ವಿ.ಸಿ.ಫಾರಂನಲ್ಲಿ ಸಮಗ್ರ ಪೋಷಕಾಂಶಗಳ ಸರ್ಟಿಫಿಕೇಟ್ ಕೋರ್ಸ್ ಆರಂಭ

| Published : Jul 17 2024, 12:48 AM IST

ವಿ.ಸಿ.ಫಾರಂನಲ್ಲಿ ಸಮಗ್ರ ಪೋಷಕಾಂಶಗಳ ಸರ್ಟಿಫಿಕೇಟ್ ಕೋರ್ಸ್ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಆಹಾರ ಉತ್ಪಾದನೆ ಕಡಿಮೆ ಇದ್ದಂತಹ ಸಂದರ್ಭದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸಿ ಉತ್ಪಾದನೆಯನ್ನು ಹೆಚ್ಚಿಸಲಾಯಿತು. ಆದರೆ, ರಸಗೊಬ್ಬರ ಬಳಕೆಯಿಂದ ಮಣ್ಣಿನಲ್ಲಿರುವ ಸಾವಯವ ಪೋಷಕಾಂಶಗಳು ನಾಶವಾಗುತ್ತಿದ್ದು, ಮತ್ತೆ ಆ ಪೋಷಕಾಂಶಗಳನ್ನು ಮಣ್ಣಿಗೆ ಮರುಪೂರಣ ಮಾಡಬೇಕಿರುವುದು ಅಗತ್ಯವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ವಿ.ಸಿ.ಫಾರಂನ ವಲಯ ಕೃಷಿ ಸಂಶೋಧನಾ ಕೇಂದ್ರ, ಹೈದರಾಬಾದ್‌ನ ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆ, ಮತ್ತು ಸಿಬ್ಬಂದಿ ತರಬೇತಿ ಘಟಕ, ಬೆಂಗಳೂರು ವಿಸ್ತರಣಾ ನಿರ್ದೇಶನಾಲಯದ ವತಿಯಿಂದ ಜು.೧೫ ರಿಂದ ೨೯ರವರೆಗೆ ವಿ.ಸಿ.ಫಾರಂ ಡಾ.ಲೆಸ್ಲೀ ಸಿ.ಕೋಲ್ಮನ್ ಹಾಲ್‌ನಲ್ಲಿ ಸಿಬ್ಬಂದಿ ತರಬೇತಿ ಘಟಕದ ಸರ್ಟಿಫಿಕೇಟ್ ಕೋರ್ಸ್ ಮತ್ತು ಸಮಗ್ರ ಪೋಷಕಾಂಶಗಳ ನಿರ್ವಹಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಬೆಂಗಳೂರು ಕೃಷಿ ವಿವಿ ಸಿಬ್ಬಂದಿ ತರಬೇತಿ ಘಟಕದ ಮುಖ್ಯಸ್ಥ ಡಾ.ಕೆ.ಶಿವರಾಂ ಮಾತನಾಡಿ, ದೇಶದಲ್ಲಿ ಆಹಾರ ಉತ್ಪಾದನೆ ಕಡಿಮೆ ಇದ್ದಂತಹ ಸಂದರ್ಭದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸಿ ಉತ್ಪಾದನೆಯನ್ನು ಹೆಚ್ಚಿಸಲಾಯಿತು. ಆದರೆ, ರಸಗೊಬ್ಬರ ಬಳಕೆಯಿಂದ ಮಣ್ಣಿನಲ್ಲಿರುವ ಸಾವಯವ ಪೋಷಕಾಂಶಗಳು ನಾಶವಾಗುತ್ತಿದ್ದು, ಮತ್ತೆ ಆ ಪೋಷಕಾಂಶಗಳನ್ನು ಮಣ್ಣಿಗೆ ಮರುಪೂರಣ ಮಾಡಬೇಕಿರುವುದು ಅಗತ್ಯವಾಗಿದೆ ಎಂದರು.

ರೈತರು ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ ಸಾವಯವ, ಜೈವಿಕ ಹಾಗೂ ಹಸಿರೆಲೆ ಗೊಬ್ಬರನ್ನು ಹೆಚ್ಚಾಗಿ ಉಪಯೋಗಿಸಬೇಕು. ಮಣ್ಣಿನ ಸಾರ ಹೆಚ್ಚಿಸುವಂತಹ ಸೂಕ್ಷ್ಮಾಣು ಜೀವಿಗಳಿಗೆ ಮರುಜೀವ ನೀಡಬೇಕಿದೆ. ರಸಗೊಬ್ಬರದಿಂದ ವಿಷಯುಕ್ತವಾಗಿರುವ ಭೂಮಿಯನ್ನು ಫಲವತ್ತತೆಯ ಕಡೆಗೆ ಕೊಂಡೊಯ್ಯುವುದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ ಎಂದು ನುಡಿದರು.

ಕೋರ್ಸ್ ಉದ್ಘಾಟಿಸಿದ ವಿ.ಸಿ.ಫಾರಂ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಪಿ.ಎಸ್.ಫಾತಿಮಾ ಮಾತನಾಡಿ, ರೈತರು ಕೃಷಿ ಪದ್ಧತಿಯಲ್ಲಿ ಬದಲಾವಣೆಯನ್ನು ತಂದುಕೊಳ್ಳಬೇಕಿದೆ. ರಸಗೊಬ್ಬರ ಬಳಕೆಯನ್ನು ಕಡಿಮೆ ಮಾಡಿ ಸಾವಯವ, ಜೈವಿಕ, ಹಸಿರೆಲೆ, ನೈಸರ್ಗಿಕ ಗೊಬ್ಬರವನ್ನು ಉಪಯೋಗಿಸಿ ಕೃಷಿಯಲ್ಲಿ ತೊಡಗಬೇಕಿದೆ. ಇದು ಮಣ್ಣಿನ ಫಲವತ್ತತೆ ಹೆಚ್ಚಿಸುವುದರೊಂದಿಗೆ ಗುಣಮಟ್ಟದ ಆಹಾರೋತ್ಪನ್ನಗಳ ಉತ್ಪಾದನೆಗೆ ಸಹಕಾರಿಯಾಗಲಿದೆ ಎಂದರು.

ಕೃಷಿ ಆರಂಭಕ್ಕೂ ಮುನ್ನವೇ ಹಸಿರೆಲೆ ಗೊಬ್ಬರವನ್ನು ಬೆಳೆದು ನಂತರ ಬೆಳೆ ಬೆಳೆಯುವುದರಿಂದ ಇಳುವರಿಯೂ ಉತ್ತಮವಾಗಿರುತ್ತದೆ. ಸಾವಯವ ಕೃಷಿ, ನೈಸರ್ಗಿಕ ಕೃಷಿಯನ್ನು ಅನುಸರಿಸುವುದರಿಂದ ಭೂಮಿಗೆ ಪೋಷಕಾಂಶಗಳನ್ನು ನೀಡಿದಂತಾಗುವುದು. ಇದರಿಂದ ಮಣ್ಣಿನ ಆರೋಗ್ಯವೂ ಉತ್ತಮಗೊಳ್ಳಲಿದೆ. ಕೃಷಿ ಉತ್ಪನ್ನಗಳಲ್ಲಿ ಪೋಷಕಾಂಶಗಳ ಆಗರದಿಂದ ಮನುಷ್ಯನ ಆರೋಗ್ಯಪೂರ್ಣ ಆಹಾರ ಸೇವನೆಗೆ ಅನುಕೂಲವಾಗಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹ ಸಂಶೋಧನಾ ನಿರ್ದೇಶಕ ಡಾ.ಎಸ್.ಶಿವಕುಮಾರ್ ವಹಿಸಿದ್ದರು. ಸಹ ವಿಸ್ತರಣಾ ನಿರ್ದೇಶಕ ಡಾ.ಎ.ಡಿ.ರಂಗನಾಥ್, ಸುತ್ತೂರು ಕೆವಿಕೆ ಮುಖ್ಯಸ್ಥ ಬಿ.ಎನ್.ಜ್ಞಾನೇಶ್, ಪ್ರಾಧ್ಯಾಪಕ ಡಾ.ಕೆ.ವಿ.ಕೇಶವಯ್ಯ, ಅನುವುಗಾರರಾದ ಎಸ್.ಎನ್.ಅರ್ಪಿತಾ ಇದ್ದರು.