ಸಾರಾಂಶ
ಗಜೇಂದ್ರಗಡ: ರಾಜ್ಯದಲ್ಲಿ 2 ಸ್ಥಾನದಿಂದ 110 ಸ್ಥಾನ ಗೆಲ್ಲಿಸುವ ವಿಶ್ವಾಸಾರ್ಹತೆ ಬೆಳೆಸಿಕೊಂಡ ಯಡಿಯೂರಪ್ಪ ಪ್ರಶ್ನಾತೀತ ನಾಯಕರು, ಅವರ ನೇತೃತ್ವದಲ್ಲಿ ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.
ಸ್ಥಳೀಯ ರೋಣ ರಸ್ತೆಯಲ್ಲಿನ ವಾಣಿಜ್ಯ ಮಳಿಗೆಯಲ್ಲಿ ಗುರುವಾರ ಬಿಜೆಪಿ ಮುಖಂಡ ಅಂದಪ್ಪ ಸಂಕನೂರ ಅವರ ಪಪ್ಪಿ ಚಲನಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಸ್ತುತ ಬಿಜೆಪಿಯಲ್ಲಿನ ಸನ್ನಿವೇಶದಲ್ಲಿ ಎಲ್ಲ ಹಿರಿಯರು ಹಾಗೂ ಜನರು ಬಿಜೆಪಿ ಪಕ್ಷಕ್ಕೆ ಕ್ಲೀಯರ್ ಮ್ಯಾಂಡೇಟ್ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷಕ್ಕೆ ನಮ್ಮ ಅಳಿಲು ಸೇವೆ ಏನು ಮಾಡಲಿಕ್ಕೆ ಸಾಧ್ಯವಿದೆ ಎಂದು ಸಮಾನ ಮನಸ್ಕರನ್ನು ಕೂಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ರಾಜ್ಯದಲ್ಲಿನ ಯಡಿಯೂರಪ್ಪ ನಮಗೆ ದೊಡ್ಡ ಹೈಕಮಾಂಡ್, ಪಕ್ಷದ ರಾಷ್ಟ್ರೀಯ ನಾಯಕರು ಎಲ್ಲರೂ ಸೇರಿಕೊಂಡು ಮುಂದಿನ ದಿನಗಳಲ್ಲಿ ಪರಿಹಾರ ಮಾಡುತ್ತಾರೆ ಎಂದರು.
ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಯತ್ನಾಳ, ಅಶೋಕ, ಅಶ್ವಥ್ ನಾರಾಯಣ ಹಾಗೂ ನಾನು ಸೇರಿದಂತೆ ಅನೇಕರು ಬಿಜೆಪಿ ರಾಜ್ಯಾಧ್ಯಕ್ಷ ಆಗಬೇಕು ಎಂಬುದು ಕಾರ್ಯಕರ್ತರ ಆಶಯವಾಗಿದೆ. ಹೀಗಾಗಿ ಪಕ್ಷದಲ್ಲಿನ ಸಮಾನ ಮನಸ್ಕ ಮನಸ್ಸಿನ ಹಾಗೂ ಎಲ್ಲ ನಾಯಕರ ಒಮ್ಮತ ನಿರ್ಧಾರಕ್ಕೆ ಬರಬೇಕಿದೆ. ನಮ್ಮ ಪ್ರಶ್ನಾತೀತ ನಾಯಕ ಯಡಿಯೂರಪ್ಪ ನೇತೃತ್ವದಲ್ಲಿ ಮುಂದಕ್ಕೆ ಏನು ಮಾಡಬೇಕಿದೆ ಎಂದು ತೀರ್ಮಾನ ಕೈಗೊಳ್ಳುತ್ತೇವೆ.
ಅವಕಾಶವಿದ್ದರೆ ನನಗೆ ಜವಾಬ್ದಾರಿ ನೀಡಿ ಎಂದು ಕೇಳಿದ್ದೇನೆ. ಪಕ್ಷದಲ್ಲಿ ಬಹಳಷ್ಟು ಮಂದಿ ಬೇಸರದಲ್ಲಿದ್ದಾರೆ. ಅವರನ್ನು ಒಂದು ವೇದಿಕೆಯಲ್ಲಿ ತರುವ ಕೆಲಸ ಮಾಡುತ್ತೇವೆ ಎಂದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರವು ಪಂಚ ಗ್ಯಾರಂಟಿಗಳಿಂದ ಮುಂದಿನ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎನ್ನುವ ಮನಸ್ಥಿತಿಯಲ್ಲಿದ್ದು, ಅಭಿವೃದ್ಧಿ ಕಾರ್ಯ ಮರೆತಿದೆ. ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ. ಜನರು ನೀಡಿದ ಬಹುಮತ ದುರುಪಯೋಗ ರಾಜ್ಯ ಕಾಂಗ್ರೆಸ್ ಮಾಡಿಕೊಳ್ಳುತ್ತಿದ್ದೆ. ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜನರ ವಿಶ್ವಾಸ ಪಡೆದು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಬಿಜೆಪಿ ಮುಖಂಡ ಅಂದಪ್ಪ ಸಂಕನೂರ ಸೇರಿ ಇತರರು ಇದ್ದರು.