ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಗೆ ಸಂಕಲ್ಪ: ಡಾ.ಅಜಯ್‌ಸಿಂಗ್‌

| Published : Jan 27 2024, 01:22 AM IST

ಸಾರಾಂಶ

ಕಲಬುರಗಿಯಲ್ಲಿ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಕಲಿಕಾ ಆಸರೆ ಕೃತಿಗಳನ್ನು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ 6 ವಿಷಯಗಳ ಪ್ರತ್ಯೇಕ ಪುಸ್ತಕಗಳನ್ನು ವಿತರಿಸಿ ಕೆಕೆಆರ್‌ಡಿಬಿ ಅಧ್ಯಕ್ಷ ಶುಭ ಆರೈಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಿಕೆಯಲ್ಲಿ ಮಂದಗತಿಯಲ್ಲಿರುವ (ಸಿ ಮತ್ತು ಸಿ ಪ್ಲಸ್‌ ಗ್ರೇಡ್‌) ಮಕ್ಕಳಿಗೆ ಗುರುತಿಸಿ ಅಂತಹವರಿಗೆ ಹೆಚ್ಚುವರಿ ಓದಿಗಾಗಿ 6 ವಿಷಯಗಳ ಪುಸ್ತಕಗಳನ್ನು ನೀಡುವ ಮೂಲಕ ಕಲ್ಯಾಣ ನಾಡಿನ ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಗೆ ಕೆಕೆಆರ್‌ಡಿಬಿ ಸಂಕಲ್ಪ ಮಾಡಿದೆ ಎಂದು ಮಂಡಳಿ ಅಧ್ಯಕ್ಷ ಡಾ. ಅಜಯ್‌ ಸಿಂಗ್‌ ಹೇಳಿದರು.

ಕೆಕೆಆರ್‌ಡಿಬಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಗಣರಾಜ್ಯೋತ್ಸವದ ಸರಳ ಸಮಾರಂಭದಲ್ಲಿ ಕಲಿಕಾ ಆಸರೆ ಕೃತಿಗಳನ್ನು ಎಸ್ಸೆಸ್ಸೆಲ್ಸಿ 10 ಮಕ್ಕಳಿಗೆ ಹಂಚುವ ಮೂಲಕ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕೆಕೆಆರ್‌ಡಿಬಿ ಇಂತಹ ಹಲವು ಉಪಕ್ರಮಗಳಲ್ಲಿ ಒಂದಾದ ಪ್ರೌಢಶಾಲೆಗಳಲ್ಲಿರುವ ಎಸ್ಸೆಸ್ಸೆಲ್ಸಿ ಮಕ್ಕಳಲ್ಲಿ ಯಾವ ಮಕ್ಕಳು ಕಲಿಕೆಯಲ್ಲಿ ಮಂದಗತಿಯಲ್ಲಿದ್ದಾರೋ ಅವರನ್ನು ಗುರುತಿಸಿ, ಅಂತಹ ಮಕ್ಕಳಿಗಾಗಿ ಪೂರಕ ಓದಿಗಾಗಿ ಕಲಿಕಾ ಆಸರೆ 6 ವಿಷಯಗಳ ಪ್ರತ್ಯೇಕ ಪುಸ್ತಕ ಮುದ್ರಿಸಲಾಗಿದೆ. ಈಗಾಗಲೇ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸಿ ಮತ್ತು ಪ್ಲಸ್‌ ಎಂಬ ಗ್ರೇಡ್‌ಗಳಲ್ಲಿರುವ ಕಲ್ಯಾಣದ 7 ಜಿಲ್ಲೆಗಳ 3, 23, 080 ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಲಾಗುತ್ತದೆ ಎಂದು ಅವರು ಹೇಳಿದರು.

ಈ ಬಾರಿ ಕಲ್ಯಾಣ ನಾಡಿನ ಸಪ್ತ ಜಿಲ್ಲೆಗಳಲ್ಲಿನ ಸರಕಾರಿ ಶಾಲೆಗಳಲ್ಲಿರುವ 1.5 ಲಕ್ಷ ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದಾರೆ. ನಮ್ಮ ಭಾಗದ ಜಿಲ್ಲೆಗಳು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹಿಂದೆ ಇದ್ದು, ಇವನ್ನೆಲ್ಲ ಮೀರಿ ಟಾಪ್‌ 20 ಸ್ಥಾನದಲ್ಲಿ ನಮ್ಮ ಜಿಲ್ಲೆಗಳು ಬರಬೇಕು ಎಂಬುದೇ ಯೋಜನೆಯ ಹಿಂದಿನ ಸದುದ್ದೇಶವೆಂದರು.

ಕೆಕೆಆರ್‌ಡಿಬಿ ಕಲಿಕಾ ಆಸರೆ ಪುಸ್ತಕಗಳಿಗಾಗಿ 1. 30 ಕೋಟಿ ವೆಚ್ಚ ಮಾಡುತ್ತಿದೆ. 7 ಜಿಲ್ಲೆಗಳಲ್ಲಿರುವ ಎಸ್ಸೆಸ್ಸೆಲ್ಸಿ ಮಕ್ಕಳಲ್ಲಿ ಎ, ಬಿ, ಸಿ ಮತ್ತು ಸಿ ಪ್ಲಸ್‌ ಗ್ರೇಡ್‌ಗಳಲ್ಲಿ ವಿಂಗಡಿಸಲಾಗಿದೆ. ಕಲಿಕಾ ಮಂದಗತಿಯ ಮಕ್ಕಳ ಸಂಖ್ಯೆ 53, 847 ಎಂದು ಗೊತ್ತಾಗಿದೆ. ಇವರೆಲ್ಲರಿಗೂ 3.23 ಲಕ್ಷದಷ್ಟು 6 ವಿಷಯಗಳ ಪುಸ್ತಕಗಳನ್ನು ವಿತರಿಸಲಾಗತ್ತಿದೆ. ಅಕ್ಷರ ಅವಿಷ್ಕಾರ ಯೋಜನೆಯಲ್ಲಿನ ಈ ಪ್ರಯತ್ನ ಮುಂದಿನ ಫಲಿತಾಂಶದಲ್ಲಿ ವೃದ್ಧಿ ಕಾಣಲು ಸಹಕಾರಿಯಾಗಲಿದೆ ಎಂದು ಡಾ. ಅಜಯ್‌ ಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದರು.

ಕೆಕೆಆರ್‌ಡಿಬಿ 3 ಸಾವಿರ ಕೋಟಿ ರು. ಅನುದಾನದಲ್ಲಿ ಶಿಕ್ಷಣಕ್ಕೇ ಅನುದಾನದ ಶೇ. 25 ಪ್ರತಿಶತ ವೆಚ್ಚಕ್ಕೆ ಸೂಚಿಸಲಾಗಿದೆ. ಈಗಾಗಲೇ ಕೆಕೆಆರ್‌ಡಿಬಿ 3 ಸಾವಿರ ಕೋಟಿ ರು. ಅನುದಾನದಲ್ಲಿ ಅಂದಾಜು 2 ಸಾವಿರ ಕೋಟಿ ರುಪಾಯಿ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. 2024- 25 ರ ಕ್ರಿಯಾ ಯೋಜನೆ ಗಡವಿನೊಳಗೆ ಅನುಮೋದನೆ ನೀಡಲ್ಪಟ್ಟು ಪ್ರಗತಿಗೆ ವೇಗ ನೀಡಲಾಗುತ್ತದೆ ಎಂದರು.

ಕೆಕೆಆರ್‌ಡಿಬಿ ಕಾರ್ಯದರ್ಶಿ ಸುಂದರೇಶ ಬಾಬು, ಕಲಬುರಗಿ ಶಿಕ್ಷಣ ಆಯುಕ್ತಾಲಯದ ಅಪರ ಆಯುಕ್ತ ಡಾ. ಆಕಾಶ ಶಂಕರ, ಉಪ ಕಾರ್ಯದರ್ಶಿ ಪ್ರಮೀಳಾ, ಮಲ್ಲಿಕಾರ್ಜುನ ರೆಡ್ಡಿ, ಶಾಲಾ ಶಿಕ್ಷಣ ಇಲಾಖೆಯ ಚೆನ್ನಬಸಪ್ಪ ಮುಧೋಳ್‌, ಶಾಲೆಯ ಮಕ್ಕಳು, ಶಿಕ್ಷಕರು, ಕೆಕೆಆರ್‌ಡಿಬಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.