ಹಗರಿಬೊಮ್ಮನಹಳ್ಳಿ: ನಾನು ಶಾಸಕನಾಗುವ ಮೊದಲು 10 ವರ್ಷ ಅಧಿಕಾರದಲ್ಲಿದ್ದವರು ರೈತರ ಕಾಳಜಿ ತೋರಿಸಲಿಲ್ಲ. ಗ್ರಾಮದ ರೈತರ ನೀರಾವರಿ ಜಮೀನುಗಳ ಬಲ ಸಂವರ್ಧನೆಗೆ ಅಗತ್ಯವಿದ್ದ ೨೦ ಎಂವಿಎ ವಿದ್ಯುತ್ ಪರಿವರ್ತಕ ತರಲಾಗದವರು ಈಗ ನಾನು ಮಂಜೂರಾತಿ ಮಾಡಿಸಿ ತಂದ ಟ್ರಾನ್ಸ್‌ಫಾರ್ಮರ್ ಮುಂದೆ ನಿಂತು ಫೋಟೋ ತೆಗೆಸಿಕೊಂಡು ಸಂತೃಪ್ತಿ ಪಡಬೇಕಾಗಿದೆ ಎಂದು ಶಾಸಕ ನೇಮಿರಾಜ್ ನಾಯ್ಕ ಲೇವಡಿ ಮಾಡಿದರು.
ತಾಲೂಕಿನ ತಂಬ್ರಹಳ್ಳಿ ವಿದ್ಯುತ್ ಉಪ ಕೇಂದ್ರದಲ್ಲಿ ನೂತನವಾಗಿ ಅಳವಡಿಸಿರುವ ೨೦ ಎಂವಿಎ ವಿದ್ಯುತ್ ಪರಿವರ್ತಕಕ್ಕೆ ಚಾಲನೆ ನೀಡಿ ಬಳಿಕ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.ನಾನು ಶಾಸಕನಾಗುತ್ತಿದ್ದಂತೆಯೇ ಗ್ರಾಮದ ರೈತರ ಸಮಸ್ಯೆಗಳನ್ನು ಆಲಿಸಿ ಇಂಧನ ಸಚಿವ ಜಾರ್ಜ್ ಮತ್ತು ವಿದ್ಯುತ್ ಇಲಾಖೆಯ ಅಪರ ಕಾರ್ಯದರ್ಶಿ ಗುಪ್ತಾ ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿದ ಪರಿಣಾಮ ಗ್ರಾಮದ ವಿದ್ಯುತ್ ಉಪ ಕೇಂದ್ರದಲ್ಲಿರುವ ಎರಡು ೧೨ ಎಂವಿಎ ಟಿಸಿ ಬದಲಾಗಿ ೨೦ ಎಂವಿಎ ಟಿಸಿಗಳ ಮಂಜೂರಾತಿ ದೊರೆತಿದೆ. ಇನ್ನು ಕೆಲವೇ ದಿನಗಳಲ್ಲಿ ಇನ್ನೊಂದು ಟಿಸಿ ಕೂಡ ಗ್ರಾಮಕ್ಕೆ ಬರಲಿದೆ ಎಂದು ಸ್ಪಷ್ಟಪಡಿಸಿದರು.
ತುಂಗಭದ್ರಾ ಹಿನ್ನೀರಿನ ಪ್ರದೇಶವಾಗಿರುವ ತಂಬ್ರಹಳ್ಳಿ ಸುತ್ತಲಿನ ಬಹುತೇಕ ಗ್ರಾಮಗಳಿಗೆ ಹೆಚ್ಚುವರಿ ಗುಣಮಟ್ಟದ ವಿದ್ಯುತ್ ವಿತರಿಸುವಂತೆ ಸದನದಲ್ಲಿ ಪ್ರಸ್ತಾಪಿಸಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕ್ಷೇತ್ರ ವ್ಯಾಪ್ತಿಯ ೧೭ ಕೆರೆಗಳಿಗೆ ನೀರು ತುಂಬುವ ಯೋಜನೆಗೆ ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಒದಗಿಸಿಲ್ಲ. ಕೇಂದ್ರ ಸಚಿವ ಕುಮಾರಸ್ವಾನು ಬಳಿ ಯೋಜನೆ ಪ್ರಸ್ತಾಪಿಸಿ ಯೋಜನೆಯ ಜಾರಿಗೆ ಶ್ರಮಿಸುವೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಬಣಕಾರ್ ಕೊಟ್ರೇಶ್ ಗ್ರಾಮದ ಅಭಿವೃದ್ಧಿ ಕುರಿತು ಶಾಸಕರಿಗೆ ಬಿನ್ನವತ್ತಳೆ ಅರ್ಪಿಸಿದರು.
ಸಮಾರಂಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಾದಾಮಿ ಮೃತ್ಯುಂಜಯ, ರವಿ ಪ್ರಸಾದ್, ಕೊಳ್ಳಿ ವೆಂಕಣ್ಣ, ದೊಡ್ಡಬಸಪ್ಪ, ವೀರನಗೌಡ್, ಸಣ್ಣ ಕೊಟ್ರಪ್ಪ, ಬಣಕಾರ್ ಮಲ್ಲಿಕಾರ್ಜುನ, ಸೊಬಟಿ ಹರೀಶ್, ಆನೇಕಲ್ ಶಾಂತಪ್ಪ, ಸಿದ್ಧರೆಡ್ಡಿ, ಹರಟೆ ಕಾಳಪ್ಪ, ಲಿಂಗಾರೆಡ್ಡಿ, ಗೆಸ್ಕಾಂ ಎಇಇ ಸತೀಶ್, ಉಪ ವಿಭಾಗಾಧಿಕಾರಿ ರವೀಂದ್ರ ಇದ್ದರು.