ಪಾಲಿಕೆ ಸದಸ್ಯರ ಆಸಕ್ತಿ ಮೇರೆಗೆ ವಾರ್ಡಿನಲ್ಲಿ ಒಳಚರಂಡಿ, ಮುಖ್ಯ ರಸ್ತೆಗಳ ದುರಸ್ತಿ, ಪ್ರತಿ ಕಾಲನಿಗೊಂದು ಸಮುದಾಯ ಭವನ ನಿರ್ಮಾಣಕ್ಕಾಗಿ ಮನವಿ ಮಾಡಲಾಗಿತ್ತು. ಅದರಂತೆ ಈಗ ಅಚ್ಚಮ್ಮನ ಕಾಲನಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ.
ಹುಬ್ಬಳ್ಳಿ:
ಸೆಂಟ್ರಲ್ ಮತಕ್ಷೇತ್ರದ ನಾಗರಿಕರಿಗೆ ಅವಶ್ಯಕ ಸೌಲಭ್ಯ ಒದಗಿಸುವ ಮೂಲಕ ಮಾದರಿ ಕ್ಷೇತ್ರವನ್ನಾಗಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.ಇಲ್ಲಿನ ಉಣಕಲ್ ಅಚ್ಚಮ್ಮ ಕಾಲನಿಯಲ್ಲಿ ಮಹಾನಗರ ಪಾಲಿಕೆ ಅನುದಾನದಡಿ ಸಮುದಾಯ ಭವನ ನಿರ್ಮಾಣದ ಭೂಮಿಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಪಾಲಿಕೆ ಸದಸ್ಯರ ಆಸಕ್ತಿ ಮೇರೆಗೆ ವಾರ್ಡಿನಲ್ಲಿ ಒಳಚರಂಡಿ, ಮುಖ್ಯ ರಸ್ತೆಗಳ ದುರಸ್ತಿ, ಪ್ರತಿ ಕಾಲನಿಗೊಂದು ಸಮುದಾಯ ಭವನ ನಿರ್ಮಾಣಕ್ಕಾಗಿ ಮನವಿ ಮಾಡಲಾಗಿತ್ತು. ಅದರಂತೆ ಈಗ ಅಚ್ಚಮ್ಮನ ಕಾಲನಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ. ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಲಾಗುವುದು. ಅದೇ ರೀತಿ ಸೆಂಟ್ರಲ್ ಕ್ಷೇತ್ರವು ರಾಜ್ಯದಲ್ಲಿಯೇ ಮಾದರಿಯಾಗಿರುವಂತೆ ತಾವು ಶ್ರಮಿಸುತ್ತಿರುವುದಾಗಿ ತಿಳಿಸಿದರು.ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಪ್ರಾಸ್ತಾವಿಕ ಮಾತನಾಡಿದರು. ಕಳೆದ ಸಾಲಿನಲ್ಲಿ ಸಿಲಿಂಡರ್ ಸ್ಫೋಟದಲ್ಲಿ ಸಾವನ್ನಪ್ಪಿದ 8 ಅಯ್ಯಪ್ಪ ಸ್ವಾಮಿಗಳ ಮಾಲಾಧಾರಿಗಳ ಪೈಕಿ ನಾಲ್ಕು ಕುಟುಂಬಕ್ಕೆ ಮಹಾನಗರ ಪಾಲಿಕೆಯಿಂದ ತಲಾ ₹ 1 ಲಕ್ಷ ಪರಿಹಾರದ ಚೆಕ್‌ನ್ನು ಶಾಸಕ ಮಹೇಶ ಟೆಂಗಿನಕಾಯಿ ವಿತರಿಸಿದರು. ಇನ್ನುಳಿದ ಉಳಿದ ನಾಲ್ಕು ಮೃತರ ಸಂಬಂಧಿಕರು ಸಂಬಂಧಪಟ್ಟ ದಾಖಲೆ ಒದಗಿಸಿದ ತಕ್ಷಣ ನೀಡಲಾಗುವದು ಎಂದು ವಲಯ ಆಯುಕ್ತ ಕೆಂಭಾವಿ ಹೇಳಿದರು.
ಈ ವೇಳೆ ಸೋಮು ಪಾಟೀಲ, ಪರಶುರಾಮ ಹೊಂಬಾಳ, ಕೆ.ಎಸ್. ಕಾಮಟಿ, ರಾಯಣಗೌಡ ಭೀಮನಗೌಡ್ರ, ಶಂಕರ ಚಿಲ್ಲನ್ನವರ, ವಾರ್ಡ್ ಅಧ್ಯಕ್ಷ ಬಸವರಾಜ ಮಾಡಳ್ಳಿ, ಎಸ್.ಐ. ನೇಕಾರ ಇದ್ದರು.