Committed to safeguarding the interests of arecanut growers; no need to worry: Eshwar Khandre
ಹೊಳೆಹೊನ್ನೂರು: ರಾಜ್ಯದ ಅಡಿಕೆ ಬೆಳೆಗಾರರ ಹಿತ ಕಾಯಲು ರಾಜ್ಯ ಸರ್ಕಾರ ಬದ್ಧವಾಗಿದೆ. ಬೆಳೆಗಾರರು ಯಾವುದೇ ಕಾರಣಕ್ಕೂ ಆತಂಕ ಪಡಬಾರದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ತಿಳಿಸಿದರು. ಜಿಲ್ಲಾ ಪ್ರವಾಸದ ವೇಳೆ ಸಮೀಪದ ಆಗರದಹಳ್ಳಿಯ ಹೊಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಹನುಮಂತು ಮನೆಗೆ ಭೇಟಿ ನೀಡಿ ಕಾರ್ಯಕರ್ತರ ಕುಶಲೋಪರಿ ವಿಚಾರಿಸಿ ಮಾತನಾಡಿದರು.ಅಡಿಕೆ ಬೆಲೆ ಕುಸಿಯದಂತೆ ಈಗಾಗಲೇ ಕ್ರಮ ಕೈಗೊಂಡಿದ್ದು, ರಾಜ್ಯದ ಅಡಿಕೆ ಬೆಳೆಗಾರರ ಪರ ನಮ್ಮ ಸರ್ಕಾರ ಬದ್ಧವಾಗಿದೆ. ಅಡಿಕೆ ಗುಣಮಟ್ಟ ಹಾಗೂ ಇಳುವರಿ ಹೆಚ್ಚಾಗುವಂತೆ ಅನೇಕ ವೈಜ್ಞಾನಿಕ ಕ್ರಮಗಳನ್ನು ಜಾರಿಗೆ ತರಲಾಗಿದೆ. ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದರು.ಮುಂಬರುವ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳಿಗೆ ಕಾರ್ಯಕರ್ತರು ಸಕಲ ತಯಾರಿ ಮಾಡಿಕೊಳ್ಳಬೇಕು. ಪರಸ್ಪರ ಭಿನ್ನಾಭಿಪ್ರಾಯಗಳನ್ನು ದೂರಮಾಡಿಕೊಂಡು ಒಮ್ಮತದಿಂದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಚುನಾವಣೆಗಳನ್ನು ನಡೆಸುವ ಕುರಿತು ಸರ್ಕಾರದ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಕ್ಷೇತ್ರಗಳ ಮೀಸಲಾತಿ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅ.19ನೇ ತಾರೀಕಿನವರೆಗೆ ಅವಕಾಶ ನೀಡಲಾಗಿತ್ತು ಎಂದರು.ಈವರೆಗೆ ಸುಮಾರು 1008 ಆಕ್ಷೇಪಣೆಗಳು ಬಂದಿದ್ದು, ಅವುಗಳನ್ನು ಒಂದು ವಾರದೊಳಗೆ ಪರಿಶೀಲಿಸಿ ಅಂತಿಮ ಮೀಸಲಾತಿ ಪಟ್ಟಿ ಪ್ರಕಟಿಸಲಾಗುವುದು. ಅಂತಿಮ ಪಟ್ಟಿ ಪ್ರಕಟವಾದ ಬಳಿಕ ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುತ್ತದೆ. ಮತದಾರರ ಪಟ್ಟಿ ಸಿದ್ಧಪಡಿಸುವುದು, ಕ್ಷೇತ್ರವಾರು ಮತದಾರರ ವಿವರಗಳನ್ನು ಸಂಗ್ರಹಿಸುವುದು ಹಾಗೂ ಬ್ಯಾಲೆಟ್ ಮೂಲಕ ಮತದಾನ ನಡೆಸಲು ಅಗತ್ಯವಿರುವ ಬ್ಯಾಲೆಟ್ ಬಾಕ್ಸ್ಗಳು ಸೇರಿದಂತೆ ಇತರ ಸಿದ್ಧತೆಗಳಿಗೆ ಒಂದು ತಿಂಗಳಿಂದ ಒಂದೂವರೆ ತಿಂಗಳವರೆಗೆ ಸಮಯ ಬೇಕಾಗುತ್ತದೆ. ಜನವರಿ ಮೊದಲ ಅಥವಾ ಎರಡನೇ ವಾರದಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಹನುಮಂತು, ಶ್ರೀನಿವಾಸ್ ಕರಿಯಣ್ಣ, ಎಸ್.ಪಿ ದಿನೇಶ್, ಆರ್.ಉಮೇಶ್, ಹೆಚ್.ಎನ್ ನಾಗರಾಜ್, ಕೆ.ಆರ್ ಶ್ರೀಧರ್, ಕೆ.ರಂಗನಾಥ್, ಕಿರಣ್ ಮೋರೆ, ಯಲ್ಲೋಜಿರಾವ್, ನಾಗರಾಜ್ಗೌಡ, ಬಿ.ಟಿ ಹನುಮಂತಪ್ಪ, ಪರಮೇಶ್ವರಪ್ಪ ಮೂಡ್ಲೆರ್, ಚಂದ್ರು, ನಟರಾಜ್ ಪ್ರವೀಣ್, ಅನಂತ, ಶರತ್ ಸೇರಿದಂತೆ ಇತರರಿದ್ದರು.
--------------ಪೋಟೋ : 26 ಎಚ್ಎಚ್ಆರ್ ಪಿ 3
ಹೊಳೆಹನ್ನೂರಿನ ಸಮೀಪದ ಆಗರದಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಹನುಮಂತು ಭೇಟಿ ನೀಡಿದ ಸಚಿವ ಈಶ್ವರ ಖಂಡ್ರೆಗೆ ಕುಟುಂಬದವರು ಗೌರವ ಸಲ್ಲಿಸಿದರು.