ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತರಲು ಬದ್ಧ

| Published : Dec 30 2024, 01:02 AM IST

ಸಾರಾಂಶ

ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳನ್ನು ಕೈಗೊಳ್ಳಲು ಯಾವುದೇ ಜನಪ್ರತಿನಿಧಿ ಅನುದಾನ ತಂದರೂ ನಾನು ಸ್ವಾಗತಿಸುತ್ತೇನೆ. ಒಟ್ಟಿನಲ್ಲಿ ನನಗೆ ಗ್ರಾಮ ಅಭಿವೃದ್ದಿಯಾಗಬೇಕು. ಜನರು ತಮ್ಮ ವ್ಯಾಪ್ತಿಯಲ್ಲಿ ಏನೇನು ಕಾಮಗಾರಿಗಳು ಆಗಬೇಕು.ಈಗ ಬಿಡುಗಡೆಯಾದ ಅನುದಾನಕ್ಕೆ ತಕ್ಕಂತೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ತಾಲೂಕಿನ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲೂ ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಹೆಚ್ಚು ಅನುದಾನ ತರಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

ತಾಲೂಕಿನ ಹಂಪಸಂದ್ರ ಗ್ರಾಪಂ ವ್ಯಾಪ್ತಿಯ ಚೆಂಡೂರು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಚೆಂಡೂರು ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆದರ್ಶ ಗ್ರಾಮ ಯೋಜನೆಯ ಮೂಲಕ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ ಎಂದರು.

ಆದ್ಯತೆ ಮೇಲೆ ಕಾಮಗಾರಿ

ಈಗ ಬಿಡುಗಡೆಯಾದ ಅನುದಾನಕ್ಕೆ ತಕ್ಕಂತೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಮುಂದಿನ ಫೆಬ್ರವರಿ ಮಾಹೆಯೊಳಗೆ ಗ್ರಾಮಸ್ಥರು ನೀಡಿದ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳಲಾಗುತ್ತದೆ. ಸಿಸಿ ರಸ್ತೆ ಕಾಮಗಾರಿ, ಹೈಮಾಸ್ಟ್ ದೀಪ ಅಳವಡಿಸುವುದು ಸೇರಿದಂತೆ ಮತ್ತಷ್ಟು ಕಾಮಗಾರಿಗಳನ್ನು ಕೈಗೊಂಡು ಚೆಂಡೂರು ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಇನ್ನೂ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳನ್ನು ಕೈಗೊಳ್ಳಲು ಯಾವುದೇ ಜನಪ್ರತಿನಿಧಿ ಅನುದಾನ ತಂದರೂ ನಾನು ಸ್ವಾಗತಿಸುತ್ತೇನೆ. ಒಟ್ಟಿನಲ್ಲಿ ನನಗೆ ಗ್ರಾಮ ಅಭಿವೃದ್ದಿಯಾಗಬೇಕು. ಜನರು ತಮ್ಮ ವ್ಯಾಪ್ತಿಯಲ್ಲಿ ಏನೇನು ಕಾಮಗಾರಿಗಳು ಆಗಬೇಕು ಎಂದು ಹೇಳಿದರು.

ಸಂಪರ್ಕ ರಸ್ತೆ ಕಾಮಗಾರಿ

ಕ್ಷೇತ್ರದಲ್ಲಿ ಆದಷ್ಟು ಶೀಘ್ರವಾಗಿ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಮ ವಹಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ 7 ರಿಂದ ಚೆಂಡೂರು ಗ್ರಾಮಕ್ಕೆ ಬರುವ ರಸ್ತೆ ಕಾಮಗಾರಿ, ಚೆಂಡೂರು ಗ್ರಾಮದಿಂದ ಗಂಧಂನಾಗೇನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗಳನ್ನು ಆದಷ್ಟು ಶೀಘ್ರ ಆರಂಭಿಸಲು ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಆರಕ್ಷಕ ವೃತ್ತ ನಿರೀಕ್ಷಕ ನಯಾಜ್ ಬೇಗ್, ಸಬ್ ಇನ್ಸ್ ಪೆಕ್ಟರ್ ಗಣೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿರೆಡ್ಡಿ, ಯುವ ಕಾಂಗ್ರೇಸ್ ನ ಬಾಲೇನಹಳ್ಳಿ ರಮೇಶ್, ಹಂಪಸಂದ್ರ ಗ್ರಾ.ಪಂ ಸದಸ್ಯ ಪ್ರಕಾಶ್, ಮುಖಂಡರಾದ ಕೃಷ್ಣೇಗೌಡ, ರಮಣಪ್ಪ, ಮೂರ್ತಿ, ನಾರಾಯಣಸ್ವಾಮಿ ಸೇರಿದಂತೆ ಹಲವರು ಇದ್ದರು.

29ಜಿಯುಡಿ2: ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾ.ಪಂ ವ್ಯಾಪ್ತಿಯ ಚೆಂಡೂರು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಗುದ್ದಲಿ ಪೂಜೆ ನೆರವೇರಿಸಿದರು.