ರಾಮನಗರ: ಅಸಂಘಟಿತ ವರ್ಗಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸಾಮಾಜಿಕ ಭದ್ರತೆ ಒದಗಿಸುವ ಕಾರ್ಯಕ್ರಮಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲತೆ ಸಾಧಿಸುವಂತೆ ಶಾಸಕ ಇಕ್ಬಾಲ್ ಹುಸೇನ್ ಕಿವಿಮಾತು ಹೇಳಿದರು

ರಾಮನಗರ: ಅಸಂಘಟಿತ ವರ್ಗಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸಾಮಾಜಿಕ ಭದ್ರತೆ ಒದಗಿಸುವ ಕಾರ್ಯಕ್ರಮಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲತೆ ಸಾಧಿಸುವಂತೆ ಶಾಸಕ ಇಕ್ಬಾಲ್ ಹುಸೇನ್ ಕಿವಿಮಾತು ಹೇಳಿದರು.

ನಗರದ ಅಲ್ ಕರೀಮ್ ಫಂಕ್ಷನ್ ಹಾಲ್‌ನಲ್ಲಿ ಕಾರ್ಮಿಕ ಇಲಾಖೆ ಮತ್ತು ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆಯಡಿ ಅಸಂಘಟಿತ ಕಾರ್ಮಿಕ ಮತ್ತು ರಾಜ್ಯ ಮೋಟಾರು ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯಡಿ ಫಲಾನುಭವಿಗಳ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅಸಂಘಟಿತ ಕಾರ್ಮಿಕರು ಶ್ರಮ ಜೀವಿಗಳು. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ಅವರೆಲ್ಲರ ಆಶೀರ್ವಾದವೂ ಇದೆ. ಹೀಗಾಗಿ ಅಸಂಘಟಿತ ಕಾರ್ಮಿಕರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ. ಅವರ ಶ್ರೇಯೋಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ರೂಪಿಸಿ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಅರ್ಹ ಫಲಾನುಭವಿಗಳಿಗೆ ವಂಚಿತರಾಗದಂತೆ ಎಚ್ಚರ ವಹಿಸಬೇಕು ಎಂದರು.

ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಮೂಲಕ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯಡಿ ಪ್ರಾರಂಭಿಕವಾಗಿ 26 ವರ್ಗಗಳ ಅಸಂಘಟಿತ ಕಾರ್ಮಿಕರನ್ನು ಮಾತ್ರ ನೊಂದಾಯಿಸಲಾಗುತ್ತಿತ್ತು. ಸರ್ಕಾರ ವಿಶೇಷವಾಗಿ ಮುತುವರ್ಜಿ ವಹಿಸಿ ಅದನ್ನು ಇತರೆ ವರ್ಗಗಳಿಗೂ ವಿಸ್ತರಿಸಿದೆ ಎಂದು ತಿಳಿಸಿದರು.

ಈಗ ಹೊಸದಾಗಿ ಹಿಂದಳುದ ವರ್ಗಗಳ ಪ್ರವರ್ಗ -1, 2 ಎ, 3 ಎ ಮತ್ತು 3 ಬಿಗೆ ಸೇರಿದ ಪಾರಂಪರಿಕ ವೃತ್ತಿಯಲ್ಲಿ ತೊಡಗಿರುವ 38 ವರ್ಗಗಳು ಹಾಗೂ ಹಿಂದುಳಿದ ವರ್ಗಗಳ ಅಲೆಮಾರಿ ಹಾಗೂ ಅರೆಅಲೆಮಾರಿ ಪಂಗಡದ ಕುಲಕಸುಬಿನಲ್ಲಿ ತೊಡಗಿರುವ 27 ವರ್ಗಗಳ ಕಾರ್ಮಿಕರು ಸೇರಿದಂತೆ ಒಟ್ಟಾರೆ 91 ವರ್ಗಗಳ ಕಾರ್ಮಿಕರನ್ನು ಉಚಿತವಾಗಿ ನೋಂದಾಯಿಸಿ ಸೌಲಭ್ಯಗಳನ್ನೊಳಗೊಂಡ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ ಎಂದು ಹೇಳಿದರು.

ಈ ಯೋಜನೆಯಡಿ ನೋಂದಾಯಿತ ಕಾರ್ಮಿಕ ಅಪಘಾತದಲ್ಲಿ ಮರಣ ಹೊಂದಿದರೆ ನಾಮ ನಿರ್ದೇಶಿತರಿಗೆ 1 ಲಕ್ಷ ಪರಿಹಾರ, ಭಾಗಶಃ - ಶಾಶ್ವತ ದುರ್ಬಲತೆ ಹೊಂದಿದರೆ 1 ಲಕ್ಷ ಪರಿಹಾರ, ಆಸ್ಪತ್ರೆ ವೆಚ್ಚಕ್ಕಾಗಿ 50 ಸಾವಿರ , ಸಹಜ ಮರಣ ಪರಿಹಾರ ಮತ್ತು ಅಂತ್ಯಕ್ರಿಯೆ ವೆಚ್ಚಕ್ಕಾಗಿ 10 ಸಾವಿರ ರು.ಧನ ಸಹಾಯ ಮಾಡಲಾಗುತ್ತದೆ. ಎಲ್ಲ ಅಸಂಘಟಿತ ಕಾರ್ಮಿಕರು ನೋಂದಣಿ ಮಾಡಿಸಿಕೊಂಡು ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಶ್ರಮಿಕ ವಸತಿ ಶಾಲೆ ಪ್ರಾರಂಭ:

ಅಸಂಘಟಿತ ಕಾರ್ಮಿಕರ ಕಸುಬಿಗೆ ಅನುಗುಣವಾಗಿ ಕಿಟ್ ಗಳನ್ನು ವಿತರಿಸಲಾಗುತ್ತಿದ್ದು, ಅವರ ಮಕ್ಕಳ ಶಿಕ್ಷಣಕ್ಕೂ ಹೆಚ್ಚಿನ ಒತ್ತು ಕೊಡಲಾಗುತ್ತಿದೆ. ಇನ್ನು ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕಾಗಿ ರಾಮನಗರದಲ್ಲಿಯೂ ಶ್ರಮಿಕ ವಸತಿ ಶಾಲೆ ತೆರೆಯಲಾಗುತ್ತಿದೆ ಎಂದು ಹೇಳಿದರು.

ಬಡವರು, ರೈತರು, ಕೂಲಿ ಕಾರ್ಮಿಕರೆಲ್ಲರ ಪ್ರಾರ್ಥನೆ ಫಲವಾಗಿ ನಾನು ಶಾಸಕನಾಗಿ ಆಯ್ಕೆಯಾಗಿದ್ದೇನೆ. ಈ ಹಿಂದೆ ಶಾಸಕರಾಗಿದ್ದವರು ನಿಮ್ಮ ಕಷ್ಟ ಸುಖವನ್ನು ಯಾರೂ ಕೇಳಲಿಲ್ಲ. ಆದರೆ, ನಾನು ನಿಮ್ಮ ಮನೆ ಮಗ, ಸಹೋದರನಾಗಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ನಿಮ್ಮೆಲ್ಲರ ಆಶಯದಂತೆ ನವ ರಾಮನಗರ ನಿರ್ಮಾಣಕ್ಕಾಗಿ ಶ್ರಮಿಸುತ್ತಿದ್ದೇನೆ ಎಂದರು.

ರಾಮನಗರದಲ್ಲಿ ಅರ್ಹ ಬಡವರಿಗೆ 10 ಸಾವಿರ ನಿವೇಶನಗಳನ್ನು ಒದಗಿಸಲು ಉದ್ದೇಶಿಸಿದ್ದು, ಇದಕ್ಕಾಗಿ 13 ಸಾವಿರ ಅರ್ಜಿಗಳು ಬಂದಿವೆ. ಶಿಡ್ಲಕಲ್ಲು ಬಳಿ 888 ನಿವೇಶನಗಳ ರಚನೆಗೆ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ. ಆಶ್ರಯ ಸಮಿತಿ ಆಯ್ಕೆ ಮಾಡಿದ ಅರ್ಹ ಬಡವರಿಗೆ ನಿವೇಶನ ಒದಗಿಸುತ್ತೇವೆ ಎಂದು ತಿಳಿಸಿದರು.

ನಿರುದ್ಯೋಗಿ ಯುವಕರಿಗೆ ಉದ್ಯೋಗ ಮೇಳದ ಮೂಲಕ ಉದ್ಯೋಗಾವಕಾಶ ಕಲ್ಪಿಸಿದೆವು. ಅಲ್ಪಸಂಖ್ಯಾತರ ಸಮುದಾಯದ ಬಡ ಕುಟುಂಬಗಳ ಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ನೆರವೇರಿಸಿದೇವು. ಮುಂದಿನ ದಿನಗಲ್ಲಿ ಮತ್ತೆ 150 ಜೋಡಿಗಳ ಸಾಮೂಹಿಕ ವಿವಾಹ ಆಯೋಜಿಸಲಾಗುವುದು ಎಂದು ಇಕ್ಬಾಲ್ ಹುಸೇನ್ ಹೇಳಿದರು.

ಇದೇ ವೇಳೆ 50 ಮಂದಿ ಕಟ್ಟಡ ಕಾರ್ಮಿಕರು, 30 ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್, 30 ಮಂದಿ ಕಟ್ಟಡ ಕಾರ್ಮಿಕರಿಗೆ ವಿವಿಧ ಕಿಟ್, 5 ಕಟ್ಟಡ ಕಾರ್ಮಿಕರಿಗೆ ಮದುವೆ ಧನ ಸಹಾಯ ಬಾಂಡ್ ಗಳನ್ನು ಶಾಸಕರು ವಿತರಿಸಿದರು.

ಈ ಸಂದರ್ಭದಲ್ಲಿ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಚೇತನ್ ಕುಮಾರ್, ಮಾಜಿ ಅಧ್ಯಕ್ಷ ಸಿಎನ್‌ಆರ್ ವೆಂಕಟೇಶ್, ಕಾರ್ಮಿಕ ಅಧಿಕಾರಿ ನಾಗೇಂದ್ರ, ಕಾರ್ಮಿಕ ನಿರೀಕ್ಷಕ ಪ್ರದೀಪ್, ಮುಖಂಡರಾದ ಮತೀನ್ ಪಾಷ, ಗುರುವೇಗೌಡ, ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

8ಕೆಆರ್ ಎಂಎನ್ 1.ಜೆಪಿಜಿ

ಶಾಸಕ ಇಕ್ಬಾಲ್ ಹುಸೇನ್ ಅಸಂಘಟಿತ ಕಾರ್ಮಿಕರಿಗೆ ಸವಲತ್ತುಗಳನ್ನು ವಿತರಿಸಿದರು.