ದೇಶದ ಅಭಿವೃದ್ಧಿಗಾಗಿ ಪಣ: ಪದ್ಮರಾಜ್‌ ಪೂಜಾರಿ

| Published : Apr 20 2024, 01:01 AM IST

ದೇಶದ ಅಭಿವೃದ್ಧಿಗಾಗಿ ಪಣ: ಪದ್ಮರಾಜ್‌ ಪೂಜಾರಿ
Share this Article
  • FB
  • TW
  • Linkdin
  • Email

ಸಾರಾಂಶ

ರೋಡ್‌ ಶೋನಲ್ಲಿ ಪಾದಯಾತ್ರೆಯ ಮೂಲಕ ಹಾಗೂ ವಾಹನಗಳಲ್ಲಿ ನೂರಾರು ಕಾರ್ಯಕರ್ತರು, ನಾಯಕರು ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ಮಂಗಳೂರು

ಸ್ವಾರ್ಥರಹಿತ ಸಮಾಜಕ್ಕಾಗಿ, ದೇಶದ ಅಭಿವೃದ್ಧಿಗಾಗಿ ಶ್ರಮ ವಹಿಸುವುದಾಗಿ ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹೇಳಿದ್ದಾರೆ.

ಸುಳ್ಯ ಹಳೆಗೇಟಿನಿಂದ ಖಾಸಗಿ ಬಸ್ ನಿಲ್ದಾಣದವರೆಗೆ ರೋಡ್ ಶೋ ನಡೆಸಿದ ಬಳಿಕ ನಡೆದ ಕಾರ್ನರ್ ಮೀಟಿಂಗ್‌ನಲ್ಲಿ ಅವರು ಮಾತನಾಡಿದರು.ನಾವೆಲ್ಲ ಸದೃಢ ಭಾರತ ಆಗಬೇಕು, ಭಾರತ ವಿಶ್ವಗುರು ಆಗಬೇಕು ಎಂಬ ಆಶಯ ಹೊಂದಿದ್ದೇವೆ. ಇದಕ್ಕಾಗಿ ಮೊದಲು ನಮ್ಮ ಮನೆ, ಸಮಾಜ ಸದೃಢಗೊಳ್ಳಬೇಕು. ಯುವ ಜನಾಂಗ ಊರು ಬಿಟ್ಟು ಬೇರೆ ಪಟ್ಟಣಗಳಿಗೆ ವಲಸೆ ಹೋಗುವಂತೆ ಆಗಬಾರದು. ಹಾಗಾಗಿ ನಮ್ಮ ಊರಿನಲ್ಲೇ ಉದ್ದಿಮೆಗಳ ಸೃಷ್ಟಿ ಆಗಬೇಕಿದೆ. ಈ ನಿಟ್ಟಿನಲ್ಲಿ ಶ್ರಮ ವಹಿಸಲಿದ್ದೇನೆ ಎಂದು ಹೇಳಿದರು.

ದ.ಕ.ದಲ್ಲಿ ಬಿಜೆಪಿ ಸಂಸದರಿದ್ದ ಕಳೆದ 33 ವರ್ಷಗಳಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಕಾಂಗ್ರೆಸ್ ಸಂಸದರಿದ್ದಾಗ ಆಗಿದ್ದ ಅಭಿವೃದ್ಧಿ, ಜಿಲ್ಲೆಗೆ ಬಂದಿದ್ದ ಯೋಜನೆಗಳು ಜಿಲ್ಲೆಯನ್ನು ಮಾದರಿಯಾಗಿ ರೂಪಿಸಿತ್ತು ಎಂದರು.

ಅಭಿವೃದ್ಧಿಯ ವಿಚಾರವಾಗಿ ನಾವು ಚುನಾವಣೆಯನ್ನು ಎದುರಿಸಬೇಕಾಗಿದೆ ಎಂದ ಪದ್ಮರಾಜ್‌, ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವು ಸ್ಪಷ್ಟವಾಗಿದೆ. ಮನೆಮನೆಗಳಿಗೆ ತೆರಳಿ ಆಣೆ- ಪ್ರಮಾಣ ಮಾಡಿಸುವ ಕೆಲಸಕ್ಕೂ ಮುಂದಾಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಇದಕ್ಕೆ ತಲೆಕೆಡಿಸಿಕೊಳ್ಳದೆ, ಪ್ರೀತಿಯಿಂದ ಚುನಾವಣೆಯನ್ನು ಎದುರಿಸಲು ಸಿದ್ಧರಾಗಿ ಎಂದು ಕರೆ ನೀಡಿದರು.

ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಇಂದು ಅಭಿವೃದ್ಧಿಯ ವಿಚಾರವಾಗಿ ಚರ್ಚೆ ಆಗಬೇಕಾಗಿದೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಈಗಾಗಲೇ ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡಲಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಇನ್ನೂ ಹಲವು ಗ್ಯಾರಟಿ ಯೋಜನೆಗಳು ಜನರಿಗೆ ಸಿಗಲಿವೆ ಎಂದರು.

ಇದೇ ಸಂದರ್ಭ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡರು. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್‌, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮುಖಂಡರು ಇದ್ದರು.

ರೋಡ್‌ ಶೋನಲ್ಲಿ ಪಾದಯಾತ್ರೆಯ ಮೂಲಕ ಹಾಗೂ ವಾಹನಗಳಲ್ಲಿ ನೂರಾರು ಕಾರ್ಯಕರ್ತರು, ನಾಯಕರು ಪಾಲ್ಗೊಂಡರು. ಬಳಿಕ ಪದ್ಮರಾಜ್ ಆರ್. ಪೂಜಾರಿ ಅವರು ತೋಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯ, ದೈವಸ್ಥಾನಗಳಿಗೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು.ಪ್ರಚಾರಕ್ಕೆ ಮುಟ್ಟಾಳೆ ರಂಗು: ರೋಡ್ ಶೋದಲ್ಲಿ ತುಳುನಾಡಿನ ಮುಟ್ಟಾಳೆಗೆ ಕಾಂಗ್ರೆಸ್‌ ಬಣ್ಣ ಬಳಿದು ಸುಳ್ಯ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಗೋಕುಲ್‌ದಾಸ್‌ ಗಮನ ಸೆಳೆದರು. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರು ಅಡಕೆ ಬೆಳೆಗಾರರ ಪರವಾಗಿ ಇದ್ದಾರೆ ಎನ್ನುವುದರ ದ್ಯೋತಕವಾಗಿ ಅಡಕೆ ಹಾಳೆಯ ಮುಟ್ಟಾಳೆ ಧರಿಸಿದ್ದೇನೆ ಎಂದವರು ಹೇಳಿದರು.