ಶಂಕರಗುರು ರಬಕವಿ
ಕಲಘಟಗಿ:ರಾಜ್ಯದ ಹಿಂದುಳಿದ ತಾಲೂಕುಗಳಲ್ಲಿ ಒಂದಾದ ಕಲಘಟಗಿಯು ಅಭಿವೃದ್ಧಿ ದೃಷ್ಟಿಯಿಂದ ಈಗಲೂ ಮುಂದೇನಿಲ್ಲ. ಕ್ಷೇತ್ರದ ಶಾಸಕರು, ಸದ್ಯ ಕಾರ್ಮಿಕ ಹಾಗೂ ಉಸ್ತುವಾರಿ ಸಚಿವ ಸಂತೋಷ ಲಾಡ್ ಹಲವು ಪ್ರಯತ್ನಗಳ ಮಧ್ಯೆಯೂ ಕಲಘಟಗಿ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಬಜೆಟ್‌ನಲ್ಲಿ ಎದುರು ನೋಡುತ್ತಿದೆ.
ಮಲೆನಾಡು ಪ್ರದೇಶ ಕಲಘಟಗಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಕೃಷಿ ಹಾಗೂ ವಾಣಿಜ್ಯ ಚಟುವಟಿಕೆಗಳು ಗರಿಗೆದರಿವೆ. ಕಾಡಂಚಿನ ಗ್ರಾಮಗಳಿಂದ ಪಟ್ಟಣಕ್ಕೆ ಬೇಕಾದ ಸಾರಿಗೆ ಸೌಲಭ್ಯಗಳ ಕೊರತೆ ಇದೆ. ಸರ್ಕಾರಿ ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ. ಮಲೆನಾಡು ಪ್ರದೇಶದಲ್ಲಿರುವ ತಾಲೂಕಿನ ಅನೇಕ ಗ್ರಾಮಗಳ ರೈತರಿಗೆ ಆಗಾಗ ಕಾಡು ಪ್ರಾಣಿಗಳ ಕಾಟ ಜಾಸ್ತಿ ಇದ್ದು, ಬೆಳೆದ ಬೆಳೆ ಸಾಕಷ್ಟು ಹಾನಿಯಾಗಿರುವ ವರದಿಗಳಿವೆ. ಸಾಕು ಪ್ರಾಣಿಗಳು ಜೀವ ಸಹ ಬಿಟ್ಟಿವೆ. ಒಟ್ಟಾರೆ ಮೂಲಭೂತ ಸೌಕರ್ಯಗಳ ಕೊರತೆ ಇದ್ದು, ತಾಲೂಕು ಅಭಿವೃದ್ಧಿಗೆ ಹಾತೊರೆಯುತ್ತಿದೆ.ಕುಡಿಯುವ ನೀರಿಗೆ ತೊಂದರೆ:
ಮಲೆನಾಡು ಪ್ರದೇಶ ಹೊಂದಿದ್ದರೂ ಇತ್ತೀಚಿನ ವರ್ಷಗಳಲ್ಲಿ ಕುಡಿಯವ ನೀರಿಗೆ ಸಮಸ್ಯೆ ಎದುರಾಗಿದೆ. ಕೃಷಿಗೆ ಬೇಕಾದ ನೀರು ಬೇಡ್ತಿ ಹಳ್ಳದ ಮೂಲಕ ಬಹುತೇಕ ಗ್ರಾಮಗಳ ಹೊಲಗಳಿಗೆ ಮುಟ್ಟುತ್ತಿದ್ದರೂ, ಕುಡಿಯುವ ನೀರಿಗೆ ಮಾತ್ರ ಬರ ಎದುರಾಗಿದೆ. ಇದು ಜನತೆಯ ಆರೋಗ್ಯ ಸ್ವಾಸ್ಥ್ಯ ಹಾಳು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಪಟ್ಟಣಕ್ಕೆ ತುಮರಿಕೊಪ್ಪ ಗ್ರಾಮದ ಬೆಣಚಿ ಕೆರೆಯಿಂದ ಕುಡಿಯುವ ನೀರಿನ ಸರಬರಾಜು ಆಗುತ್ತದೆ. ಇಲ್ಲೊಂದು ನೀರಿನ ಶುದ್ಧೀಕರಣ ಘಟಕವೂ ಇದೆ. ಇಂತಹ ಘಟಕಗಳು ತಾಲೂಕಿನ ವಿವಿಧೆಡೆ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆಯಾಗಬೇಕು ಮತ್ತು ತಾಲೂಕಿನ ಈ ಸಮಸ್ಯೆಗೆ ರಾಜ್ಯ ಸರ್ಕಾರ ಸ್ಪಂದಿಸಿ ಸಮಸ್ಯೆಗೆ ಪರಿಹಾರ ಒದಗಿಸುತ್ತದೆಯೇ ಎಂಬುದನ್ನು ಜನತೆ ನಿರೀಕ್ಷಿಸುತ್ತಿದೆ.
ಪಟ್ಟಣದಲ್ಲಿರುವ ಬಹಳಷ್ಟು ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಕೊಳವೆ ಬಾವಿ ನೀರು ಕುಡಿಯುವಂತಾಗಿದೆ. ಸ್ಥಗಿತಗೊಂಡ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ ಕಾರ್ಯ ಶೀಘ್ರ ಆಗುವಂತೆ ನೋಡಿಕೊಳ್ಳಬೇಕಿದೆ ಎನ್ನುವುದು ಗ್ರಾಮಸ್ಥರ ಆಗ್ರಹ.ಯಾವುದೇ ಸರ್ಕಾರ ಇರಲಿ ಕಲಘಟಗಿ ಹಿಂದುಳಿದ ತಾಲೂಕು ಎಂದು ಹೇಳಿಕೊಂಡು ಬರುತ್ತಿವೆಯೇ ಹೊರತು ಮುಂದೆ ತರುವ ಪ್ರಯತ್ನಗಳು ಹೇಳಿಕೊಳ್ಳುವ ರೀತಿಯಲ್ಲಿ ನಡೆಯುತ್ತಿಲ್ಲ. ಈ ನಿಟ್ಟಿನಲ್ಲಿ ಈ ಬಾರಿಯಾದರೂ ಬಜೆಟ್‌ನಲ್ಲಿ ಬಂಪರ್ ಕೊಡುಗೆಗಾಗಿ ಕಾಯುತ್ತಿದ್ದೇವೆ ಎಂದು ಪಟ್ಟಣದ ನಿವಾಸಿ ನೌಶಾದ್ ಝಂಡೇವಾಲೆ ನಿರೀಕ್ಷಿಸುತ್ತಾರೆ.
ಕಲಘಟಗಿ ಪಟ್ಟಣದಲ್ಲಿ 24 ಗಂಟೆಗಳ ನೀರಿನ ಸರಬರಾಜು ಪೈಪ್‌ಲೈನ್‌ಗಳನ್ನು ಅಳವಡಿಸಲಾಗಿದೆ. ಈ ಪೈಪ್‌ಗಳಲ್ಲಿ ನೀರು ಬರುತ್ತಿಲ್ಲ. ಮೊದಲಿನ ನಳಗಳಲ್ಲಿನ ನೀರು ಶುದ್ಧವಾಗಿಲ್ಲ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬರದಂತೆ ಎಚ್ಚರ ವಹಿಸಬೇಕಿದೆ ಎಂದು ರಾಜೇಶ್ ಸೂರ್ಯವಂಶಿ ಹೇಳುತ್ತಾರೆ. ತೊಟ್ಟಿಲು ಕಲೆಗೆ ಬೇಕಿದೆ ಪ್ರೋತ್ಸಾಹಕಲಘಟಗಿ ಪಟ್ಟಣವು ಪ್ರಸಿದ್ಧ ಸಾಂಪ್ರದಾಯಿಕ ಮತ್ತು ಕಲಾತ್ಮಕ ತೊಟ್ಟಿಲುಗಳು ತವರೂರು. ತೊಟ್ಟಿಲಿನಲ್ಲಿ ಸೂಕ್ಷ್ಮ ಕೆತ್ತನೆ ಹಾಗೂ ಬಣ್ಣದ ಚಿತ್ರಗಳಿಗೆ ಹೆಸರುವಾಸಿ. ಸಾಗುವಾನಿ ಮರದಿಂದ ತಯಾರಾಗುವ ಈ ತೊಟ್ಟಿಲುಗಳ ಮೇಲೆ ಪುರಾಣದ ಕಥೆಗಳನ್ನು (ರಾಮಾಯಣ, ದಶಾವತಾರ) ಅರಗು ಬಳಸಿ ಬಣ್ಣಿಸಲಾಗುತ್ತದೆ. ನಟ ಯಶ್ ಮತ್ತು ಅಂಬರೀಶ್ ಕುಟುಂಬದಂತಹ ಗಣ್ಯರ ಮನೆಗಳಿಗೆ ಕಲಘಟಗಿ ತೊಟ್ಟಿಲು ಹೋಗಿದೆ. ಈ ಕಲೆಯು ಮತ್ತಷ್ಟು ವೃದ್ದಿಯಾಗುವಂತೆ ರಾಜ್ಯ ಸರ್ಕಾರ ಗಮನ ಹರಿಸಬೇಕಿದೆ ಎನ್ನುವುರು ಸ್ಥಳೀಯರ ಒತ್ತಾಯ.