ಹಿಂದುಳಿದ ಸಮುದಾಯ ವಾಸಿಸುವ ಕಾಲೋನಿ ಸೇರಿದಂತೆ ಸಮಾಜದ ಏಳ್ಗೆಗೆ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಕಲ್ಪಿಸುವ ಮೂಲಕ ಎಲ್ಲ ಸಮುದಾಯಗಳ ಹಿತ ಕಾಯ್ದಿರುವೆ ಎಂದು ಅರಣ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.
ಬ್ಯಾಡಗಿ: ಹಿಂದುಳಿದ ಸಮುದಾಯ ವಾಸಿಸುವ ಕಾಲೋನಿ ಸೇರಿದಂತೆ ಸಮಾಜದ ಏಳ್ಗೆಗೆ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಕಲ್ಪಿಸುವ ಮೂಲಕ ಎಲ್ಲ ಸಮುದಾಯಗಳ ಹಿತ ಕಾಯ್ದಿರುವೆ ಎಂದು ಅರಣ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.ಪಟ್ಟಣದ ಗಾಂಧಿನಗರದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ನಿರ್ಮಿತಿ ಕೇಂದ್ರದ ಆಶ್ರಯದಲ್ಲಿ ಜರುಗಿದ 2 ಕೋಟಿ ರು.ವೆಚ್ಚದ ಸಮುದಾಯ ಭವನಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಅಂಬೇಡ್ಕರ್, ಬಾಬು ಜಗಜೀವನರಾಂ ಹೆಸರಿನಲ್ಲಿ ಹಾಗೂ ವಾಲ್ಮೀಕಿ ಭವನಗಳನ್ನು ನಿರ್ಮಿಸುವ ಮೂಲಕ ಹಿಂದುಳಿದ ಸಮುದಾಯದ ಅಭಿವೃದ್ಧಿಗೆ ವಿಶೇಷ ಅನುದಾನ ಕಲ್ಪಿಸಲಾಗಿದೆ. ಗಾಂಧಿನಗರದ ಸಮುದಾಯ ಭವನ ಈ ಹಿಂದಿನ ಮಾಜಿ ಶಾಸಕರಾಗಿದ್ದ ಮರಿಯಪ್ಪ ಮಾಳಗಿಯವರ ಕಾಲದಲ್ಲಿ ನಿರ್ಮಿಸಲಾಗಿತ್ತು. ಬಳಿಕ ಶಿಥಿಲಗೊಂಡ ಕಟ್ಟಡ ಮರುನಿರ್ಮಾಣ ಆಗಿರಲಿಲ್ಲ. ಕಳೆದ ಬಾರಿ 1 ಕೋಟಿ ರು. ನಿಗದಿಪಡಿಸಿದ್ದು ದೊಡ್ಡ ಪ್ರಮಾಣದಲ್ಲಿ ಸಮುದಾಯ ಅಗತ್ಯವಾಗಿದೆ ಎನ್ನುವ ಸಮಾಜ ಬಾಂಧವರ ಬೇಡಿಕೆಯಂತೆ ಇದನ್ನು ಈಗ 2 ಕೋಟಿ ರು. ಏರಿಕೆ ಮಾಡಲಾಗಿದೆ. ಭವನದ ಕೆಳಭಾಗದಲ್ಲಿ ಅಡುಗೆ ಹಾಗೂ ಇತರೆ ವ್ಯವಸ್ಥೆ, ಮೇಲ್ಭಾಗದಲ್ಲಿ ಕಲ್ಯಾಣ ಮಂಟಪ ಮಾದರಿಯಲ್ಲಿ ನಿರ್ಮಿಸಲಾಗುವುದು. ಸಮಾಜ ಬಾಂಧವರು ಕೇವಲ ತಮ್ಮವರಿಗೆ ನೀಡದೆ, ಎಲ್ಲ ಸಮಾಜದ ಬಡ ವರ್ಗದವರಿಗೆ ಸಹಕಾರ ನೀಡಬೇಕಿದೆ ಎಂದರು. ಗಾಂಧಿನಗರ ಬಡಾವಣೆ ಜಾಗೆ ಸಹಕಾರ ಸಂಘದ ಹೆಸರಿನಲ್ಲಿದ್ದು ಈ ಹಿಂದೆ ಇದಕ್ಕಾಗಿ ತಾವೇ ಖುದ್ದಾಗಿ ಅಧಿಕಾರಿಗಳ ಬಳಿ ತೆರಳಿ ತಾಂತ್ರಿಕ ದೋಷವನ್ನು ಸರಿಪಡಿಸಿದ್ದು, ಬಳಿಕ ಸೊಸೈಟಿಯಿಂದ ನಿಗದಿಪಡಿಸಿದ ಮೊತ್ತವನ್ನು ಸಂದಾಯಿಸಿಕೊಂಡು,ಮಾಲೀಕರ ಹೆಸರಿನಲ್ಲಿ ಹಕ್ಕಪತ್ರ ನೀಡಲಾಗುತ್ತಿದೆ. ಕೆಲವರಿಗೆ ಭರಿಸುವ ಮೊತ್ತ ಹೆಚ್ಚಳವಾಗಿದ್ದು, ತೊಂದರೆಯಾಗುತ್ತಿದೆ ಎನ್ನುವ ಅಭಿಪ್ರಾಯ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು, ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿ ಸರ್ಕಾರದಿಂದ ನಿಗದಿಪಡಿಸಿದ ಮೊತ್ತವನ್ನು ಕಡಿತಗೊಳಿಸಲು ಯತ್ನಿಸುವೆ. ಪುರಸಭೆ ಉಚಿತ ನಿವೇಶ ವಿತರಣೆ ಮಾಡಿದ್ದು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಮೀಸಲಾಗಿರುವ ಎಲ್ಲ ನಿವೇಶನಗಳ ಹಕ್ಕುಪತ್ರ ನೀಡಲಾಗಿದೆ. ಅಂಬೇಡ್ಕರ ಭವನ ಐದಾರು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದು, ಸಮಾಜ ಕಲ್ಯಾಣ ಆಧೀನದಲ್ಲಿದೆ. ಮೆಟ್ಟಿಲುಗಳ ನಿರ್ಮಾಣ ಹಾಗೂ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಈ ವೇಳೆ ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ಗ್ಯಾರಂಟಿ ಯೋಜನೆ ತಾಲೂಕಾಧ್ಯಕ್ಷ ಶಂಭನಗೌಡ್ರ ಪಾಟೀಲ, ಆಶ್ರಯ ಸಮಿತಿ ಅಧ್ಯಕ್ಷ ಮುನ್ನಾಫ ಎರೆಸೀಮೆ, ಸದಸ್ಯ ದುಗೇಶ ಗೋಣೆಮ್ಮನವರ, ಮಾಜಿ ಸೈನಿಕ ಎಂ.ಡಿ. ಚಿಕ್ಕಣ್ಣನವರ, ಸುಭಾಸ ಮಾಳಗಿ, ನಾಗರಾಜ ಹಾವನೂರು, ಡಿ.ಬಿ. ಬುಡ್ಡನಗೌಡ್ರ, ವಿಜಯ ಮಾಳಗಿ, ಬೀರಪ್ಪ ಬಣಕಾರ, ಮಲ್ಲಿಕಾರ್ಜುನ ಕರಿಲಿಂಗಣ್ಣನವರ, ಮಾರುತಿ ಅಚ್ಚೀಗೇರಿ, ಸುರೇಶ ಆಸಾದಿ, ಹನುಮಂತಪ್ಪ ಮಾಳಗಿ, ಸಮಾಜ ಬಾಂಧವರಾದ ನಿರ್ಮಿತಿ ಕೇಂದ್ರದ ಎಂಜಿನಿಯರ್ ಎಚ್.ಡಿ.ಶಾಂತಕುಮಾರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶರಣಯ್ಯ ಕುಲಕರ್ಣಿ ಇತರರಿದ್ದರು.