ಸಾರಾಂಶ
ಕಾರ್ಯಕ್ರಮದಲ್ಲಿ ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗಣ್ಯರು ಸನ್ಮಾನಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಜೀವನದ ಗುರಿಯೆಡೆಗೆ ತಲುಪಲು ಬದ್ದತೆ ಹಾಗೂ ಶ್ರಮ ಅಗತ್ಯ. ವಿದ್ಯಾರ್ಥಿಗಳು ಗುರಿಮುಟ್ಟುವ ತನಕ ನಿರಂತರ ಪರಿಶ್ರಮ ಪಟ್ಟರೆ ಯಶಸ್ಸು ಸಾಧ್ಯವಿದೆ ಎಂದು ಮಂಗಳೂರಿನ ಖ್ಯಾತ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್ ಹೇಳಿದರು.ಗುರುವಾರ ಕೊಡಿಯಾಲ್‌ಬೈಲ್‌ನ ಶ್ರೀಭಗವತಿ ದೇವಸ್ಥಾನದ ಕೂಟಕ್ಕಳಂ ಅಡಿಟೋರಿಯಂನಲ್ಲಿ ಗುರುವಾರ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ 39ನೇ ಎಕ್ಸ್‌ಪರ್ಟ್ ಡೇ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ವಿದ್ಯಾರ್ಥಿಗಳು ಬದುಕಿನಲ್ಲಿ ಏನೂ ಹಾಗೂ ಯಾಕೆ ಎನ್ನುವ ಎರಡು ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಂಡು ಮುಂದೆ ಸಾಗಬೇಕು. ಮುಖ್ಯವಾಗಿ ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ಯಾವುದು ಕೂಡ ಮಾಡಿದರೂ ಅವರು ಯಾತಕ್ಕಾಗಿ ಅದನ್ನು ಮಾಡಿದರು ಎನ್ನುವ ಉತ್ತರ ದೊರಕಿದರೆ ಬದುಕು ಅರ್ಥಪೂರ್ಣವಾಗಿ ಮುಂದೆ ಸಾಗುತ್ತದೆ ಎಂದರು.
ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್ ನಾಯಕ್ ಅಧ್ಯಕ್ಷತೆ ವಹಿಸಿ, ಎಕ್ಸ್‌ಪರ್ಟ್ ಡೇಯ ಸಂಭ್ರಮ ಎನ್ನುವುದಕ್ಕಿಂತ ಹೆಚ್ಚಾಗಿ ನಮ್ಮ ವಿದ್ಯಾರ್ಥಿಗಳು ವರ್ಷಪೂರ್ತಿ ನಿರಂತರ ಸಾಧನೆ ಮಾಡುತ್ತಾ ಸಾಗುವುದೇ ಸಂಭ್ರಮ. ಎಕ್ಸ್‌ಪರ್ಟ್ ಬರೀ ಶೈಕ್ಷಣಿಕ ಮಾತ್ರವಲ್ಲದೇ ಪಠ್ಯೇತರ ಚಟುವಟಿಕೆಗಳಲ್ಲಿ, ಉತ್ತಮ ವಿದ್ಯಾರ್ಥಿಗಳ ರೂಪಿಸುವ ಕೆಲಸದಲ್ಲಿ ಸದಾ ಮುಂದಿದೆ. ವಿದ್ಯಾರ್ಥಿಗಳ ಬದುಕಿನಲ್ಲಿ ಶಿಸ್ತು, ಪ್ರಾಮಾಣಿಕತೆ ಮೈಗೂಡಿಸಿಕೊಂಡರೆ ಬದುಕು ಸುಂದರವಾಗುತ್ತದೆ ಎಂದರು.ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್ ನಾಯಕ್, ಜೀವನದಲ್ಲಿ ಹೊಸ ಜಗತ್ತಿಗೆ ನೀವು ಕಾಲಿಡುತ್ತಿದ್ದೀರಿ, ಹೊಸ ಹೆಜ್ಜೆಯನ್ನು ಇಡುತ್ತಿದ್ದೀರಿ. ಆದರೆ ಜೀವನ ಪರ್ಯಂತ ನೀವೆಲ್ಲರೂ ಎಕ್ಸ್‌ಪರ್ಟ್‌ನ ವಿದ್ಯಾರ್ಥಿ ಎಂಬುವುದು ಯಾವಾಗಲೂ ನಿಮ್ಮ ಜತೆ ಇರುತ್ತದೆ. ಕಳೆದ 38 ವರ್ಷಗಳಿಂದ ಎಕ್ಸ್‌ಪರ್ಟ್ ಸಂಸ್ಥೆ ಸಾಧನೆ ಮಾಡಲು ಇಲ್ಲಿನ ಸಿಬ್ಬಂದಿ, ಉಪನ್ಯಾಸಕರು ಸೇರಿದಂತೆ ವಿದ್ಯಾರ್ಥಿಗಳು ಕಾರಣಕರ್ತರಾಗಿದ್ದಾರೆ ಎಂದರು.ಟ್ರಸ್ಟಿ ಉಸ್ತಾದ್ ರಫೀಕ್ ಖಾನ್, ಆರ್ಕಿಟೆಕ್ಟ್ ದೀಪಿಕಾ ಎ. ನಾಯಕ್, ವಳಚ್ಚಿಲ್ ಎಕ್ಸ್‌ಪರ್ಟ್ ಪಿಯು ಕಾಲೇಜು ಪ್ರಾಂಶುಪಾಲ ಎನ್.ಕೆ. ವಿಜಯನ್, ಕೊಡಿಯಾಲ್ ಬೈಲ್ ಎಕ್ಸ್‌ಪರ್ಟ್ ಪಿಯು ಕಾಲೇಜು ಪ್ರಾಂಶುಪಾಲ ಪ್ರೊ.ರಾಮಚಂದ್ರ ಭಟ್ ಇದ್ದರು.
ಕಾರ್ಯಕ್ರಮದಲ್ಲಿ ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗಣ್ಯರು ಸನ್ಮಾನಿಸಿದರು. ಸಂಸ್ಥೆಯ ಐಟಿ ನಿರ್ದೇಶಕ ಅಂಕುಶ್ ಎನ್. ನಾಯಕ್ ಸ್ವಾಗತಿಸಿದರು.