ಸಾರಾಂಶ
ಇಂದಿಗೂ ದೇವದಾಸಿ ಪದ್ಧತಿ ಉಳಿದಿರುವುದು ನಮ್ಮ ಮೌಢ್ಯತೆ ಬಿಂಬಿಸುತ್ತದೆ. ದೇವರ ಹೆಸರಿನಲ್ಲಿ ಈ ಪದ್ಧತಿ ನಡೆಯುತ್ತಿರುವುದನ್ನು ನಿಯಂತ್ರಣ ಮಾಡಬೇಕು. ಬಡತನ ಮತ್ತು ಶಿಕ್ಷಣದ ಕೊರತೆಯಿಂದ ಅಮಾಯಕರು ಬಲಿಯಾಗುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಸಾಮಾಜಿಕ ಅನಿಷ್ಠವಾಗಿರುವ ಮತ್ತು ಪ್ರಗತಿಗೆ ಕಂಟಕವಾಗಿರುವ ದೇವದಾಸಿ ಪದ್ಧತಿಯನ್ನು ಬೇರು ಸಮೇತ ಕಿತ್ತೊಗೆಯಲು ಪ್ರತಿಯೊಬ್ಬರೂ ಪಣ ತೊಡಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಕಿರಣಕುಮಾರ ವಡಗೇರಿ ಹೇಳಿದರು.ನಗರದ ವಕೀಲರ ಭವನದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ಅಭಿಯೋಜನಾ ಇಲಾಖೆ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಸ್ವಚ್ಛತಾ ಹಾಗೂ ದೇವದಾಸಿ ಪದ್ಧತಿ ನಿರ್ಮೂಲನೆ ಕುರಿತು ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ದೇವದಾಸಿ ಪದ್ಧತಿ ಇನ್ನೂ ಇರುವುದು ಆಶ್ಚರ್ಯ ಮೂಡಿಸುತ್ತಿದೆ. ನಾವು ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ದಾಪುಗಾಲಿಡುತ್ತಿದ್ದರೂ ಇಂದಿಗೂ ದೇವದಾಸಿ ಪದ್ಧತಿ ಉಳಿದಿರುವುದು ನಮ್ಮ ಮೌಢ್ಯತೆ ಬಿಂಬಿಸುತ್ತದೆ. ದೇವರ ಹೆಸರಿನಲ್ಲಿ ಈ ಪದ್ಧತಿ ನಡೆಯುತ್ತಿರುವುದನ್ನು ನಿಯಂತ್ರಣ ಮಾಡಬೇಕು. ಬಡತನ ಮತ್ತು ಶಿಕ್ಷಣದ ಕೊರತೆಯಿಂದ ಅಮಾಯಕರು ಬಲಿಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.ಈ ಅನಿಷ್ಠ ಪದ್ಧತಿ ನಿರ್ಮೂಲನೆಗೆ ಸರ್ಕಾರ ಹಲವು ಕಾನೂನು ಜಾರಿಗೆ ತಂದಿದೆ. ಆದರೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸದ ಪರಿಣಾಮಕಾರಿಯಾಗಿಲ್ಲ. ಈ ಬಗ್ಗೆ ನಾಗರಿಕರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು. ಪ್ರಜ್ಞಾವಂತರೆಲ್ಲರೂ ಸಾಮಾಜಿಕ ಅನಿಷ್ಠ ಪದ್ಧತಿಯಾದ ದೇವದಾಸಿ ಪದ್ಧತಿ ಕೊನೆಗೊಳಿಸಲು ಮುಂದಾಗಬೇಕು. ದೇವದಾಸಿಯರಿಗೆ ಸರ್ಕಾರಿ ಸೌಲಭ್ಯಗಳು ದೊರೆಯದಿದ್ದರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಗಮನಕ್ಕೆ ತರಬೇಕೆಂದರು.
ಹಿರಿಯ ನ್ಯಾಯವಾದಿ ಈಶ್ವರಚಂದ್ರ ಭೂತಿ ಮಾತನಾಡಿ, ದೇವದಾಸಿ ಈ ಪದ್ಧತಿ ನಿರ್ಮೂಲನೆಗೆ ಸರ್ಕಾರದಿಂದಲೇ ಜಾಗೃತಿ, ಆರೋಗ್ಯ ಶಿಬಿರ ನಡೆಸಲಾಗುತ್ತಿದೆ. ದೇವದಾಸಿ ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯ ಸೇರಿದಂತೆ ಸಹಾಯ ಧನ ನೀಡುವ ಮೂಲಕ ನೆರವು ಹಾಗು ಮಾಜಿ ದೇವದಾಸಿಯರಿಗೆ ಮಾಸಾಶನ, ವಸತಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.ಕಿರಿಯ ಶ್ರೇಣಿ ನ್ಯಾಯಾಧೀಶರಾದ ಟಿ.ಸಿ.ಶುಷ್ಮಾ ಅಧ್ಯಕ್ಷತೆ ವಹಿಸಿದ್ದರು. ಯೋಜನಾಧಿಕಾರಿ ಮಧು ಲೋಕಾಪುರ, ಎಂ.ಬಿ. ಮಧುರಖಂಡಿ, ಸುಮಂಗಲಾ ಹಿರೇಮನಿ, ಸಹಾಯಕ ಅಭಿಯೋಜಕಿ ಭವ್ಯ ಆರ್.ನ್ಯಾಯವಾದಿಗಳಾದ ಎಸ್.ಜಿ.ಕೌಜಲಗಿ, ಎಸ್.ಜಿ. ಸಲಬನ್ನವರ, ಎಸ್.ವಿ.ಗೊಳಸಂಗಿ, ರವೀಂದ್ರ ಸಂಪಗಾಂವಿ, ಪಿ.ಜಿ.ಪಾಟೀಲ, ಎ.ಎಸ್.ಗಾಡಬೋಲೆ, ವಿ.ಡಿ.ಭಸ್ಮೆ, ಶ್ರೀಶೈಲ ಮೋಪಗಾರ ಸೇರಿದಂತೆ ಅನೇಕರಿದ್ದರು.