ಶಾಲೆಗಳಲ್ಲಿ ರಕ್ಷಣಾ ಸಮಿತಿಗಳ ರಚನೆ ಮತ್ತು ಕಡ್ಡಾಯ ಶಿಕ್ಷಣದ ಮಹತ್ವದ ಕುರಿತು ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ
ಕೊಪ್ಪಳ: ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆ ತಾಲೂಕಿನ ಕಾತರಿಕಿ–ಗುಡ್ಲಾನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಯಶಸ್ವಿಯಾಗಿ ನಡೆಯಿತು.
ಸಭೆಯಲ್ಲಿ ಪ್ರಾಸ್ತಾವಿಕ ಮಾತನಾಡಿದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸೋಮಶೇಖರ್, ಎಲ್ಲ ಶಾಲೆಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲಾಗುವುದು ಹಾಗೂ ಗ್ರಾಪಂ, ವಿವಿಧ ಇಲಾಖೆ ಮತ್ತು ಸಮುದಾಯದ ಸಹಕಾರದಿಂದ ಮಾತ್ರ ಮಕ್ಕಳ ಹಕ್ಕುಗಳ ರಕ್ಷಣೆ ಸಾಧ್ಯವೆಂದರು.ಸಿಆರ್‌ಪಿ ನಾಗರಾಜ್ ಮಾತನಾಡಿ, ಶಾಲೆಗಳಲ್ಲಿ ರಕ್ಷಣಾ ಸಮಿತಿಗಳ ರಚನೆ ಮತ್ತು ಕಡ್ಡಾಯ ಶಿಕ್ಷಣದ ಮಹತ್ವದ ಕುರಿತು ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಸ್ಥಳೀಯ ಗ್ರಾಪಂ ಉಪಾಧ್ಯಕ್ಷ ವಿರುಪಾಕ್ಷಗೌಡ ಪಾಟೀಲ್ ಮಾತನಾಡಿ, ಗ್ರಾಪಂಯಿಂದ ಸಾಧ್ಯವಾಗುವ ಎಲ್ಲ ಮೂಲಸೌಕರ್ಯ ಒದಗಿಸುವ ಭರವಸೆ ನೀಡಿದರು.ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ಪ್ರತಿನಿಧಿ ಸುಭಾನ್ ಸಾಬ್ ನೀರಲಗಿ ಮಾತನಾಡಿ, ಮಕ್ಕಳ ವಯೋಮಿತಿ, ಮಕ್ಕಳ ಸಹಾಯವಾಣಿ 1098, ಮಕ್ಕಳ ಹಕ್ಕುಗಳು ಹಾಗೂ ವಿವಿಧ ಇಲಾಖೆಗಳ ಮೂಲಕ ಲಭ್ಯವಿರುವ ಯೋಜನೆಗಳ ಕುರಿತು ವಿವರಿಸಿದರು. ಜತೆಗೆ ರತಿ ಫೌಂಡೇಶನ್ ಸಹಾಯವಾಣಿ 6363176363 ಕುರಿತು ಸಹ ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸೂಪರ್‌ವೈಸರ್ ಚಂದ್ರಪ್ರಭಾ, ಕಥೆಯ ಮೂಲಕ ಬಾಲ್ಯವಿವಾಹದ ದುಷ್ಪರಿಣಾಮಗಳು ಹಾಗೂ ಮಕ್ಕಳ ಸಹಾಯವಾಣಿಯ ಪರಿಣಾಮಕಾರಿ ಬಳಕೆಯ ಕುರಿತು ಮಕ್ಕಳಿಗೆ ಅರಿವು ಮೂಡಿಸಿದರು.ವೈದ್ಯಾಧಿಕಾರಿ ಮರ್ದಾನಬೀ ಮಾತನಾಡಿ, ಆರೋಗ್ಯ ಇಲಾಖೆಯಿಂದ ನೀಡಲಾಗುವ ಚುಚ್ಚುಮದ್ದು, ಮಾತ್ರೆ ಮತ್ತು ಆರೋಗ್ಯ ತಪಾಸಣೆಗಳ ಕುರಿತು ಮಾಹಿತಿ ಹಂಚಿಕೊಂಡರು.
ಮಾಜಿ ಉಪಾಧ್ಯಕ್ಷ ಗ್ಯಾನಪ್ಪ ಸಿಲ್ವರ್ ಮಾತನಾಡಿ, ಶಾಲೆಗಳಲ್ಲಿ ಮಕ್ಕಳು, ಶಿಕ್ಷಕರು ಮತ್ತು ಅಧಿಕಾರಿಗಳ ಕೊರತೆ ಇರುವ ಬಗ್ಗೆ ವಿಷಾದ ವ್ಯಕ್ತಪಡಿಸಿ, ಮಕ್ಕಳ ಸಮಸ್ಯೆಗಳಿಗೆ ಸಮುದಾಯ ಕೂಡಲೇ ಸ್ಪಂದಿಸಬೇಕೆಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಶಾಲೆ ಮತ್ತು ಗ್ರಾಮದ ಸಮಸ್ಯೆ ಸಭೆಯ ಗಮನಕ್ಕೆ ತಂದರು. ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಅಭಿವೃದ್ಧಿ ಅಧಿಕಾರಿಗಳು ಹಾಗೂ ಪಂಚಾಯಿತಿ ಅಧ್ಯಕ್ಷರ ಸಮ್ಮುಖದಲ್ಲಿ ಪರಿಹಾರ ಸೂಚಿಸಲಾಯಿತು. ಉಳಿದ ಸಮಸ್ಯೆ ಮುಂದಿನ ಗ್ರಾಪಂ ಸಭೆಯಲ್ಲಿ ಚರ್ಚಿಸಿ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ಗ್ರಾಪಂ ಅಧ್ಯಕ್ಷೆ ಶಿವಮ್ಮ ಪಾಟೀಲ್, ಉಪಾಧ್ಯಕ್ಷ ವಿರುಪಾಕ್ಷಗೌಡ ಪಾಟೀಲ್, ಮಾಜಿ ಅಧ್ಯಕ್ಷರು, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು, ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ಪ್ರತಿನಿಧಿಗಳು, ಕೆಎಚ್‌ಪಿಟಿ ಪ್ರತಿನಿಧಿಗಳು ಹಾಗೂ ಗ್ರಾಮದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.