ನೇರ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಸಿಲಿಂಡರ್ ಸಿಗದಿದ್ದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು, ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ವಾಣಿಜ್ಯ ಸಿಲಿಂಡರ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ.
ಗದಗ: ಜಿಲ್ಲೆಯಲ್ಲಿ ಶನಿವಾರದಿಂದ ವಾಣಿಜ್ಯ ಗ್ಯಾಸ್ ಸಿಲಿಂಡರ್ ಪೂರೈಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ.ಜಿಲ್ಲಾದ್ಯಂತ ಒಟ್ಟು 3156 ವಾಣಿಜ್ಯ ಸಂಪರ್ಕಗಳಿವೆ. ಇವುಗಳಿಗೆ ಪೂರೈಕೆ ನಿಂತುಹೋಗಿರುವುದರಿಂದ ಹೋಟೆಲ್ ಉದ್ಯಮ ಮತ್ತು ಸಣ್ಣ ಕೈಗಾರಿಕೆಗಳು ಕಂಗೆಟ್ಟಿವೆ. ಶುಕ್ರವಾರದಿಂದಲೇ ಜಾರಿಗೆ ಬಂದಿರುವ ಈ ಅನಿರೀಕ್ಷಿತ ಪೂರೈಕೆ ಸ್ಥಗಿತದ ನೇರ ಹೊಡೆತ ಹೋಟೆಲ್‌ಗಳ ಮೇಲೆ ಬಿದ್ದಿದೆ. ಇದರ ಜತೆಗೆ ಮನೆಗಳಲ್ಲಿ ನಡೆಯುವ ಮದುವೆ, ಮುಂಜುವೆ ಹಾಗೂ ಇತರೆ ಸಾಮೂಹಿಕ ಸಮಾರಂಭಗಳಿಗೆ ಅಡುಗೆ ಮಾಡಲು ಸಿಲಿಂಡರ್ ಸಿಗದೆ ಸಾರ್ವಜನಿಕರು ಪರದಾಡುವಂತಾಗಿದೆ. ವಾಣಿಜ್ಯ ಸಿಲಿಂಡರ್‌ಗಳ ಕೊರತೆಯಿಂದಾಗಿ ಅನೇಕ ಶುಭ ಕಾರ್ಯಕ್ರಮಗಳ ಸಂಭ್ರಮಕ್ಕೆ ಅಡಚಣೆ ಉಂಟಾಗಿದೆ.ನೇರ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಸಿಲಿಂಡರ್ ಸಿಗದಿದ್ದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು, ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ವಾಣಿಜ್ಯ ಸಿಲಿಂಡರ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ. ಅನಿವಾರ್ಯ ಪರಿಸ್ಥಿತಿಯಲ್ಲಿರುವ ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಕೇಳಿದಷ್ಟು ಹಣ ನೀಡಿ ಸಿಲಿಂಡರ್ ಪಡೆಯುವ ಅಸಹಾಯಕ ಸ್ಥಿತಿ ನಿರ್ಮಾಣವಾಗಿದೆ.
ಆತಂಕದ ನೆರಳು: ಜಿಲ್ಲೆಯಲ್ಲಿ 291734 ಮನೆ ಬಳಕೆಯ ಗ್ಯಾಸ್ ಸಂಪರ್ಕಗಳಿವೆ. ವಾಣಿಜ್ಯ ಸಿಲಿಂಡರ್ ಸಿಗದ ಕಾರಣ ಅನೇಕರು ಮನೆ ಬಳಕೆಯ ಸಿಲಿಂಡರ್‌ಗಳನ್ನೇ ವಾಣಿಜ್ಯ ಉದ್ದೇಶಕ್ಕೆ ಬಳಸುವ ಸಾಧ್ಯತೆ ದಟ್ಟವಾಗಿದೆ. ಹೀಗಾದಲ್ಲಿ ಮುಂಬರುವ ದಿನಗಳಲ್ಲಿ ಸಾಮಾನ್ಯ ಗ್ರಾಹಕರಿಗೂ ಸಿಲಿಂಡರ್ ಕೊರತೆ ಎದುರಾಗುವ ಭೀತಿ ಎದುರಾಗಿದೆ.ವದಂತಿಗೆ ಕಿವಿಗೊಡದಿರಿ: ಡಿಸಿ ಸಿಲಿಂಡರ್ ಜಿಲ್ಲೆಯ ವಾಣಿಜ್ಯ ಸಿಲಿಂಡರ್ ಪೂರೈಕೆ ಸ್ಥಗಿತ ಹಾಗೂ ಗೃಹ ಬಳಕೆದಾರರಲ್ಲಿ ಉಂಟಾಗುತ್ತಿರುವ ಗೊಂದಲ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಶುಕ್ರವಾರ ಸಂಜೆ ತುರ್ತು ಸಭೆ ನಡೆಸಲಾಯಿತು.ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಮಾತನಾಡಿ, ಮಧ್ಯಪ್ರಾಚ್ಯದಲ್ಲಿ ಜರುಗುತ್ತಿರುವ ಯುದ್ಧದಂತಹ ಸನ್ನಿವೇಶಗಳ ಹಿನ್ನೆಲೆ ಎಲ್ಪಿಜಿ ಗೃಹಬಳಕೆ ಆಡುಗೆ ಅನಿಲ ಸಿಲಿಂಡರ್‌ಗಳ ಪೂರೈಕೆಯಲ್ಲಿ ವೃತ್ತಯ ಆಗುತ್ತಿರುವ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಗೊಂದಲ ಸೃಷ್ಟಿ ಮಾಡುವಂತಹ ವಿಷಯಗಳು, ವಿಡಿಯೋಗಳು ಬಿತ್ತರವಾಗುತ್ತಿವೆ.ದೇಶಾದ್ಯಂತ ಎಲ್ಪಿಜಿ ಉತ್ಪಾದನೆ ಹೆಚ್ಚಿರುವುದರಿಂದ, ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಲಭ್ಯವಿರುವುದರಿಂದ ಗ್ರಾಹಕರು ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗುವ ಅವಶ್ಯಕತೆ ಇರುವುದಿಲ್ಲ. ವದಂತಿಗಳಿಗೆ ಕಿವಿಗೊಟ್ಟು ಹೆಚ್ಚುವರಿಯಾಗಿ ದಾಸ್ತಾನು ಮಾಡಿಕೊಳ್ಳಬಾರದು ಎಂದರು.
ಗ್ರಾಹಕರು ಪ್ರತಿ ಗೃಹಬಳಕೆಯ ಸಿಲಿಂಡರನ್ನು ನೋಂದಣಿ ಮಾಡಿ ಡಿಲೆವರಿ ಪಡೆದ ನಂತರ 25 ದಿನಗಳ ನಂತರ ಮತ್ತೊಂದು ಸಿಲಿಂಡರ್ ಬುಕ್ ಮಾಡಲು ಅವಕಾಶವಿರುತ್ತದೆ. ಈ ಎಲ್ಲ ವಿಷಯಗಳನ್ನು ಜಿಲ್ಲೆಯ ಎಲ್ಲ ಎಲ್ಪಿಜಿ ಗ್ರಾಹಕರು ಗಮನಿಸಬೇಕು. ಜಿಲ್ಲೆಯಲ್ಲಿ ಎಲ್ಪಿಜಿ ಗೃಹಬಳಕೆಯ ಸಿಲಿಂಡರ್‌ಗಳ ಕೊರತೆ ಇಲ್ಲ. ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವದಂತಿಗಳಿಗೆ ಗ್ರಾಹಕರು, ಕಿವಿಗೊಡಬಾರು ಒಂದು ವೇಳೆ ಗ್ರಾಹಕರಿಗೆ ಯಾವುದೇ ಸಮಸ್ಯೆಗಳು ಇದ್ದಲ್ಲಿ ಇಲಾಖೆಯನ್ನು ಸಂಪರ್ಕಿಸಬೇಕು ಎಂದು ತಿಳಿಸಿದ್ದಾರೆ.