ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಅಸಂಘಟಿತ ಕಾರ್ಮಿಕರೆಲ್ಲರೂ ಕಾರ್ಮಿಕ ಇಲಾಖೆಯಡಿ ಬರುತ್ತಾರೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ಸಾಮಾಜಿಕ ಭದ್ರತೆ ಒದಗಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭರವಸೆ ನೀಡಿದರು.ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿದ ಅವರು, ಪತ್ರಕರ್ತರಿಗೆ ನಿವೇಶನ ಒದಗಿಸುವ ಕುರಿತು ಮುಖ್ಯಮಂತ್ರಿ ಹಾಗೂ ವಸತಿ ಸಚಿವರ ಜತೆ ಚರ್ಚಿಸುವುದಾಗಿ ಹೇಳಿದರು.
ಪ್ರೆಸ್ ಫ್ರೀಡಂನಲ್ಲಿ 180 ದೇಶಗಳಲ್ಲಿ ನಮ್ಮ ದೇಶ 161ನೇ ಸ್ಥಾನದಲ್ಲಿದೆ. ಪತ್ರಿಕೋದ್ಯಮ ಸೇರಿದಂತೆ ಬಹುತೇಕ ಎಲ್ಲ ಕ್ಷೇತ್ರಗಳು ಕಲುಷಿತಗೊಂಡಿವೆ. ಯಾರು ಯಾರಿಗೂ ಹೇಳುವ ಸ್ಥಿತಿಯಿಲ್ಲ. ಆದರೆ, ಸಮಾಜಕ್ಕೆ ಏನಾದರೂ ಸಂದೇಶ ನೀಡಲು ಪತ್ರಕರ್ತರು ಬೇಕಾಗುತ್ತದೆ. ದೇಶದಲ್ಲಿ ಬದಲಾವಣೆಯಾಗಲು ಪತ್ರಕರ್ತರ ಪಾತ್ರ ಪ್ರಮುಖವಾಗಿದೆ. ಎಲ್ಲ ಪತ್ರಕರ್ತರು ಪ್ರಾಮಾಣಿಕ, ಬದ್ಧತೆಯಿಂದ ಕಾರ್ಯನಿರ್ವಹಿಸಬೇಕಿದೆ ಎಂದರು.ಅತಿಥಿಗಳಾಗಿ ಆಗಮಿಸಿದ್ದ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನುಂ ಮಾತನಾಡಿ, ಪತ್ರಿಕಾ ದಿನವನ್ನು ಹಬ್ಬದ ರೀತಿಯಲ್ಲಿ ಆಚರಿಸುವುದನ್ನು ಕಂಡಲ್ಲಿ ಸಂತಸವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಪತ್ರಿಕೋದ್ಯಮ ಕೋರ್ಸ್ ಸ್ಥಗಿತವಾಗುವ ಹಂತಕ್ಕೆ ಬಂದಿರುವುದು ಆತಂಕಕಾರಿ ಹಾಗೂ ಚಿಂತನೆ ಮಾಡಬೇಕಾದ ವಿಷಯವಾಗಿದೆ. ಮಾಧ್ಯಮ ಅಕಾಡೆಮಿಯಿಂದಲೂ ಈ ಬಗ್ಗೆ ಚರ್ಚಿಸಲಾಗುವುದು.
ಸ್ವಚ್ಛಗೊಳಿಸುವ ಕಾರ್ಯವಾಗಬೇಕು:ಕೆಲವೇ ಜನರು ಮಾಡುವ ತಪ್ಪುಗಳಿಂದ ಇಡೀ ಕ್ಷೇತ್ರದ ಮಾನ ಹಾಳಾಗುತ್ತಿದೆ. ನಕಲಿ ಪತ್ರಕರ್ತರನ್ನು ಹೊರಹಾಕುವ ಕೆಲಸ ನಾವೇ ಮಾಡಬೇಕು. ಪತ್ರಕರ್ತರು ಒಗ್ಗಟ್ಟು ತೋರಿಸಬೇಕಿದೆ. ಈ ಕ್ಷೇತ್ರವನ್ನು ಸ್ವಚ್ಚಗೊಳಿಸುವ ಕೆಲಸವನ್ನು ನಾವೇ ಮಾಡಬೇಕಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ಪತ್ರಕೋದ್ಯಮ ಇನ್ನಷ್ಟು ಬೆಳೆಸಲು ಸಾಧ್ಯವಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಲೋಚನೇಶ ಹೂಗಾರ ಪ್ರಾಸ್ತಾವಿಕವಾಗಿ ಮಾತನಾಡಿ, ಸಚಿವರು ಪತ್ರಕರ್ತರಿಗೆ ಜೀವನ ಭದ್ರತೆ ಒದಗಿಸುವ ಕೆಲಸ ಮಾಡಬೇಕು. ಗ್ರಾಮೀಣ ಪತ್ರಕರ್ತರಿಗೆ ಬಸ್‌ಪಾಸ್ ನೀಡಿಲ್ಲ. ಮೊದಲಿನಿಂದಲೂ ಸರ್ಕಾರ ಭರವಸೆ ನೀಡುತ್ತ ಬಂದಿದೆ. ಆರೋಗ್ಯ ಕಾರ್ಡ್ ಮತ್ತು ನಿವೇಶನ ಒದಗಿಸುವ ಕೆಲಸ ಸಚಿವರು ಮಾಡಬೇಕು ಎಂದು ಮನವಿ ಮಾಡಿದರು.ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ ಮಾತನಾಡಿ, ಸಂಘದ ಸದಸ್ಯತ್ವದಿಂದ ಸಂಗ್ರಹಿಸಲಾದ ₹65 ಲಕ್ಷ ಹಣವನ್ನು ಪತ್ರಕರ್ತರಿಗಾಗಿ ಕ್ಷೇಮ ನಿಧಿ ಇರಿಸಲಾಗಿದೆ. ಗ್ರಾಮೀಣ ಪತ್ರಕರ್ತರಿಗೆ ಪಾಸ್ ನೀಡುವ ಕುರಿತು ರೂಪುರೇಷೆ ಸಿದ್ಧವಾಗಿದೆ. ಆರೋಗ್ಯ ಕಾರ್ಡ್ ಕೂಡ ವಿತರಿಸುವ ಚಿಂತನೆ ಸರ್ಕಾರ ನಡೆಸಿದೆ ಎಂದರು.
ಇದೇ ಸಂದರ್ಭದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ಪಡೆದ ಎಚ್.ಜಿ. ಬೆಳಗಾಂವಕರ, ಅವ್ವ ಪ್ರಶಸ್ತಿ ಪಡೆದ ಸುಧಾ ಶರ್ಮಾ ಚವತ್ತಿ ಹಾಗೂ ಕನ್ನಡಪ್ರಭದ ಹುಬ್ಬಳ್ಳಿ ವರದಿಗಾರ ಅಜೀಜಅಹ್ಮದ ಬಳಗಾನೂರ ಬರೆದ "ರೋಗಪೀಡಿತ ಮಗುವಿನ ಚಿಕಿತ್ಸೆಗಾಗಿ ತಾಯಿಯ ಪರದಾಟ " ವರದಿಗೆ ಅತ್ಯುತ್ತಮ ಲೇಖನ ಪ್ರಶಸ್ತಿ, ಕನ್ನಡಪ್ರಭದ ಛಾಯಾಗ್ರಾಹಕ ವೀರಪ್ಪ ನಾಯ್ಕರ್ ಅವರ "ಸಂತಸದ ಇಳಿಸಂಜೆ " ಛಾಯಾಚಿತ್ರಕ್ಕೆ ತೀರ್ಪುಗಾರರ ಮೆಚ್ಚುಗೆ ಪ್ರಶಸ್ತಿ ಅಲ್ಲದೇ ಹಲವರಿಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸಂಘದ ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಗಣಪತಿ ಗಂಗೊಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಶೀಲೆಂದ್ರ ಕುಂದರಗಿ ಸೇರಿದಂತೆ ಹಲವರಿದ್ದರು.