ಗೋಕರ್ಣದಲ್ಲೂ ನೀರಿಗೆ ಬರ!

| Published : Apr 02 2024, 01:08 AM IST

ಸಾರಾಂಶ

ಈಗಾಗಲೇ ಗುಂಡಬಾಳದಲ್ಲಿ ನದಿಯ ನೀರು ಬತ್ತಿರುವುದರಿಂದ ಈ ಸಂಗ್ರಹಣಾ ಕೇಂದ್ರದಲ್ಲಿ ಅಗತ್ಯಕ್ಕೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ.

ಗೋಕರ್ಣ: ರಾಜ್ಯದ ಪ್ರಮುಖ ಪ್ರವಾಸಿ ತಾಣ ಗೋಕರ್ಣದಲ್ಲಿ ಬೇಸಿಗೆಯ ಪ್ರಾರಂಭದಲ್ಲೇ ನೀರಿನ ಅಭಾವದ ಬಿಸಿ ತಟ್ಟಿದೆ.

ನಿತ್ಯ ಮನೆ ಮನೆಗೆ ನೀರು ಪೂರೈಕೆಯಾಗುತ್ತಿದ್ದ ಜಲಜೀವನ ಮಿಷನ್ ಯೋಜನೆಯ ನೀರಿನ ಸರಬರಾಜು ಮೂರು ದಿನದಿಂದ ಬಂದಾಗಿದೆ. ಇದಕ್ಕೆ ಮುಖ್ಯ ಕಾರಣ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಅಡಿ ಮಾದನಗೇರಿ ಬೃಹತ್ ನೀರು ಸಂಗ್ರಹಣಾ ಕೇಂದ್ರದಲ್ಲಿ ನೀರಿನ ಕೊರತೆ.

ಈಗಾಗಲೇ ಗುಂಡಬಾಳದಲ್ಲಿ ನದಿಯ ನೀರು ಬತ್ತಿರುವುದರಿಂದ ಈ ಸಂಗ್ರಹಣಾ ಕೇಂದ್ರದಲ್ಲಿ ಅಗತ್ಯಕ್ಕೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ಗ್ರಾಮ ಪಂಚಾಯಿತಿ ಎಚ್ಚೆತ್ತು ಇಲ್ಲಿನ ಬಾವಿ, ಬೋರ್‌ವೆಲ್‌ಗಳ ದುರಸ್ತಿಗೊಳಿಸುವ ಮೂಲಕ ಜಲಮೂಲ ಸಂರಕ್ಷಣೆಗೆ ಮುಂದಾಗಬೇಕಿದೆ. ಇಲ್ಲವಾದರೆ ಮುಂದಿನ ದಿನದಲ್ಲಿ ಪರಿಸ್ಥಿತಿ ಗಂಭೀರವಾಗಲಿದೆ.

ಪ್ರಸ್ತುತ ಸ್ಥಿತಿ: ಪ್ರತಿದಿನ ನಾಲ್ಕು ಲಕ್ಷ ಲೀಟರ್ ನೀರು ಸಂಗ್ರಹವಾಗಿ ಒಟ್ಟು 1700 ಮನೆಗಳಿಗೆ ನೀಡಲಾಗುತ್ತಿತ್ತು. ಬಳಿಕ ಎರಡು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿತ್ತು. ಪ್ರಸ್ತುತ ನೀರು ಬರದೆ ಮೂರು ದಿನವಾಗಿದ್ದು, ವಾರಕೊಮ್ಮೆ ನೀರು ದೊರೆಯುತ್ತಿದೆಯೆ ಎಂಬ ಆತಂಕ ಪ್ರಾರಂಭವಾಗಿದೆ.

ಹಲವು ಮನೆಗಳ ಬಾವಿ ನೀರು ಬತ್ತಿದ್ದು, ತೀವ್ರ ತೊಂದರೆಯಲ್ಲಿದ್ದಾರೆ. ಪಂಚಾಯಿತಿ ಯಾವ ಸಮಯದಲ್ಲಿ ಎಷ್ಟು ದಿನಕ್ಕೆ ನೀರು ಬಿಡಲಾಗುತ್ತದೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಬೇಕಿದೆ. ಗುಂಡಬಾಳದಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿರುವುದರಿಂದ ಒಂದು ವಾರದಲ್ಲಿ ಮಾದನಗೇರಿಯಿಂದ ಬರುವ ನೀರು ದೊರೆಯುವುದು ಅನುಮಾನವಾಗಿದೆ.

ನಿರ್ಲಕ್ಷ್ಯ: ಗುಂಡಬಾಳದ ನೀರು ಸಮರ್ಪಕವಾಗಿ ಪೂರೈಕೆಯಾಗುವ ಮೊದಲು ಇಲ್ಲಿನ ವಿವಿಧ ಬಾವಿಗಳು ಮತ್ತು ಬೋರ್‌ವೆಲ್‍ಗಳಿಂದ ನೀರು ಸಂಗ್ರಹಿಸಿ ಮನೆಗೆ ನೀಡಲಾಗುತ್ತಿತ್ತು. ಆದರೆ ದಿನಕ್ಕೆ ಆರು ಲಕ್ಷ ಲೀಟರ್ ಅಧಿಕ ನೀರು ಮಾದನಗೇರಿಯಿಂದ ಬರುತ್ತಿದ್ದಂತೆ ಇಲ್ಲಿನ ಜಲಮೂಲ ಕಡೆಗಣಿಸಲಾಗಿದೆ ಎನ್ನಲಾಗಿದ್ದು, ಕಳೆದ ವರ್ಷ ಈ ಕುರಿತು ಲಕ್ಷ್ಯ ವಹಿಸಬೇಕಿತ್ತು. ಆದರೆ ನಿರ್ಲಕ್ಷ್ಯ ವಹಿಸಿದ ಪರಿಣಾಮ ಈ ಬಾರಿ ಪರಿತಪಿಸುವಂತಾಗಿದೆ.

ಸಣ್ಣ ಬಿಜ್ಜೂರು, ಚೌಡಗೇರಿ, ತಲಗೇರಿ, ಬಂಡಿಕೇರಿ ಬಾವಿಗಳಿಂದ ಹಾಗೂ ಆರು ಕೊಳವೆ ಬಾವಿಯಿಂದ ಈ ಮೊದಲು ನೀರು ನೀಡಲಾಗುತ್ತಿತ್ತು. ಆದರೆ ನಿರ್ವಹಣೆಯಿಲ್ಲದೆ ಪೈಪ್‌ಲೈನ್‌ ಮತ್ತಿತರ ಸಮಸ್ಯೆಗಳಿದ್ದು, ಇದನ್ನು ಪಂಚಾಯಿತಿ ಸರಿಪಡಿಸಿ ನೀರು ಪೂರೈಕೆ ಸಿದ್ಧತೆ ಮಾಡಿಕೊಳ್ಳಬೇಕಿದೆ. ಆದರೆ ಈ ಜಲ ಮೂಲವು ಬತ್ತಿದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ.

ಮಳೆ ನೀರು ಇಂಗಿಸುವುದು, ಕೆರೆಗಳ ಸಂರಕ್ಷಣೆ, ನೀರು ಇರುವ ಬಾವಿಯನ್ನು ಬಳಸಿದರೆ ಸಮಸ್ಯೆ ನೀಗಿಸಬಹುದು. ಪ್ರತಿ ಮನೆ ಹಾಗೂ ಕಚೇರಿಗಳಲ್ಲಿ ಮಳೆ ನೀರು ಇಂಗಿಸುವ ಕುರಿತು ಜಾಗೃತಿ ಮೂಡಿಸಿ ಅಂತರ್ಜಲ ಹೆಚ್ಚಿಸುವ ಕಾರ್ಯ ಮಾಡಬೇಕಿದೆ. ಅಲ್ಲದೇ ಇಲ್ಲಿನ ಹಲವಾರು ಕೆರೆಗಳಿವೆ. ಅವುಗಳನ್ನು ಅಭಿವೃದ್ದಿಪಡಿಸಿ ಮುಂದಿನ ಬೇಸಿಗೆಯಲ್ಲಾದರೂ ನೀರು ಇರುವಂತೆ ನೋಡಿಕೊಳ್ಳಬೇಕಿದೆ. ಇದಲ್ಲದೇ ಇಲ್ಲಿನ ಮುಖ್ಯ ಕಡಲತೀರದಲ್ಲಿರುವ ಗ್ರಾಮ ಪಂಚಾಯಿತಿ ಜಾಗದಲ್ಲೇ ಸಾಕಷ್ಟು ನೀರು ಇರುವ ಎರಡು ಬಾವಿಯಿದ್ದು, ಇದನ್ನು ಅಭಿವೃದ್ಧಿಪಡಿಸಿ ನೀರು ಪೂರೈಕೆಗೆ ಕ್ರಮ ತೆಗೆದುಕೊಳ್ಳಬೇಕಿದೆ.

ಬೇಕಿದೆ ಕ್ರಮ: ಮನೆ ಮನೆಗೆ ನೀರಿನ ಸಂಪರ್ಕ ನೀಡಿದ ಬಳಿಕ ಅದನ್ನು ಮನೆ ಬಳಕೆಗಾಗಿಯೇ ಬಳೆಸುತ್ತಾರೆಯೇ ಎಂಬುದನ್ನು ಪಂಚಾಯಿತಿ ಅಧಿಕಾರಿಗಳು ಪರಿಶೀಲಿಸಬೇಕಿದೆ. ಕೆಲವೊಂದು ಕಡೆ ಸಾಕಷ್ಟು ನೀರಿದ್ದರೂ ನಳದ ಸಂಪರ್ಕ ಪಡೆದು ಹೂತೋಟ, ಕೃಷಿಗೆ ಬಳಸುತ್ತಿದ್ದು, ಇನ್ನೂ ಹಲವೆಡೆ ರಸ್ತೆಯ ಧೂಳು ಬರದಂತೆ ಸಿಂಪರಣೆ ಮಾಡುತ್ತಿದ್ದು, ಹೀಗೆ ನೀರು ಪೋಲು ಮಾಡುವವರ ಮೇಲೂ ಕ್ರಮ ಜರುಗಿಸಬೇಕಿದೆ.

ಹನೇಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕಡಮೆ, ಬಿದ್ರೆಗೇರಿ ಭಾಗ, ತೊರ್ಕೆಯ ಹೊಸ್ಕಟ್ಟಾ ಮತ್ತಿರ ಕಡೆ ಸಹ ನೀರಿನ ಅಭಾವ ಉಂಟಾಗುತ್ತಿದೆ. ಮಳೆಗಾಲದವರೆಗೆ ನೀರು ಪಡೆಯುವುದೇ ಸವಾಲಾಗಿದೆ.ಸಮರ್ಪಕ ಬಳಕೆ: ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಬಾವಿ ಮತ್ತು ಕೊಳವೆ ಬಾವಿಯನ್ನು ಸರಿಪಡಿಸುವಂತೆ ಗ್ರಾಪಂ ಅಧಿಕಾರಿಗಳಿಗೆ ಎಂಟು ತಿಂಗಳ ಹಿಂದೆ ತಿಳಿಸಲಾಗಿದೆ. ಆದರೆ ಯಾವುದೇ ಕಾರ್ಯವಾಗಿಲ್ಲ. ಮತ್ತೊಮ್ಮೆ ತ್ವರಿತವಾಗಿ ಸುಸ್ಥಿಯಲ್ಲಿ ಇಡಲು ಮನವಿ ಮಾಡುತ್ತೇನೆ. ಇಲ್ಲಿಯ ನೀರನ್ನು ಸಮರ್ಪಕವಾಗಿ ಬಳಸಿದರೆ ಸ್ವಲ್ಪ ಪ್ರಮಾಣದಲ್ಲಿ ಅಭಾವ ತಪ್ಪಿಸಬಹುದಾಗಿದೆ ಎಂದು ಗೋಕರ್ಣ ಗ್ರಾಪಂ ಸದಸ್ಯ ಗಣಪತಿ ನಾಯ್ಕ ತಿಳಿಸಿದರು.