ಸಾರಾಂಶ
ರಾಜ್ಯಕ್ಕೆ ಪರಿಚಿತನಾಗಿ, ನಿಮ್ಮ ಜತೆಗೂಡಿ ಬೆಳೆದವನು. ಬಿಜೆಪಿಯ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ಪಕ್ಷ ಸಂಘಟನೆಗೆ ದುಡಿದಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಅಂಕೋಲಾ: ಕಿತ್ತೂರು- ಖಾನಾಪುರ ಒಳಗೊಂಡ ಉತ್ತರಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೃಷಿಕರ, ಯುವಕರ ಶ್ರೇಯಸ್ಸಿಗೆ ಸಂಸದನಾಗಿ ಆಯ್ಕೆಯಾದ ಮೇಲೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿ, ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಸದಾ ಬದ್ಧನಿದ್ದೇನೆ ಎಂದು ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದರು.ತಾಲೂಕಿನ ಆಗಸೂರು, ಕಲ್ಲೇಶ್ವರ, ಹೆಬ್ಬುಳ, ಹೊಸಾಕಂಬಿ ಮೊಗಟ ಭಾಗಗಳಲ್ಲಿ ಪ್ರಚಾರ ಸಭೆ ನಡೆಸಿದರು.ರಾಜ್ಯಕ್ಕೆ ಪರಿಚಿತನಾಗಿ, ನಿಮ್ಮ ಜತೆಗೂಡಿ ಬೆಳೆದವನು. ಬಿಜೆಪಿಯ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ಪಕ್ಷ ಸಂಘಟನೆಗೆ ದುಡಿದಿದ್ದೇನೆ. ಕಿತ್ತೂರು ವಿಧಾನಸಭಾ ಕ್ಷೇತ್ರದ ಪ್ರಭಾವಿ ನಾಯಕರಾಗಿದ್ದ ಮಾಜಿ ಸಚಿವ ದಿವಂಗತ ಡಿ.ಬಿ. ಇನಾಮ್ದಾರ್ ಸೊಸೆ ಲಕ್ಷ್ಮೀ ವಿಕ್ರಂ ಇನಾಮದಾರ್ ಮತ್ತು ಅವರ ಕುಟುಂಬಸ್ಥರು ಮತ್ತು ಅಪಾರ ಬೆಂಬಲಿಗರು ನರೇಂದ್ರ ಮೋದಿ ಬೆಂಬಲಕ್ಕೆ ಬಿಜೆಪಿ ತತ್ವ- ಸಿದ್ಧಾಂತ ಒಪ್ಪಿ ಬಂದಿರುವುದು ಪಕ್ಷದ ಗೆಲುವಿಗೆ ಸಹಕಾರಿಯಾಗಲಿದೆ.
ಅಲ್ಲದೇ, ಕಿತ್ತೂರು, ಖಾನಾಪುರ ಮಾಜಿ ಶಾಸಕರು, ಶಾಸಕರು ಬಿಜೆಪಿ ಗೆಲುವಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ನೆರವಿಗೆ ನಮ್ಮ ನೆಚ್ಚಿನ ಕಾರ್ಯಕರ್ತರು ಹೆಗಲಿಗೆ ಹೆಗಲು ನೀಡಿದ್ದಾರೆ. ಪ್ರತಿಯೊಬ್ಬರಲ್ಲಿಯೂ ನರೇಂದ್ರ ಮೋದಿ ಮೂರನೆಯ ಬಾರಿಗೆ ಪ್ರಧಾನಿಯಾಗಿ ಹಿಂದೂಸ್ತಾನವನ್ನು ಇನ್ನಷ್ಟು ಮೇಲಕ್ಕೆತ್ತಿ, ಭಾರತವನ್ನು ವಿಶ್ವಗುರು ಸ್ಥಾನದಲ್ಲಿ ನೋಡಬೇಕೆಂದು ಬಯಸಿದ್ದಾರೆ. ಅವರಿಗೆ ಶಕ್ತಿ ನೀಡುವಲ್ಲಿ ಕಿತ್ತೂರು, ಖಾನಾಪುರ ಒಳಗೊಂಡ ಉತ್ತರ ಕನ್ನಡ ಲೋಕಸಭಾ ಕ್ಷೇತ್ರವೂ ಕೊಡುಗೆ ನೀಡಲಿದೆ ಎಂಬ ವಿಶ್ವಾಸವಿದೆ ಎಂದರು.ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಪ್ರಜ್ಞಾವಂತ ಮತದಾರರು ಖಂಡಿತ ಬಿಜೆಪಿ ಬೆಂಬಲಿಸಲಿದ್ದಾರೆ. ಖಾನಾಪುರದಲ್ಲಿ ಡಾ. ಅಂಜಲಿ ನಿಂಬಾಳ್ಕರ್ ಅವರನ್ನು ತಿರಸ್ಕಾರ ಮಾಡಿ, ಮನೆಗೆ ಕಳುಹಿಸಿದ್ದರು. 55 ಸಾವಿರ ಮತಗಳ ಅಂತರದಿಂದ ಸೋಲು ಕಂಡ ಅಂಜಲಿ ಅವರು, ಹಣದ ಪ್ರಾಬಲ್ಯವನ್ನು ಉಪಯೋಗಿಸಿಕೊಂಡು ಗೆಲುವು ಸಾಧಿಸಬಹುದು ಎಂಬ ಆಲೋಚನೆಯಲ್ಲಿದ್ದಾರೆ. ಆದರೆ ನಮ್ಮ ಮತದಾರರು ಅಂತಹ ಯಾವುದಕ್ಕೂ ಮರುಳಾಗದೇ, ನರೇಂದ್ರ ಮೋದಿ ಗೆಲ್ಲಿಸುವಲ್ಲಿ ಪಣ ತೊಟ್ಟಿದ್ದಾರೆ. ಅವರಿಗೆ ನಾವೆಲ್ಲರೂ ಬೆಂಬಲಿಸಬೇಕು ಎಂದರು.