಅನಾವರಣಗೊಳಿಸುವುದಕ್ಕಾಗಿಯೇ ಆಯೋಜಿಸಿದ್ದ ಯುಕ್ತಿ ಹಲವು ಕಲೆಗಳ ಸಂಗಮವಾಗಿ ಮಾರ್ಪಟಿತ್ತು. ಮೊದಲ ದಿನವಾದ ಶುಕ್ರವಾರ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿ ಏಕ ವ್ಯಕ್ತಿ ನೃತ್ಯ, ಸಮೂಹ ನೃತ್ಯದಲ್ಲಿ ಭಾಗವಹಿಸಿದ್ದರು. ಒಂದು ಕಡೆ ನೃತ್ಯ ಪ್ರೇಕ್ಷರನ್ನು ಬೆರಗುಗೊಳಿಸಿದರೇ, ಮತ್ತೊಂದೆಡೆ ನಡೆದ ಫ್ಯಾಷನ್ ಶೋ ಪಾಶ್ಚಿಮಾತ್ಯ ಮತ್ತು ಭಾರತೀಯ ಸಾಂಪ್ರದಾಯಿಕ, ಆಧುನಿಕ ಉಡುಗೆ ತೊಡುಗೆಗಳ ಪ್ರದರ್ಶನ ನೋಡುಗರನ್ನು ಮನಸೂರೆಗೊಳಿಸಿತು. ಕೆಲವು ವಿದ್ಯಾರ್ಥಿಗಳ ತಂಡ ಪಾಶ್ಚಿಮಾತ್ಯ ಉಡುಗೆಗಳನ್ನು ತೊಟ್ಟು ಪ್ರದರ್ಶನ ನೀಡಿದರೇ, ಮತ್ತೊಂದು ವಿದ್ಯಾರ್ಥಿಗಳ ತಂಡ ಕುರುಕ್ಷೇತ್ರದಲ್ಲಿ ಬರುವ ಪಾತ್ರಗಳ ನಿರೂಪಿಸುವ ಮೂಲಕ ಪ್ರೇಕ್ಷರಿಗೆ ಗತ ವೈಭವ ಕಾಲವನ್ನು ಪರಿಚಯಿಸಿದರು.ಇದು ಮಾತ್ರವಲ್ಲದೆ, ವಾಣಿಜ್ಯ ವಿಭಾಗದಲ್ಲಿ ಎಚ್.ಆರ್, ಮಾರ್ಕೇಟಿಂಗ್ ಸೇರಿದಂತೆ ಹಲವು ಸ್ಪರ್ಧೆಗಳನ್ನು ನಡೆಸಿತು. ಎಂಜಿನಿಯರಿಂಗ್ ವಿಭಾಗಳು ಹಲವು ಸ್ಪರ್ಧೆಗಳನ್ನು ಆಯೋಜಿಸಿತ್ತು. ಇದರಿಂದಾಗಿ ಸಾವಿರಾರು ವಿದ್ಯಾರ್ಥಿಗಳು ತಮ್ಮ ಕ್ಷೇತ್ರದ ಅನುಗುಣವಾಗಿ ಸ್ಪರ್ಧೆಯಲ್ಲಿ ನಿರತವಾಗಿದ್ದರು.