ಹಳ್ಳಿಕಾರ್‌ ಮಠದ ಸರ್ವತೋಮುಖ ಅಭಿವೃದ್ಧಿಗೆ ಬದ್ಧ

| Published : Feb 26 2025, 01:01 AM IST

ಸಾರಾಂಶ

ತಾಲೂಕಿನ ಶೆಟ್ಟಿಗೊಂಡನಹಳ್ಳಿಯಲ್ಲಿ ಸ್ಥಾಪಿತವಾಗಿರುವ ರಾಜ್ಯದ ಪ್ರತಿಷ್ಠಿತ ಹಳ್ಳಿಕಾರ್ ಮಠದ ಸರ್ವತೋಮುಖ ಅಭಿವೃದ್ಧಿಗೆ ತಾವು ಕಂಕಣಬದ್ದವಾಗಿರುವುದಾಗಿ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.

ಕನ್ನಡಪ್ರಭವಾರ್ತೆ ತುರುವೇಕೆರೆ

ತಾಲೂಕಿನ ಶೆಟ್ಟಿಗೊಂಡನಹಳ್ಳಿಯಲ್ಲಿ ಸ್ಥಾಪಿತವಾಗಿರುವ ರಾಜ್ಯದ ಪ್ರತಿಷ್ಠಿತ ಹಳ್ಳಿಕಾರ್ ಮಠದ ಸರ್ವತೋಮುಖ ಅಭಿವೃದ್ಧಿಗೆ ತಾವು ಕಂಕಣಬದ್ದವಾಗಿರುವುದಾಗಿ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು. ತಾಲೂಕಿನ ಶೆಟ್ಟಿಗೊಂಡನಹಳ್ಳಿಯಲ್ಲಿ ಶ್ರೀ ಹಳ್ಳಿಕಾರ್‌ ಮಠ ಟ್ರಸ್ಟ್‌ ವತಿಯಿಂದ ನಡೆದ ಶ್ರೀ ಕೃಷ್ಣ ದೇವಾಲಯದ ದ್ವಿತೀಯ ವಾರ್ಷಿಕೋತ್ಸವ ಹಾಗೂ ಅಲ್ಲಿನ ಮಠದ ಸ್ವಾಮೀಜಿಗಳಾದ ಶ್ರೀ ಬಾಲಕೃಷ್ಣಾನಂದ ಸ್ವಾಮೀಜಿಯವರ ದ್ವಿತೀಯ ಪಟ್ಟಾಭಿಷೇಕ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ರಾಜ್ಯದಾದ್ಯಂತ ಹಳ್ಳಿಕಾರ್‌ ಸಮುದಾಯವಿದೆ. ಆದರೆ ನಮ್ಮ ತಾಲೂಕಿನಲ್ಲೇ ರಾಜ್ಯದ ಮೊದಲ ಹಳ್ಳಿಕಾರ್‌ ಮಠ ಸ್ಥಾಪನೆ ಮಾಡಿರುವುದು ಹೆಮ್ಮೆಯ ಸಂಗತಿ. ಈ ಸಮುದಾಯ ಕಳೆದ ಮೂವತ್ತು ವರ್ಷಗಳಿಂದಲೂ ತಮ್ಮ ಬೆಂಬಲಕ್ಕೆ ನಿಂತಿದೆ. ಈಗಾಗಲೇ ತಾವು ಮಠದ ಅಭಿವೃದ್ಧಿಗೆ ಅನುದಾನ ನೀಡಿದ್ದೇನೆ. ಮುಂಬರುವ ದಿನಗಳಲ್ಲೂ ಮಠದ ಸರ್ವತೋಮುಖ ಅಭಿವೃದ್ದಿಗಾಗಿ ೨೫ ಲಕ್ಷರು.ಗಳ ಅನುದಾನವನ್ನು ನೀಡುವುದಾಗಿ ಶಾಸಕ ಎಂ.ಟಿ.ಕೃಷ್ಣಪ್ಪ ಭರವಸೆ ನೀಡಿದರು. ವಿಶ್ವ ಒಕ್ಕಲಿಗರ ಮಠದ ಪೀಠಾಧಿಪತಿಗಳಾದ ಸ್ವಾಮಿ ನಿಶ್ಚಲಾನಂದ ಶ್ರೀಗಳು ಮಾತನಾಡಿ, ಪೂರ್ವಾಶ್ರಮದಲ್ಲಿ ಅಧಿಕಾರಿಯಾಗಿದ್ದಾಗ ಕೆ ಆರ್ ಪೇಟೆ, ಅರಕಲಗೂಡು ಹಾಸನ ಭಾಗದಲ್ಲಿ ಹಳ್ಳಿಕಾರರ ಬಗ್ಗೆ ಕೇಳಿದ್ದೆ. ಈಗ ಸ್ವತಃ ಇಲ್ಲಿಗೆ ಬಂದಾಗ ಮಠವನ್ನು ಕಂಡು ಮೂಕವಿಸ್ಮಿತನಾದೆ. ಕೇವಲ ಎರಡೇ ವರ್ಷದಲ್ಲಿ ಇಂತಹ ಶಿಕ್ಷಣ ಸಂಸ್ಥೆ, ವಿಭಿನ್ನ ಶೈಲಿಯಲ್ಲಿ ನಿರ್ಮಿಸಿರುವ ಮಠವನ್ನು ನೋಡಿ ಸಂತಸವಾಗಿದೆ. ತಾಯಿ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಾರೋ ಹಾಗೆ ಸಮುದಾಯದ ಬಂಧುಗಳು ಈ ಮಠವನ್ನು ಸಂರಕ್ಷಿಸಬೇಕು. ಆಗ ಮಠ ಬೆಳೆದಂತೆಲ್ಲಾ ತಲೆ ತಲೆ ಮಾರಿಗೂ ಮಠ ಸದಾ ರಕ್ಷಣೆಯಾಗಿ ನಿಲ್ಲುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ನ ಅಧ್ಯಕ್ಷರಾದ ನಾಗಯ್ಯ ಮಾತನಾಡಿ ಸಮುದಾಯ ಅಭಿವೃದ್ಧಿ ಮಾಡುವಲ್ಲಿ ಸಚಿವ ವಿ ಸೋಮಣ್ಣ ನವರ ಸಹಕಾರವನ್ನು ಸ್ಮರಿಸಿದರು. ಹಾಗೂ ಸಮುದಾಯದ ಹಲವಾರು ಮಂದಿ ಕೊಠಡಿ ದಾನ ನೀಡಿದ್ದನ್ನು ಸ್ಮರಿಸಿದರು. 1000 ತೆಂಗಿನ ಸಸಿ ಹೆಚ್ ನರಸೇಗೌಡರು ವಿತರಿಸಿದರು. ಜೆ ಟಿ ತಿಮ್ಮರಾಜು ರಾಸುಗಳ ಜೋಡಿಗೆ ಬಹುಮಾನ ವಿತರಣೆ ಮಾಡಿದರು. ಮುಖಂಡ ಮುರುಳೀಧರ್‌ ಹಾಲಪ್ಪ , ದಾಸೋಹ ಸಮಿತಿ ಅಧ್ಯಕ್ಷರಾದ ಎಂ ಎಲ್ ರವಿಶಂಕರ್, ಬಿಬಿಎಂಪಿ ಮಾಜಿ ಸದಸ್ಯರಾದ ಸಿ ದಾಸೇಗೌಡ್ರು, ಹಣಕಾಸು ಸಮಿತಿ ಅಧ್ಯಕ್ಷ ವಿ ಉಮಾಶಂಕರ್, ಸಂಚಾಲಕ ಬಿ.ವಿ ಸತೀಶ್, ಹೆಚ್ ವಿನಾಯಕ, ಸೇರಿದಂತೆ 80 ಧರ್ಮದರ್ಶಿಗಳು ಹಾಜರಿದ್ದರು. ಟ್ರಸ್ಟ್ ನ ಗೌರವಾಧ್ಯಕ್ಷರಾದ ನರಸಿಂಹಗಿರಿ ಸುಕ್ಷೇತ್ರದ ಶ್ರೀಗಳಾದ ಹನುಮಂತ ನಾಥ ಸ್ವಾಮೀಜಿ, ಡಾ. ಪಟೇಲ್ ಪಾಂಡು ಪ್ರಾಸ್ತಾವಿಕ ನುಡಿ ನೆರವೇರಿಸಿದರು, ಸ್ವಾಗತ ಉಪಾಧ್ಯಕ್ಷರಾದ ಪುಟ್ಟೇಗೌಡ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ದೊಡ್ಡೇಗೌಡ ನಿರೂಪಿಸಿದರು. ಗೌರವಾಧ್ಯಕ್ಷ ಡಾ ರಂಗಶ್ರಿ ರಂಗಸ್ವಾಮಿ ವಂದಿಸಿದರು.