ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ಧ: ಸಚಿವ ಸತೀಶ ಜಾರಕಿಹೊಳಿ

| Published : Nov 02 2024, 01:37 AM IST

ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ಧ: ಸಚಿವ ಸತೀಶ ಜಾರಕಿಹೊಳಿ
Share this Article
  • FB
  • TW
  • Linkdin
  • Email

ಸಾರಾಂಶ

ಗಡಿ ಜಿಲ್ಲೆ ಬೆಳಗಾವಿಯ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಆದ್ಯತೆ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಗಡಿ ಜಿಲ್ಲೆ ಬೆಳಗಾವಿಯ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಆದ್ಯತೆ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜರುಗಿದ 69ನೇ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ಅನೇಕ ಜನಪರ ಕಾರ್ಯಕ್ರಮ ರೂಪಿಸುವುದರ ಜತೆಗೆ ಸಾರ್ವಜನಿಕರ ಹಿತಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ ಎಂದರು.

ಪ್ರಸಕ್ತ ವರ್ಷ ಕಿತ್ತೂರು ಉತ್ಸವದ ಜತೆಗೆ ಚನ್ನಮ್ಮನ ವಿಜಯೋತ್ಸವ 200ನೇ ವರ್ಷಾಚರಣೆಯನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸುವ ಮೂಲಕ ಸ್ವಾತಂತ್ರ್ಯ ಬೆಳ್ಳಿಚುಕ್ಕಿ ಕಿತ್ತೂರು ಚನ್ನಮ್ಮನ ಸ್ವಾಭಿಮಾನದ ಹೋರಾಟ ಸ್ಮರಿಸಲಾಯಿತು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ 39ನೇ ಅಧಿವೇಶನ 1924ರಲ್ಲಿ ಬೆಳಗಾವಿ ನಗರದಲ್ಲಿ ನಡೆದಿರುವುದು ನಮ್ಮ ನಾಡಿನ ಹಿರಿಮೆಯಾಗಿದೆ. ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿವೇಶನ ಜರುಗಿ ನೂರು ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಡಿಸೆಂಬರ್‌ನಲ್ಲಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಚರಿಸಲು ಸರ್ಕಾರ ₹2 ಕೋಟಿ ಅನುದಾನ ಒದಗಿಸಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಪ್ರಸ್ತುತ ಹಿಂಗಾರು ಹಂಗಾಮಿಗೆ 3.68 ಲಕ್ಷ ಹೇಕ್ಟೆರ್ ಬಿತ್ತನೆ ಗುರಿ ನಿಗದಿಪಡಿಸಲಾಗಿದೆ. ಬಿತ್ತನೆಗೆ ಬೇಕಾಗುವ ಸುಮಾರು 29,000 ಕ್ವಿಂಟಲ್‌ನಷ್ಟು ವಿವಿಧ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದ್ದು, 12,500 ಕ್ವಿಂಟಲ್ ಬಿತ್ತನೆ ಬೀಜ ವಿತರಿಸಲಾಗಿದೆ. ಬಿತ್ತನೆ ಬೀಜದ ಕೊರತೆ ಇಲ್ಲ. ಸುಮಾರು 89,171 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರ ದಾಸ್ತಾನು ಮಾಡಲಾಗಿದ್ದು, ರೈತರ ಬೇಡಿಕೆಯಂತೆ ವಿತರಣೆ ಕೈಗೊಳ್ಳಲಾಗುತ್ತಿದೆ. ಅಕ್ಟೋಬರ್ ಆದ ಅತಿವೃಷ್ಟಿಯಿಂದ ಹಿಂಗಾರು ಬೆಳೆಗಳ ಬಿತ್ತನೆಗೆ ಸ್ವಲ್ಪ ಹಿನ್ನಡೆಯಾಗಿದೆ. ಇಲ್ಲಿಯವರೆಗೆ ಸುಮಾರು 75,000 ಹೆಕ್ಟೇರ್ ಬಿತ್ತನೆ ಆಗಿದೆ, ಮಳೆ ಪ್ರಮಾಣ ಕಡಿಮೆಯಾದ ನಂತರ ಹಿಂಗಾರು ಬೆಳೆಗಳ ಬಿತ್ತನೆ ಚುರುಕುಗೊಳ್ಳಲಿದೆ ಎಂದು ಹೇಳಿದರು.

ಮಳೆಯಾಶ್ರಿತ ಪ್ರದೇಶದ ರೈತರು ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡು ಹೊಂಡದಲ್ಲಿ ಸಂಗ್ರಹವಾದ ನೀರನ್ನು ಬಳಸಿ ಆದಾಯ ಹೆಚ್ಚಿಸುವ ಉದ್ದೇಶದೊಂದಿಗೆ ಕೃಷಿ ಭಾಗ್ಯ ಯೋಜನೆಯನ್ನು ಕಳೆದ ಸಾಲಿನಲ್ಲಿ ಜಿಲ್ಲೆಯ 5 ತಾಲೂಕುಗಳಿಗೆ ಜಾರಿಗೊಳಿಸಲಾಗಿತ್ತು. ಪ್ರಸಕ್ತ ಸಾಲಿನಿಂದ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಹಸಿವು ಮುಕ್ತ ಕರ್ನಾಟಕ ಇದು ನಮ್ಮ ಸರ್ಕಾರ ಮುಖ್ಯ ಧ್ಯೇಯವಾಗಿದ್ದು, ಇದಕ್ಕಾಗಿ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಜಾರಿಗೊಳಿಸಿದೆ ಎಂದು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಂಜಿನಿಯರಿಂಗ್ ವಿಭಾಗದಿಂದ ನಗರದ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಸೇರಿ 20 ಸರ್ಕಾರಿ ಆರೋಗ್ಯ ಸಂಸ್ಥೆಗಳ ಕಟ್ಟಡ ಕಾಮಗಾರಿಗಳು ಪ್ರಗತಿಯಲ್ಲಿವೆ. ಒಟ್ಟಾರೆ ₹ 374.44 ಕೋಟಿ ಅಂದಾಜು ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಕೆಲವು ಪ್ರಗತಿಯಲ್ಲಿವೆ. ಅಥಣಿಯ 50 ಹಾಸಿಗೆಗಳ ತಾಯಿ-ಮಕ್ಕಳ ಆಸ್ಪತ್ರೆ ಮತ್ತು ಖಾನಾಪುರ ಪಟ್ಟಣದ 100 ಹಾಸಿಗೆಯ ಸಾರ್ವಜನಿಕ ಆಸ್ಪತ್ರೆ ನಿರ್ಮಾಣದ ₹50.40 ಕೋಟಿ ಮೊತ್ತದ ಕಾಮಗಾರಿ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ಕಿಮೋಥೆರಪಿ ಮತ್ತು ರೆಡಿಯೋ ಥೆರಪಿ ಚಿಕಿತ್ಸೆ ಆರಂಭಿಸಲಾಗುತ್ತಿದೆ. ಬೆಳಗಾವಿ ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶದಲ್ಲಿ 36 ನಮ್ಮ ಕ್ಲಿನಿಕ್ ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮೀಣ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗೆ ಬದ್ಧವಾಗಿದ್ದು, ಜಿಲ್ಲೆಯ ಸರ್ಕಾರಿ ವಿಜ್ಞಾನ ವಿದ್ಯಾಲಯಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಶಕ್ತಗೊಳಿಸಲು ಜಿಪಂ ಪ.ಪೂ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಪ್ರಸ್ತುತ ಸಾಲಿನಲ್ಲಿ ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಸಿಇಟಿ-ಸಕ್ಷಮ್ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದವರು ಹೇಳಿದರು.

ರಾಜ್ಯೋತ್ಸವ ಮೆರವಣಿಗೆಗೆ ಚಾಲನೆ:

69ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ವಿವಿಧ ರೂಪಕ ನಿಮಿತ್ತ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ನಾಡದೇವಿ ಭುವನೇಶ್ವರಿ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ತದನಂತರ ಜರುಗಿದ ಆಕರ್ಷಕ ಮೆರವಣಿಗೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ರೂಪಕಗಳು ಸಾರ್ವಜನಿಕರ ಗಮನ ಸೆಳೆದವು.

ನಾಗರೀಕ ಪೊಲೀಸ್ ಪಡೆ, ಕೆಎಸ್‌ಆರ್‌ಪಿ ಪುರುಷ ಮತ್ತು ಮಹಿಳಾ ತುಕಡಿ, ಅಬಕಾರಿ ಇಲಾಖೆ, ಗೃಹ ರಕ್ಷಕ ದಳ, ಎನ್.ಸಿ.ಸಿ, ಭಾರತ ಸೇವಾದಳ ಮಹೇಶ್ವರಿ ಅಂದ ಮಕ್ಕಳ ಶಾಲೆ ಸೇರಿದಂತೆ ವಿವಿಧ ಶಾಲಾ ಮಕ್ಕಳು ಪರೇಡನಲ್ಲಿ ಭಾಗವಹಿಸಿದ್ದವು.

ಕಾರ್ಯಕ್ರಮದಲ್ಲಿ ಸಂಸದರಾದ ಜಗದೀಶ ಶೆಟ್ಟರ, ಶಾಸಕರಾದ ಆಸೀಫ್‌ ಸೇಠ್‌, ಅಭಯ ಪಾಟೀಲ, ಚನ್ನರಾಜ ಹಟ್ಟಿಹೊಳಿ, ಸಾಬಣ್ಣ ತಳವಾರ, ಮೇಯರ್‌ ಸವಿತಾ ಕಾಂಬಳೆ, ಉಪಮೇಯರ್‌ ಆನಂದ ಚವ್ಹಾಣ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ನಗರ ಪೋಲಿಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ನಬ್ಯಾಂಗ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿಲ್ಲಾ ಪಂಚಾಯತ ಸಿ.ಇ.ಓ ರಾಹುಲ ಶಿಂಧೆ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಉಪವಿಭಾಗಾಧಿಕಾರಿ ಶ್ರವಣ ನಾಯಕ, ಗಣ್ಯರು, ಸಾರ್ವಜನಿಕರು ಹಾಗೂ ವಿವಿಧ ಶಾಲಾ ಕಾಲೇಜು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.