ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವ ಸ್ಥಳಗಳಲ್ಲಿ ಕಾಮಗಾರಿಯ ಪೂರ್ಣ ವಿವರವುಳ್ಳ ಫಲಕವನ್ನು ಅಳವಡಿಸುವಂತೆ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕನ್ನಡಪ್ರಭ ವಾರ್ತೆ, ಬೆಂಗಳೂರು
ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವ ಸ್ಥಳಗಳಲ್ಲಿ ಕಾಮಗಾರಿಯ ಪೂರ್ಣ ವಿವರವುಳ್ಳ ಫಲಕವನ್ನು ಅಳವಡಿಸುವಂತೆ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಶುಕ್ರವಾರ ಹೊರಮಾವು, ಅಗರ, ಬಂಜಾರ ಬಡಾವಣೆ, ಕಲ್ಲೆರೆ ಬಡಾವಣೆ, ಬಾಬುಸಾಪಾಳ್ಯ ಹಾಗೂ ಚಳ್ಳಕೆರೆ ಸುತ್ತಮುತ್ತ ಪ್ರದೇಶಗಳಲ್ಲಿ ರಸ್ತೆ, ಮೂಲಸೌಕರ್ಯ ಅಭಿವೃದ್ಧಿ, ರೈಲ್ವೆ ಅಂಡರ್‌ಪಾಸ್, ಕೆರೆಗಳ ಅಭಿವೃದ್ಧಿ ಮತ್ತು ಕಸ ವಿಲೇವಾರಿ ಸಂಬಂಧಿಸಿದ ಕಾಮಗಾರಿಗಳನ್ನು ಅವರು ಪರಿಶೀಲನೆ ನಡೆಸಿದರು.
ಕಾಮಗಾರಿ ಪರಿಶೀಲನೆ ವೇಳೆ ಸ್ಥಳೀಯ ನಿವಾಸಿಗಳೊಂದಿಗೆ ಚರ್ಚಿಸಿ, ಸಮಸ್ಯೆಗಳ ತ್ವರಿತ ಪರಿಹಾರಕ್ಕೆ ಹಾಗೂ ಎಲ್ಲ ಅಂಡರ್‌ಪಾಸ್ ಕಾಮಗಾರಿ ವೇಗಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು. ಬಾಬುಸಾಪಾಳ್ಯ ರೈಲ್ವೆ ಅಂಡರ್‌ಪಾಸ್ ಕಾಮಗಾರಿ ಭೂ ವಿವಾದದಿಂದ ವಿಳಂಬವಾಗಿರುವ ಹಿನ್ನೆಲೆಯಲ್ಲಿ, ಯಾವುದೇ ತಡೆಯಾಜ್ಞೆ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ತಕ್ಷಣವೇ ಕಾಮಗಾರಿ ಆರಂಭಿಸಿ ಶೀಘ್ರ ಪೂರ್ಣಗೊಳಿಸಲು ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದರು.ಹೊರಮಾವು ಅಗರ ಕೆರೆಯಲ್ಲಿ ನಿರ್ವಹಣೆ ಕಾಮಗಾರಿಗಳಿಗಾಗಿ ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದ್ದು, ಕೆರೆಯ ಸ್ವಚ್ಛತೆ ಮತ್ತು ನಿರ್ವಹಣೆ ಕಾರ್ಯಗಳನ್ನು ಶೀಘ್ರದಲ್ಲಿ ಕೈಗೊಳ್ಳಬೇಕು. ಸ್ಥಳೀಯ ನಿವಾಸಿಗಳು ಶೌಚಾಲಯ, ಬೆಂಚ್, ವಾಕ್ ವೇ, ಲಾನ್ ಹಾಗೂ ಇತರೆ ಸೌಲಭ್ಯಗಳ ಅಭಿವೃದ್ಧಿಗೆ ಬೇಡಿಕೆ ಇಟ್ಟಿದ್ದಾರೆ, ಸಂಬಂಧಿತ ಕಾಮಗಾರಿಗಳನ್ನು ಕೈಗೊಳ್ಳಲು ಅಂದಾಜು ಪಟ್ಟಿ ತಯಾರಿಸಲು ಹಾಗೂ ಮುಂದಿನ ಬಜೆಟ್‌ನಲ್ಲಿ ಅವಶ್ಯಕ ಅನುದಾನ ಮೀಸಲಿಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಗರ ಕೆರೆ ರಸ್ತೆಯು ತಗ್ಗು ಪ್ರದೇಶದಲ್ಲಿದ್ದು, ಪ್ರತಿ ವರ್ಷವೂ ಮಳೆಯಿಂದಾಗಿ ನೀರು ನಿಂತು ಸಮಸ್ಯೆಯಾಗುತ್ತಿದ್ದು, ಇದನ್ನು ನಿವಾರಿಸಲು ರಸ್ತೆ ಮಟ್ಟವನ್ನು ಏರಿಸಲು ಕ್ರಮ ಕೈಗೊಳ್ಳಲಾಗಿದೆ. ಬಿಟುಮನ್ ಕೊರತೆಯಿಂದ ಡಾಂಬರೀಕರಣ ಕಾಮಗಾರಿ ವಿಳಂಬವಾಗಿದ್ದು, ಹಾಟ್ ಮಿಕ್ಸ್ ಪೂರೈಕೆಯಾದ ಕೂಡಲೇ ಡಾಂಬರೀಕರಣ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದರು.ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಶಾಶ್ವತ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದ್ದು, ಕೆರೆಗಳ ಪುನರುಜ್ಜೀವನ, ರಸ್ತೆ ಸುಧಾರಣೆ , ಚರಂಡಿ ವ್ಯವಸ್ಥೆ ಬಲಪಡಿಸುವುದು ಮತ್ತು ಸಾರ್ವಜನಿಕ ಸೌಲಭ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಹೇಳಿದರು.