ಸಾರಾಂಶ
ಸೊರಬ: ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧನಿದ್ದು, ಗ್ರಾಮೀಣ ಪ್ರದೇಶದ ಮೂಲಭೂತ ಸಮಸ್ಯೆಗಳ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುವುದು. ಇದಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.ತಾಲೂಕಿನ ಕಡೆಜೋಳದಗುಡ್ಡೆ ಗ್ರಾಮದಲ್ಲಿ ೨೦ ಲಕ್ಷ ರು. ವೆಚ್ಚದ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಜನಪ್ರತಿನಿಧಿಯಾದವರು ಮೊದಲು ಗ್ರಾಮೀಣ ಪ್ರದೇಶ ಅಭಿವೃದ್ಧಿಗೆ ಹೆಚ್ಚಿನ ಒಲವು ತೋರಬೇಕು. ಇದರಿಂದ ಗ್ರಾಮೀಣರ ಬದುಕು ಹಸನಾಗುತ್ತದೆ. ಹಾಗಾಗಿ ಮುಂದಿನ ದಿನಗಳಲ್ಲಿ ಗ್ರಾಮೀಣ ರಸ್ತೆ, ಕುಡಿಯುವ ನೀರು, ವಿದ್ಯುತ್, ಚರಂಡಿ ನಿರ್ಮಾಣ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಕಾಮಗಾರಿಯಲ್ಲಿ ಯಾವುದೇ ರೀತಿಯ ಲೋಪಗಳು ಎದುರಾಗದಂತೆ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಎಚ್ಚರವಹಿಸಬೇಕು ಎಂದು ಸೂಚಿಸಿದರು.ಚಂದ್ರಗುತ್ತಿ ಹೋಬಳಿ ವ್ಯಾಪ್ತಿಯ ಜೀವನದಿ ವರದಾ ನದಿಗೆ ೬ ಕಡೆ ಬ್ಯಾರೇಜ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಶೀಘ್ರದಲ್ಲಿ ಕಾಮಗಾರಿ ಸಂಪೂರ್ಣಗೊಳ್ಳಲಿದೆ. ಈ ಮೂಲಕ ವರದಾ ನದಿ ಪಾತ್ರದ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಿದಂತಾಗುತ್ತದೆ ಎಂದು ಹೇಳಿದರು.ಐತಿಹಾಸಿಕ ಮತ್ತು ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬೆಯ ನೆಲೆಬೀಡು ಚಂದ್ರಗುತ್ತಿ ಗ್ರಾಮವನ್ನು ಚಂದ್ರಗುತ್ತಿ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು. ಈಗಾಗಲೇ ಜಿಲ್ಲಾಧಿಕಾರಿ ಮತ್ತು ಪುರಾತತ್ವ ಇಲಾಖೆ ಅಧಿಕಾರಿಗಳೊಂದಿಗೆ ಅಭಿವೃದ್ಧಿ ವಿಚಾರಗಳನ್ನು ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದರು.ಈಗ ನಿರ್ಮಿಸಲು ಉದ್ದೇಶಿಸಿದರು ಕಡೆಜೋಳದಗುಡ್ಡೆಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ೨೦ ಲಕ್ಷ ರು.ಗಳು ಮಂಜೂರಾಗಿದ್ದು, ಜಲ್ಲಿ ಬಿಚ್ಚಾವಣೆಯ ನಂತರ ಡಾಂಬರೀಕರಣಕ್ಕೆ ಇನ್ನಷ್ಟು ಅನುದಾನದ ಹಣ ತಂದು ಸುಗಮ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸರ್ಕಾರ ಮಕ್ಕಳ ವಿದ್ಯಾಭ್ಯಾಸಕ್ಕೆ ಪಠ್ಯ ಚಟುವಟಿಕೆಗಳ ಪೂರಕ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಅದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಗುಣಮಟ್ಟದ ಶಿಕ್ಷಣದೊಂದಿಗೆ ಸಮಾಜದ ಸತ್ಪ್ರಜೆಯಾಗಿ ಹೊರಹೊಮ್ಮಬೇಕು ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಸರಿತಾ ಕೃಷ್ಣಪ್ಪ, ಉಪಾಧ್ಯಕ್ಷ ಎಂ.ಬಿ.ರೇಣುಕಾಪ್ರಸಾದ್, ತಾಪಂ ಮಾಜಿ ಅಧ್ಯಕ್ಷ ಎಚ್.ಗಣಪತಿ ಹುಲ್ತಿಕೊಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ, ಗ್ರಾಪಂ ಸದಸ್ಯ ಎಂ.ಪಿ.ರತ್ನಾಕರ, ತಾಪಂ ಮಾಜಿ ಸದಸ್ಯ ಎನ್.ಜಿ.ನಾಗರಾಜ್, ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ.ಶೇಖರ್, ಗ್ರಾಪಂ ಮಾಜಿ ಸದಸ್ಯ ನಾರಾಯಣಪ್ಪ, ಕಡೆಜೋಳದಗುಡ್ಡೆ ಬೂತ್ ಘಟಕದ ಅಧ್ಯಕ್ಷ ನಂದಪ್ಪ, ಚಂದ್ರಗುತ್ತಿ ಬೂತ್ ಘಟಕದ ಅಧ್ಯಕ್ಷ ಸುಧಾಕರ್, ಗ್ರಾಮ ಸಮಿತಿ ಅಧ್ಯಕ್ಷ ಪರಶುರಾಮ್, ತಹಸೀಲ್ದಾರ್ ಮಂಜುಳಾ ಹೆಗಡಾಳ್, ಮುಖಂಡರಾದ ಚಂದ್ರಪ್ಪ ಕತವಾಯಿ, ಮೋಹನ್ ಕಾನಡೆ, ರಾಮಚಂದ್ರಪ್ಪ, ದ್ಯಾವಪ್ಪ ಲಕ್ಷ್ಮಣ್.ಜೆ ಮತ್ತಿತರರಿದ್ದರು.