ಸುಂಟಿಕೊಪ್ಪ: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಯಾವುದೇ ದುಶ್ಚಟಗಳಿಂದ ದೂರವಿದ್ದು, ನಶೆ ಮುಕ್ತ ಭಾರತ ನಿರ್ಮಾಣಕ್ಕೆ ಪಣ ತೊಡಬೇಕು ಎಂದು ಮಡಿಕೇರಿಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪೊಲೀಸ್ ಠಾಣೆ ಉಪ ನಿರೀಕ್ಷಕ ಎನ್.ಪಿ. ಚೇತನ್ ಕರೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಸುಂಟಿಕೊಪ್ಪ ಹೋಬಳಿಯ ಏಳನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಘ, ಇಕೋ ಕ್ಲಬ್ ಹಾಗೂ ಸಮಾಜ ವಿಜ್ಞಾನ ಸಂಘದ ಆಶ್ರಯದಲ್ಲಿ ಸಂಭ್ರಮ ಶನಿವಾರ ಕಾರ‍್ಯಕ್ರಮದಡಿ ಮಾದಕ ವಸ್ತುಗಳ ದುರುಪಯೋಗ ತಡೆಗಟ್ಟುವಿಕೆ ಕುರಿತು ಏರ್ಪಡಿಸಿದ್ದ ಜಾಗೃತಿ ಆಂದೋಲನ ಕಾರ‍್ಯಕ್ರಮದಲ್ಲಿ ಉಪನ್ಯಾಸ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯ ಸೋಮಯ್ಯ ಮಾತನಾಡಿ, ಸಾಕಷ್ಟು ಯುವ ಪೀಳಿಗೆ ದಿನೇ ದಿನೆ ಮಾದಕ ವ್ಯಸನಿಗಳಾಗುತ್ತಿರುವುದು ಬೇಸರದ ಸಂಗತಿ ಎಂದರು. ನಶೆ ಮುಕ್ತ ಭಾರತ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಸಂಕಲ್ಪ ಕುರಿತು ಮಾತನಾಡಿದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆ ನಿವೃತ್ತ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಮಾತನಾಡಿದರು.ಶಾಲೆಯ ಹಿರಿಯ ವಿದ್ಯಾರ್ಥಿ ಬಳಗದ ಅಧ್ಯಕ್ಷ ಅಬ್ದುಲ್ ರಜಾಕ್ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಎಂ. ರಮೇಶ್ ಮಾತನಾಡಿದರು. ಎಸ್ ಡಿಎಂಸಿ ಅಧ್ಯಕ್ಷ ಎಚ್.ಪಿ. ಸೈದಾಲವಿ, ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕಿ ಡಿ.ಯು. ಬಿಂದು ಕುಮಾರಿ, ಶಿಕ್ಷಕರಾದ ಕೆ.ಬಿ. ರಾಧಾಕೃಷ್ಣ, ಪಿ.ಎಚ್. ರಜಿಯಾ, ಆರ್. ಯಶೋರಾಣಿ, ಕೆ.ಎಚ್. ಗಾಯಿತ್ರಿ, ಅತಿಥಿ ಶಿಕ್ಷಕರಾದ ಎನ್.ಪಿ. ವಾಣಿಶ್ರೀ, ಪಿ ಆರ್. ವಿಮಲಾ ಇದ್ದರು.
ಮಕ್ಕಳಿಂದ ರೂಪಕ ಪ್ರದರ್ಶನ: ಮಾದಕ ವಸ್ತುಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಶಾಲೆಯ ಶಿಕ್ಷಕಿ ಆರ್. ಯಶೋರಾಣಿ ಅವರು ರೂಪಿಸಿದ ರೂಪಕವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿ ಗಮನ ಸೆಳೆದರು.