ಸಾರಾಂಶ
ಗದಗ: ಭಾರತದಲ್ಲಿ ದಿನೇ ದಿನೇ ಕ್ಷಯರೋಗ ಉಲ್ಭಣಗೊಳ್ಳುತ್ತಿದ್ದು, ಅದಕ್ಕೆ ತಕ್ಕಂತೆ ಸರ್ಕಾರ ಅನೇಕ ಯೋಜನೆ ಕೈಗೊಂಡು ಕ್ಷಯಮುಕ್ತ ಭಾರತವನ್ನಾಗಿ ಮಾಡಲು ಸಂಬಂಧಪಟ್ಟ ಸಿಬ್ಬಂದಿಗಳ ಶ್ರಮ ಶ್ಲಾಘನೀಯ. ಮುಂದಿನ ದಿನಮಾನಗಳಲ್ಲಿ ಇದೇ ರೀತಿ ನಿರಂತರವಾಗಿ ಶ್ರಮ ವಹಿಸಿ ಕ್ಷಯ (ಟಿಬಿ) ಮುಕ್ತ ಜಿಲ್ಲೆಯನ್ನಾಗಿ ಮಾಡಲು ಪಣತೊಡೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಡಿಜಿಎಂ ಆಯುರ್ವೇದಿಕ್ ಕಾಲೇಜ್‌ನಲ್ಲಿ ನಡೆದ 100 ದಿನಗಳ ಕ್ಷಯ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಡಿಎಚ್‌ಒ ಡಾ. ಎಸ್.ಎಸ್.ನೀಲಗುಂದ ಮಾತನಾಡಿ, ಇಲಾಖೆ ಎಲ್ಲ ಸಿಬ್ಭಂದಿ ಕ್ಷಯ ಮುಕ್ತ ಭಾರತ ಅಭಿಯಾನ ಯಶಸ್ವಿಗೊಳಿಸಿ, ಜನರಿಗೆ ಅರಿವು ಮೂಡಿಸಲು ಮುಂದಾಗಬೇಕು ಎಂದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಅರುಂಧತಿ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ಷಯರೋಗದ ಬಗ್ಗೆ ಸಂಪೂರ್ಣವಾಗಿ ವಿವರಿಸಿದರು.ಈ ವೇಳೆ ಕ್ಷಯ ಮುಕ್ತ ಭಾರತ ಪ್ರಮಾಣ ವಚನ ಸ್ವೀಕರಿಸಲಾಯಿತು.
ಜೈ ಭೀಮ ಕಲಾ ತಂಡದಿಂದ ಕ್ಷಯರೋಗ ಕುರಿತು ಅರಿವು ಮೂಡಿಸುವ ಜಾನಪದ ಹಾಡುಗಳನ್ನು ಹಾಡಿದರು. ಬೆಳಗ್ಗೆ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನೆರವೇರಿಸಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಿ.ಸಿ. ಕರಿಗೌಡರ, ಡಾ. ಸಂತೋಷ್ ಬೆಳವಡಿ, ಡಾ.ಪ್ರೀತ ಖೋನಾ, ಡಾ. ಸಾಮುದ್ರಿ, ಡಾ. ಮಹ್ಮದ್‌ಅಶ್ರಫ್‌ಉಲ್, ರೂಪಸೇನ್ ಚವ್ಹಾಣ, ಡಾ. ಬಿ.ಎಸ್. ಪಾಟೀಲ, ಡಾ. ಸತೀಶ್ ಘಾಟಗೆ, ಅಶೋಕ ಮಂದಾಲಿ, ಡಾ. ಮಹ್ಮದಅಶ್ರಫ್‌ಉಲ್, ತಹಸೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು.