ಸಾರಾಂಶ
ಬಳ್ಳಾರಿ: ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸುವುದು ಚುನಾವಣೆ ಆಯೋಗದ ಮುಖ್ಯ ಉದ್ದೇಶವಾಗಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಪ್ರತಿ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಅಭ್ಯರ್ಥಿಗಳ ಖರ್ಚು ವೆಚ್ಚದ ಮೇಲೆ ನಿಗಾ ವಹಿಸಬೇಕು ಎಂದು ಚುನಾವಣಾ ವೆಚ್ಚ ವೀಕ್ಷಕರಾಗಿ ಆಗಮಿಸಿರುವ ಕೆ.ಕೃಷ್ಣಮೂರ್ತಿ, ಕೆ.ಸುರೇಂದ್ರ ಪೌಲ್ ಹೇಳಿದರು.ಇಲ್ಲಿನ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಚುನಾವಣೆ ವೆಚ್ಚ ನಿರ್ವಹಣೆ ಸಂಬಂಧ ಸಹಾಯಕ ಚುನಾವಣೆ ವೆಚ್ಚ ವೀಕ್ಷಕರು, ಎಫ್‍ಎಸ್‍ಟಿ, ಎಸ್‍ಎಸ್‍ಟಿ, ವಿವಿಟಿ, ಎಂಸಿಎಂಸಿ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧವಾಗಿ ಪ್ರತಿಯೊಂದು ಕಾರ್ಯಗಳನ್ನು ಪಾರದರ್ಶಕವಾಗಿ ನಿರ್ವಹಿಸಲಾಗುತ್ತದೆ. ಚುನಾವಣೆಗೆ ಸಂಬಂಧಿಸಿ ಪ್ರತಿ ಅಂಶಗಳನ್ನು ಸೂಕ್ಷ್ಮವಾಗಿ ವೀಕ್ಷಿಸಲಾಗುವುದು. ಹೀಗಾಗಿ ಅಭ್ಯರ್ಥಿಗಳು ವ್ಯಯಿಸುವ ಚುನಾವಣೆ ಖರ್ಚು-ವೆಚ್ಚಗಳ ಮೇಲೂ ನಿಗಾ ವಹಿಸಬೇಕು ಎಂದು ತಿಳಿಸಿದರು.ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಸಂಡೂರು, ಕೂಡ್ಲಿಗಿ ವಿಧಾನಸಭಾ ಕ್ಷೇತ್ರಗಳ ವೆಚ್ಚ ವೀಕ್ಷಕರಾದ ಕೆ.ಸುರೇಂದ್ರ ಪೌಲ್ ಮಾತನಾಡಿ, ಚುನಾವಣಾ ಆಯೋಗದ ಮಾರ್ಗಸೂಚಿ ಮತ್ತು ನಿರ್ದೇಶನಗಳನ್ನು ತಪ್ಪದೇ ಪಾಲಿಸುವುದರ ಮೂಲಕ ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಲು ಸಹಾಯಕ ವೆಚ್ಚ ವೀಕ್ಷಕ ಅಧಿಕಾರಿಗಳು, ಎಫ್‍ಎಸ್‍ಟಿ, ಎಸ್‍ಎಸ್‍ಟಿ ಮತ್ತು ವಿವಿಟಿ ತಂಡಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ವಿಜಯನಗರ, ಕಂಪ್ಲಿ, ಬಳ್ಳಾರಿ ಗ್ರಾಮೀಣ ಮತ್ತು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ವೆಚ್ಚ ವೀಕ್ಷಕರಾಗಿ ಆಗಮಿಸಿರುವ ಕೆ. ಕೃಷ್ಣಮೂರ್ತಿ ಅವರು ಮಾತನಾಡಿ, ಕಂಟ್ರೋಲ್ ರೂಂ ಗೆ ಸಲ್ಲಿಕೆಯಾಗುವ ದೂರುಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಿ, ತುರ್ತು ಕ್ರಮ ವಹಿಸಬೇಕು. ಈ ದಿಸೆಯಲ್ಲಿ ನಿರ್ಲಕ್ಷ್ಯ ಮಾಡುವಂತಿಲ್ಲ ಎಂದು ತಾಕೀತು ಮಾಡಿದರು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳ ಚುನಾವಣಾ ವೆಚ್ಚ ನಿರ್ವಹಿಸಲು ನೇಮಕವಾಗಿರುವ ಅಧಿಕಾರಿಗಳು, ಸಿಬ್ಬಂದಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದರು.ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಹರೀಶ್ ಚುನಾವಣೆ ವೆಚ್ಚ ನಿರ್ವಹಣೆ ಕುರಿತು ತರಬೇತಿ ನೀಡಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಪ್ರತಿ ಅಭ್ಯರ್ಥಿಗೆ ವೆಚ್ಚದ ಮಿತಿ ನಿಗದಿಪಡಿಸಿದ್ದು, ಎಲ್ಲ ಅಭ್ಯರ್ಥಿಗಳ ಪ್ರತಿದಿನದ ಕಾರ್ಯಕ್ರಮಗಳ ಕುರಿತ ಮಾಹಿತಿ ಪಡೆಯಬೇಕು. ದಾಖಲೆಗಳನ್ನು ವಿಡಿಯೋ ವೀಕ್ಷಣಾ ತಂಡಗಳಿಂದ ಪಡೆದು, ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಅದರಲ್ಲಿನ ವೆಚ್ಚಗಳ ಕುರಿತು ದಾಖಲು ಮಾಡಬೇಕು ಎಂದರು.
ಹೆಲಿಕಾಪ್ಟರ್‌ಗೆ ಅನುಮತಿ ಪಡೆದು, ವಿಎಸ್‍ಟಿ ತಂಡ ಕಡ್ಡಾಯವಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದಾಖಲೆ ಸಂಗ್ರಹಿಸಬೇಕು. ಹೆಲಿಕಾಪ್ಟರ್ ಮೂಲಕ ಸಾಮಾನ್ಯವಾಗಿ ಸ್ಟಾರ್ ಪ್ರಚಾರಕರೇ ಆಗಮಿಸುವುದರಿಂದ ಚುನಾವಣಾ ವೆಚ್ಚ ನಮೂದಿಸಲು ಈ ದಾಖಲೆಗಳು ಸಹಾಯಕವಾಗುತ್ತವೆ ಎಂದು ತಿಳಿಸಿದರು.ಚುನಾವಣೆ ವೆಚ್ಚ ದೃಷ್ಟಿಯಿಂದ ರಾಜಕೀಯ ಮುಖಂಡರು ಹಾಗೂ ಸ್ಟಾರ್ ಪ್ರಚಾರಕರ ಆಗಮನದ ಮೇಲೂ ಗಮನ ಇರಿಸಲಾಗಿದೆ. ಚುನಾವಣೆಗೆ ನಾಮಪತ್ರ ಸಲ್ಲಿಸಿದ ದಿನದಿಂದಲೇ ವೆಚ್ಚದ ವಹಿಗಳನ್ನು ನಿರ್ವಹಿಸಬೇಕು ಎಂದು ತಿಳಿಸಿದರು.
ಯೂಟ್ಯೂಬ್, ಫೇಸ್‍ಬುಕ್, ವಾಟ್ಸ್‌ಆ್ಯಪ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ನೀಡುವ ರಾಜಕೀಯ ಜಾಹೀರಾತುಗಳ ಬಗ್ಗೆ ಜಾಲತಾಣಗಳ ನಿಗಾ ತಂಡ, ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಕಾಸಿಗಾಗಿ ಸುದ್ದಿ, ಜಾಹೀರಾತುಗಳ ಬಗ್ಗೆ ಎಂಸಿಎಂಸಿ ಸಮಿತಿ ನಿಗಾ ವಹಿಸಲಿದೆ ಎಂದರು.ಚೆಕ್ ಪೋಸ್ಟ್‌ಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿ ಸೌಜನ್ಯಯುತವಾಗಿ ವರ್ತಿಸಿ, ಸಮರ್ಪಕ ತಪಾಸಣೆ ನಡೆಸಬೇಕು. ದಾಖಲೆ ರಹಿತ ಹಣ ಅಥವಾ ಇನ್ನಿತರೆ ವಸ್ತುಗಳು ಸಾಗಾಣಿಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಸೂಕ್ತ ದಾಖಲೆಯಿಲ್ಲದ 50 ಸಾವಿರಕ್ಕೂ ಹೆಚ್ಚಿನ ಹಣ ಹೊಂದಿದ್ದಲ್ಲಿ, ವಶಕ್ಕೆ ಪಡೆದು, ಸೂಕ್ತ ಕ್ರಮ ವಹಿಸಬೇಕು. 10 ಲಕ್ಷಕ್ಕೂ ಮೇಲ್ಪಟ್ಟು ಹಣ ದೊರೆತಲ್ಲಿ ಕೂಡಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು. ಅಲ್ಲದೆ ಕಡ್ಡಾಯವಾಗಿ ವಿಡಿಯೋ ಹಾಗೂ ಪಂಚನಾಮೆ ಪ್ರಕ್ರಿಯೆ ಕೈಗೊಳ್ಳಬೇಕು. ಈ ಕುರಿತು ಯಾವುದೇ ಸಂಶಯವಿದ್ದಲ್ಲಿ ಚುನಾವಣೆ ವೆಚ್ಚ ವೀಕ್ಷಕರ ನೋಡೆಲ್ ಅಧಿಕಾರಿಗಳಿಗೆ ಸಂಪರ್ಕಿಸಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಚುನಾವಣೆ ವೆಚ್ಚ ನೋಡಲ್ ಅಧಿಕಾರಿಯಾಗಿರುವ ಮಹಾನಗರ ಪಾಲಿಕೆ ಮುಖ್ಯ ಲೆಕ್ಕಾಧಿಕಾರಿ ನಾಗರಾಜ, ಎಲ್ಲ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾ ವೆಚ್ಚ ವೀಕ್ಷಕರು, ಎಫ್‍ಎಸ್‍ಟಿ, ಎಸ್‍ಎಸ್‍ಟಿ, ವಿವಿಟಿ, ಎಂಸಿಎಂಸಿ, ಎಸ್‍ಎಂಸಿ ತಂಡಗಳ ಅಧಿಕಾರಿಗಳು ಮತ್ತು ಸಿಬ್ಬಂದಿ, ಇನ್ನಿತರರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))