ಮದ್ಯಪಾನ ಮಾಡಿ ವಾಹನ ಚಲಾಯಿಸಿ ಅಪಘಾತಕ್ಕೀಡಾಗಿ ಇನ್ನೊಬ್ಬರ ಪ್ರಾಣಕ್ಕೆ ತೊಂದರೆ ಮಾಡುವ ಪ್ರಕರಣಗಳಲ್ಲಿ ಇನ್ನು ಮುಂದೆ ಶಿಕ್ಷಾರ್ಹ ನರಹತ್ಯೆ (Culpable homicide) ಕಾಯ್ದೆಯಡಿ 10 ವರ್ಷಗಳವರೆಗೆ ಜೈಲು ಶಿಕ್ಷೆಗೊಳಪಡಿಸುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಎಚ್ಚರಿಕೆ
ಮಂಗಳೂರು: ಮದ್ಯಪಾನ ಮಾಡಿ ವಾಹನ ಚಲಾಯಿಸಿ ಅಪಘಾತಕ್ಕೀಡಾಗಿ ಇನ್ನೊಬ್ಬರ ಪ್ರಾಣಕ್ಕೆ ತೊಂದರೆ ಮಾಡುವ ಪ್ರಕರಣಗಳಲ್ಲಿ ಇನ್ನು ಮುಂದೆ ಶಿಕ್ಷಾರ್ಹ ನರಹತ್ಯೆ (Culpable homicide) ಕಾಯ್ದೆಯಡಿ 10 ವರ್ಷಗಳವರೆಗೆ ಜೈಲು ಶಿಕ್ಷೆಗೊಳಪಡಿಸುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಪೊಲೀಸ್ ನೇತೃತ್ವದಲ್ಲಿ ‘ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಪ್ರಾಪ್ತರಿಗೆ ವಾಹನ ನೀಡುವುದು ಅಥವಾ ಕುಡಿದು ವಾಹನ ಚಾಲನೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ನಿಯಮ ಪಾಲನೆಯಾಗುತ್ತಿಲ್ಲ. ಮಂಗಳೂರು ನಗರ ವ್ಯಾಪ್ತಿಯಲ್ಲಿ 2025ರ ಸಾಲಿನಲ್ಲಿ ಸಂಭವಿಸಿದ 171 ರಸ್ತೆ ಅಪಘಾತಗಳಲ್ಲಿ 25 ಪ್ರಕರಣಗಳಲ್ಲಿ ಅಪ್ರಾಪ್ತರ ವಾಹನ ಚಲಾವಣೆ ಆಗಿದ್ದರೆ, ಇನ್ನು ಕೆಲವು ಪ್ರಕರಣಗಳಲ್ಲಿ ಕುಡಿದು ವಾಹನ ಚಲಾಯಿಸಿ ಇನ್ನೊಬ್ಬರ ಪ್ರಾಣಹಾನಿ ಆಗಿರುವುದಾಗಿದೆ. ಹಾಗಾಗಿ ಇಂತಹ ಪ್ರಕರಣಗಳಲ್ಲಿ ಈ ಕಾಯ್ದೆಯನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಈಗಾಗಲೇ ಸಂಚಾರ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.ನಿರ್ಲಕ್ಷ್ಯದಿಂದಲೇ ಸಾವು: ಕಲೆದ ವರ್ಷ ಮಂಗಳೂರಿನಲ್ಲಿ ಒಟ್ಟು 170 ಅಪಘಾತ ಸಾವು ಪ್ರಕರಣಗಳು ಸಂಭವಿಸಿದ್ದು, ಇದರಲ್ಲಿ 169 ಪ್ರಕರಣಗಳು ನಿರ್ಲಕ್ಷದಿಂದಾಗಿಯೇ ಆಗಿರುವುದು. ಒಂದೆರಡು ಸಾವುಗಳು ರಸ್ತೆಯಲ್ಲಿ ಗುಂಡಿ ಅಥವಾ ಇತರ ಕಾರಣದಿಂದ ಆಗಿದ್ದು, ಈ ಸಂದರ್ಭ ಸರ್ಕಾರ ಅಥವಾ ಆಡಳಿತವನ್ನು ದೂರಲಾಗುತ್ತದೆ. ಆದರೆ ನಿರ್ಲಕ್ಷ್ಯದಿಂದ ಆಗುವ ನೂರಾರು ಸಾವುಗಳ ಬಗ್ಗೆ ಯಾರೂ ಮಾತನಾಡುವುದಿಲ್ಲ. ಜಾಗೃತಿಯಿಂದ ವಾಹನ ಚಲಾಯಿಸಬೇಕು ಎಂಬ ಬಗ್ಗೆ ಗಮನ ಇಲ್ಲ. ಕೊಲೆ ಆದಾಗ ಅದಕ್ಕೆ ಮತೀಯ ಬಣ್ಣ ನೀಡುವ, ಕೆಲವೊಂದು ಸಂದರ್ಭ ಅಪಘಾತಗಳ ವೇಳೆಯೂ ಅದಕ್ಕೆ ಕೋಮು ಬಣ್ಣ ಹಚ್ಚುವ ಪ್ರಯತ್ನಗಳು ಇಲ್ಲಿ ನಡೆಯುತ್ತಿವೆ. ಅದಕ್ಕೆ ಅವಕಾಶ ನೀಡಲಾಗದು ಎಂದು ಪೊಲೀಸ್ ಕಮಿಷನರ್ ಎಚ್ಚರಿಕೆ ಸಂದೇಶ ನೀಡಿದರು.ತುಳು ರಂಗಭೂಮಿಯ ಖ್ಯಾತ ನಟ, ಚಲನಚಿತ್ರ ನಿರ್ದೇಶಕ ದೇವದಾಸ್ ಕಾಪಿಕಾಡ್ ಮಾತನಾಡಿ, ‘ನಾನು ಮನೆಯಿಂದ ಹೊರ ಹೋದಾಗ ಮನೆಯಲ್ಲಿ ನನ್ನ ಕುಟುಂಬ ಕಾಯುತ್ತಿರುತ್ತದೆ’ ಎಂಬ ಜಾಗೃತ ಪ್ರಜ್ಞೆ ಪ್ರತಿಯೊಬ್ಬರಲ್ಲಿ ಬಂದಾಗ ನಿರ್ಲಕ್ಷ್ಯದ ಅಪಘಾತಗಳನ್ನು ತಡೆಯಬಹುದು ಎಂದರು.ಖ್ಯಾತ ನ್ಯೂರೋ ಸರ್ಜನ್ ಡಾ. ಅರ್ಜುನ್ ಶೆಟ್ಟಿ ಮಾತನಾಡಿ, ನಮ್ಮ ವಾಹನದಲ್ಲಿ ಇತರರನ್ನು ಕರೆದುಕೊಂಡು ಹೋಗುವಾಗ, ನಮ್ಮ ವಾಹನವನ್ನು ಬೇರೆಯವರಿಗೆ ನೀಡುವಾಗ ಸಂಚಾರಿ ನಿಯಮಗಳ ಪಾಲನೆಯನ್ನು ಮಾಡಿದರೆ, ಅಪಘಾತಗಳಿಂದ ಆಗುವ ಸಾವಿನ ಜತೆಗೆ ಅಪಘಾತಕ್ಕೆ ಈಡಾದವರು ಅನುಭವಿಸುವ ನೋವು ಹಾಗೂ ಕುಟುಂಬ ಪಡುವ ವೇದನೆಯನ್ನು ತಪ್ಪಿಸಬಹುದು ಎಂದರು.ನಿಯಮ ಪಾಲನೆಯಿಂದ ಜೀವರಕ್ಷೆ:
ಮಂಗಳೂರು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜೈಬುನ್ನಿಸಾ ಮಾತನಾಡಿ, ದೇಶದಲ್ಲಿ 2025ರಲ್ಲಿ ಸಂಭವಿಸಿದ 4.5 ಲಕ್ಷ ಅಪಘಾತಗಳಲ್ಲಿ 1.60 ಲಕ್ಷ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತರಲ್ಲಿ ಶೇ. 55ರಷ್ಟು ಮಂದಿ 18 ವರ್ಷದಿಂದ 35 ವರ್ಷದೊಳಗಿನವರು ಎಂಬುದು ಗಮನಾರ್ಹ . ಮಂಗಳೂರಿನಲ್ಲಿ 600ಕ್ಕೂ ಅಧಿಕ ಪಾನಮತ್ತರಾಗಿ ವಾಹನ ಚಲಾಯಿಸಿರುವುದು ಪತ್ತೆಯಾಗಿದೆ. ಸಂಚಾರಿ ನಿಯಮ ಪಾಲನೆಯೇ ಜೀವನ ರಕ್ಷೆ ಎಂಬುದನ್ನು ಪ್ರತಿಯೊಬ್ಬರು ಅರಿತುಕೊಳ್ಳುವುದು ಬಹು ಮುಖ್ಯ ಎಂದರು.ವಿಡಿಯೋ ಮೂಲಕ ಅಪಘಾತ ಜಾಗೃತಿ
ಕಾರ್ಯಕ್ರಮದಲ್ಲಿ ನಗರದಲ್ಲಿ ಸಂಭವಿಸಿದ ಹಲವು ಅಪಘಾತ ಪ್ರಕರಣಗಳಿಗೆ ಕಾರಣ ಹಾಗೂ ಭೀಕರತೆ ಕುರಿತಾದ ವೀಡಿಯೋ ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಗರದ ವಿವಿಧ ಶಾಲೆಗಳ ಮಕ್ಕಳಿಗೆ ರಸಪ್ರಶ್ನೆ ಮೂಲಕ ಸಂಚಾರಿ ನಿಯಮಗಳ ಬಗ್ಗೆ ಗಮನ ಸೆಳೆಯಲಾಯಿತು. ನಗರದಲ್ಲಿ ಫಲಾಪೇಕ್ಷೆಯಿಲ್ಲದೆ ಟ್ರಾಫಿಕ್ ವಾರ್ಡನ್‌ಗಳಾಗಿ ಕಾರ್ಯ ನಿರ್ವಹಿಸುತ್ತಿರುವವರು ಹಾಗೂ ಸಮಾಜ ಸೇವಕರಾದ ಫ್ರಾನ್ಸಿಸ್ ಮ್ಯಾಕ್ಸಿಂ ಮೊರಾಸ್, ಹಸನ್, ವಾಯ್ಲೆಟ್ ಪಿರೇರಾ, ರೋಶನ್ ರಾಯ್ ಸಿಕ್ವೇರಾ, ಬೂಬಣ್ಣ, ರಮೇಶ್ ಕಾವೂರು, ಬಶೀರ್ ಹಳೆಯಂಗಡಿ ಅವರನ್ನು ಈ ಸಂದರ್ಭ ಗೌರವಿಸಲಾಯಿತು. ಕರ್ತವ್ಯದ ಸಂದರ್ಭ ಅಪಘಾತಕ್ಕೀಡಾದ ವ್ಯಕ್ತಿಯನ್ನು ತನ್ನ ಸ್ಕೂಟಿಯಲ್ಲಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದ ಸಂಚಾರಿ ಪೊಲೀಸ್ ಸಿಬ್ಬಂದಿ ಮನ್ಸಿಜಾ ಬಾನು ಅವರನ್ನು ಅಭಿನಂದಿಸಲಾಯಿತು.ವೇದಿಕೆಯಲ್ಲಿ ಡಿಸಿಪಿಗಳಾದ ಮಿಥುನ್ ಕುಮಾರ್, ಪಿ ಉಮೇಶ್, ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ, ಎಸಿಪಿಗಳಾದ ಗೀತಾ ಕಲುಕರ್ಣಿ, ವಿಜಯ ಕಾಂತಿ ಮತ್ತಿತರರಿದ್ದರು.
ಸಂಚಾರಿ ಎಸಿಪಿ ನಜ್ಮಾ ಫಾರೂಕಿ ಸ್ವಾಗತಿಸಿದರು. ಡಿಸಿಪಿ ರವಿಶಂಕರ್ ಪ್ರಾಸ್ತಾವಿಕ ಮಾತನಾಡಿದರು. ಆರ್‌ಜೆ ಅನುರಾಗ್ ನಿರೂಪಿಸಿದರು.ಪಾದಾಚಾರಿಗಳ ಸುರಕ್ಷತೆಗಾಗಿ ಹೆದ್ದಾರಿ ಹಾಗೂ ಕೆಲವು ಪ್ರಮುಖ ರಸ್ತೆಗಳಲ್ಲಿ ಸೆಂಟರ್ ಮೀಡಿಯನ್(ಬ್ಯಾರಿಕೇಡ್) ಅಳವಡಿಸುವ ಮೂಲಕ ಅಪಘಾತಗಳಿಂದ ಸಾವು ನೋವು ನಿಯಂತ್ರಿಸಲು ಕ್ರಮ ವಹಿಸಲಾಗುವುದು.
-ಸುಧೀರ್ ರೆಡ್ಡಿ, ಪೊಲೀಸ್ ಕಮಿಷನರ್