ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಬೇಬಿಗ್ರಾಮದ ಶ್ರೀದುರ್ದಂಡೇಶ್ವರ ಮಹಾಂತ ಶಿವಯೋಗಿಗಳ ಮಠದ ವತಿಯಿಂದ ಆಗಸ್ಟ್ 13 ರಂದು ಮಹಾತಪಸ್ವಿ, ಶತಾಯುಷಿ, ಲಿಂಗೈಕ್ಯ ಶ್ರೀಮರೀದೇವರು ಶಿವಯೋಗಿ ಮಹಾಸ್ವಾಮೀಜಿಗಳ 17 ನೇ ವರ್ಷದ ಪುಣ್ಯಸ್ಮರಣೆ ಹಾಗೂ 9ನೇ ವರ್ಷದ ಮಹಾ ರಥೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಠದ ಪೀಠಾಧ್ಯಕ್ಷ ಡಾ.ಶ್ರೀತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಹೇಳಿದರು.ಮಠದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್‍ಯಕ್ರಮ ಸಾನ್ನಿಧ್ಯವನ್ನು ತಾವು ವಹಿಸಲಿದ್ದು, ನೆಲಮಂಗಲದ ಶಿವಗಂಗಾ ಮಠದ ಶ್ರೀಮಲಯಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಅವಧೂತ ಪೀಠದ ಶ್ರೀವಿನಯ್ ಗುರೂಜಿ ದಿವ್ಯ ನೇತೃತ್ವ ವಹಿಸಲಿದ್ದಾರೆ. ರೇವಣ ಸಿದ್ಧೇಶ್ವರ ಶಿವಾಚಾರ್ಯರು ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ಮಹಾರಥೋತ್ಸವಕ್ಕೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಪತ್ನಿ ನಾಗಮ್ಮ ಪುಟ್ಟರಾಜು ಚಾಲನೆ ನೀಡಲಿದ್ದಾರೆ. ಕರ್ನಾಟಕ ವಿಧಾನಸಭೆ ಉಪಾಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಭಾಗಿಯಾಗಲಿದ್ದಾರೆ ಎಂದರು.ಹಿರಿಯ ಶ್ರೀಗಳ ಭಾವಚಿತ್ರಕ್ಕೆ ಬಿಜೆಪಿ ರಾಜ್ಯ ರೈತಮೋರ್ಚಾ ಉಪಾಧ್ಯಕ್ಷ ಎಂ.ರುದ್ರೇಶ್ ಪುಷ್ಪಾರ್ಚನೆ ಮಾಡಲಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ಎಸ್.ದಯಾಶಂಕರ್ ಅವರಿಗೆ ಮಹಾಚೇತನ ಶ್ರೀಮರಿದೇವರು ಶಿವಯೋಗಿ ‘ಜೀವನದಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ’ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.
ಉಪಸಭಾಪತಿಗಳ ಆಪ್ತ ಕಾರ್‍ಯದರ್ಶಿ ಡಾ.ಶ್ರೀಪಾದ ಎಸ್.ಬಿ ಅವರು ಅಭಿನಂದನಾ ನುಡಿ ನುಡಿಯಲಿದ್ದಾರೆ. ಉಪವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ಬಿಇಒ ಧರ್ಮಶೆಟ್ಟಿ ಬೆಳ್ಳಿಪದಕ ಪ್ರದಾನ ಮಾಡಲಿದ್ದಾರೆ. ಗಾಯಕಿ ಸರಿಗಮಪ ಸೀಸನ್ 21ರ ವಿಜೇತೆ ಶಿವಾನಿ ಶಿವದಾಸ್‌ಸ್ವಾಮಿ ಗಾಯನ ಮತ್ತು ಗುರುರಕ್ಷೆ ನೀಡಲಿದ್ದಾರೆ ಎಂದರು.ಅತಿಥಿಗಳಾಗಿ ಎನ್.ಎಸ್.ಮಹದೇವಪ್ರಸಾದ್, ಮೈಷುಗರ್ ಮಾಜಿ ಅಧ್ಯಕ್ಷ ನಾಗರಾಜಪ್ಪ, ವೀರಶೈವ ಲಿಂಗಾಯತ ಜಿಲ್ಲಾಧ್ಯಕ್ಷ ಎಸ್.ಆನಂದ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಮೈಸೂರು ಡೈರಿ ಮಾಜಿ ನಿರ್ದೇಶಕ ಎಸ್.ಸಿ.ಅಶೋಕ್ ಸೇರಿ ಅನೇಕ ಗಣ್ಯರು, ಮಠದ ಭಕ್ತರು, ಸಮುದಾಯದ ಮುಖಂಡರು ಭಾಗವಹಿಸಲಿದ್ದಾರೆ.
ಡಿಎಂಎಸ್ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ಬೆಳ್ಳಿಪದಕವನ್ನು ವಿತರಣೆ ಮಾಡಲಾಗುವುದು, ಸಂಜೆ ಸಾಂಸ್ಕೃತಿಕ ಕಾರ್‍ಯಕ್ರಮ ಆಯೋಜನೆ ಮಾಡಲಾಗಿದೆ. ಕಾರ್‍ಯಕ್ರಮಕ್ಕೆ ಆಗಮಿಸುವ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.ಸುದ್ಧಿಗೋಷ್ಠಿಯಲ್ಲಿ ಮಠದ ಕಾರ್‍ಯದರ್ಶಿ ಟಿ.ಪಿ.ಶಿವಕುಮಾರ್, ಅ.ಭಾ.ವೀರಶೈವ ಲಿಂಗಾಯತ ಸಮುದಾಯದ ಅಧ್ಯಕ್ಷ ಶಿವಕುಮಾರ್, ಮಠದ ನಿರ್ದೇಶಕ ಬಿ.ಎಸ್.ಸಿದ್ದಲಿಂಗದೇವರು ಹಾಜರಿದ್ದರು.