ಸಾರಾಂಶ
ದೇಶದ ಪ್ರಗತಿಗೆ ಸುಭದ್ರ ಅಡಿಪಾಯ ಹಾಕಿಕೊಟ್ಟ ಸಂವಿಧಾನವನ್ನು ಜಾರಿಗೆ ತರುವಲ್ಲಿ ಅಂಬೇಡ್ಕರ್ ಮತ್ತಿತರ ಅನೇಕ ಮಹನೀಯರು ಶ್ರಮಿಸಿದ್ದಾರೆ.
ಯಲ್ಲಾಪುರ:
ಆಡಳಿತಕ್ಕೆ ಅಗತ್ಯವಾದ ಶಿಸ್ತು ರೂಪಿಸುವ ಸಂವಿಧಾನ ಅನುಸರಿಸುವುದು ಮತ್ತು ಗೌರವಿಸುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯ ಎಂದು ತಹಸೀಲ್ದಾರ್ ಎಂ. ಗುರುರಾಜ ಹೇಳಿದರು.ಅವರು ಪಟ್ಟಣದ ಕಾಳಮ್ಮನಗರ ತಾಲೂಕು ಕ್ರೀಡಾಂಗಣದಲ್ಲಿ ೭೫ನೇ ಗಣರಾಜ್ಯೋತ್ಸವದ ಪ್ರಯುಕ್ತ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸಂವಿಧಾನದ ಆಶಯ ಅರಿತು, ಈ ನೆಲದ ಸಂಸ್ಕೃತಿ, ಕಾನೂನನ್ನು ಪ್ರತಿಯೋರ್ವ ಪ್ರಜೆಗಳೂ ಪಾಲಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಶಿವರಾಮ ಹೆಬ್ಬಾರ್ ಮಾತನಾಡಿ, ದೇಶದ ಪ್ರಗತಿಗೆ ಸುಭದ್ರ ಅಡಿಪಾಯ ಹಾಕಿಕೊಟ್ಟ ಸಂವಿಧಾನವನ್ನು ಜಾರಿಗೆ ತರುವಲ್ಲಿ ಅಂಬೇಡ್ಕರ್ ಮತ್ತಿತರ ಅನೇಕ ಮಹನೀಯರು ಶ್ರಮಿಸಿದ್ದಾರೆ. ಅವರನ್ನು ಸ್ಮರಿಸಿಕೊಳ್ಳುವ ಜತೆಗೆ ಅವರ ಆದರ್ಶ ಅನುಸರಿಸಬೇಕು ಎಂದರು.ತಾನ್‌ಸೇನ್ ಪ್ರಶಸ್ತಿ ಪುರಸ್ಕೃತ ಖ್ಯಾತ ಹಿಂದೂಸ್ತಾನಿ ಗಾಯಕ ಪಂ. ಗಣಪತಿ ಭಟ್ಟ ಹಾಸಣಗಿ, ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಮಂಚೀಕೇರಿಯ ವೈದ್ಯ ಡಾ. ನಾಗರಾಜ ಬಿ.ಎಚ್ ಹಾಗೂ ನಾಟಿ ವೈದ್ಯ ನಾರಾಯಣ ಹೆಗಡೆ ಗವೇಗುಳಿ ಅವರನ್ನು ಗೌರವಿಸಿದರೆ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಶ್ರೀದೇವಿ ನಾಯಕ ಹಾಗೂ ಜಯಶ್ರೀ ಮೈಲಾರ ಅವರನ್ನು ಪುರಸ್ಕರಿಸಲಾಯಿತು. ಅಲ್ಲದೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು.ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ಪಪಂ ಸದಸ್ಯರಾದ ಸುನಂದಾ ದಾಸ್, ಜ್ಯೋತಿ ನಾಯ್ಡು, ಸಿಪಿಐ ರಂಗನಾಥ ನೀಲಮ್ಮನವರ, ಲೋಕೋಪಯೋಗಿ ಇಲಾಖೆಯ ಸ.ಕಾನಿ. ಅಭಿಯಂತರ ವಿ.ಎಂ. ಭಟ್ಟ, ಬಿಇಒ ಎನ್.ಆರ್. ಹೆಗಡೆ, ಪಪಂ ಮುಖ್ಯಾಧಿಕಾರಿ ಸುನೀಲ ಗಾವಡೆ, ತಾಪಂ ಆಡಳಿತಾಧಿಕಾರಿ ನಾಗರಾಜ ನಾಯ್ಕ ಉಪಸ್ಥಿತರಿದ್ದರು. ಭಾರತ ಸೇವದಾಳದ ಸಂಘಟಕ ಸಂಜೀವಕುಮಾರ ಹೊಸ್ಕೇರಿ, ಯುವಜನ ಸೇವಾ ಕ್ರೀಡಾಧಿಕಾರಿ ನಾರಾಯಣ ನಾಯಕ, ಐಇಆರ್‌ಟಿ ದಿಲೀಪ ದೊಡ್ಡಮನಿ ನಿರ್ವಹಿಸಿದರು.ವಿವಿಧ ಶಾಲಾ ವಿದ್ಯಾರ್ಥಿಗಳು, ಎನ್‌ಸಿಸಿ, ಭಾರತ ಸೇವಾದಳ, ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.