ಸಾರಾಂಶ
ಕನ್ನಡಪ್ರಭ ವಾರ್ತೆ ಸಿದ್ದಾಪುರ
ಚುನಾವಣಾ ಪ್ರಚಾರ ನಿರತ ಬಿಜೆಪಿ ಕಾರ್ಯಕರ್ತನ ಮೇಲೆ ಕಾರು ಹಾಯಿಸಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿ ಸಿದ್ದಾಪುರದಲ್ಲಿ ವಿವಿಧ ಹಿಂದೂಪರ ಸಂಘಟನೆಗಳ ಮತ್ತು ಬಿಜೆಪಿ ಕಾರ್ಯಕರ್ತರು ಮೃತದೇಹವನ್ನು ಶವಗಾರದಲ್ಲಿರಿಸಿ ಮುಖ್ಯ ರಸ್ತೆ ತಡೆದು ಶುಕ್ರವಾರ ಪ್ರತಿಭಟನೆ ನಡೆಸಿದರು.ಘಟನೆಗೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ಮತ್ತು ಗಂಭೀರ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿರುವ ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ಸರ್ಕಾರ ಪರಿಹಾರ ನೀಡಬೇಕು ಹಾಗೂ ಹತ್ಯೆ ನಡೆಸಿದ ಆರೋಪಿಗಳನ್ನು ಬಂಧಿಸಬೇಕೆಂದು ಈ ಸಂದರ್ಭ ಒತ್ತಾಯಿಸಲಾಯಿತು.
ವಾಲ್ನೂರಿನಲ್ಲಿ ಮತ ಯಾಚನೆ ಸಂದರ್ಭ ಗುರುವಾರ, ವಾಹನ ಡಿಕ್ಕಿಯಾಗಿ ಬಿಜೆಪಿ ಕಾರ್ಯಕರ್ತ ರಾಮಪ್ಪ ಮೃತಪಟ್ಟಿದ್ದಾರೆ. ಇತರ ಇಬ್ಬರೂ ಬಿಜೆಪಿ ಕಾರ್ಯಕರ್ತರಾದ ಚಂದ್ರರಾಜ್ ಮತ್ತು ರತೀಶ್ ಗಂಭೀರ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಮೃತರ ಕುಟುಂಬಕ್ಕೆ 25 ಲಕ್ಷ ರು. ಪರಿಹಾರ ನೀಡಬೇಕೆಂದು ಪ್ರತಿಭಟನಾನಿರತರು ಒತ್ತಾಯಿಸಿದರು.ವಾಹನ ಚಲಾಯಿಸಿದ ಕಂಬಿಬಾಣೆ ನಿವಾಸಿ ಹರ್ಷದ್ ಬಂಧನ ಮಾತ್ರವಾಗಿದ್ದು ಕಾರಿನಿಂದ ಪರಾರಿಯಾದ ಇತರ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದು ಸುಮಾರು ಎರಡು ಗಂಟೆ ಕಾಲ ರಸ್ತೆ ತಡೆ ನಡೆಸಿದರು. ಇದರಿಂದಾಗಿ ಕೆಲ ಗಂಟೆಗಳ ಕಾಲ ಮಡಿಕೇರಿ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತವು.
ಶಾಸಕರ ಭೇಟಿ:ಪ್ರತಿಭಟನಗೂ ಮೊದಲು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಸಿದ್ದಾಪುರ ಆಸ್ಪತ್ರೆಯ ಶವಾಗಾರಕ್ಕೆ ಆಗಮಿಸಿ ಮೃತದೇಹ ವೀಕ್ಷಿಸಿ ನಂತರ ಕುಟುಂಬದವರಿಗೆ ಸ್ವಾಂತನ ಹೇಳಿದರು. ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ಸರ್ಕಾರ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಿದೆ ಹಾಗೂ ಮೃತರ ಕುಟುಂಬಕ್ಕೆ ಸರ್ಕರದಿಂದ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದರು.
ಮಡಿಕೇರಿ ಶಾಸಕ ಮಂತರ್ ಗೌಡ ಕೂಡ ಸ್ಥಳಕ್ಕೆ ಆಗಮಿಸಿ ಮೃತದೇಹ ವೀಕ್ಷಿಸಿ ತೆರಳುವ ಸಂಧರ್ಭ ಬಿಜೆಪಿ ಕಾರ್ಯಕತ್ರರು ಶಾಸಕರ ಮುಂದೆ ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡುವಂತೆ ಪಟ್ಟು ಹಿಡಿದರು. ಈ ಸಂದರ್ಭ ಮಾತನಾಡಿದ ಶಾಸಕರು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಪರಿಹಾರ ಘೋಷಣೆ ಮಾಡಲು ಸಾಧ್ಯವಿಲ್ಲ. ಮುಂದೆ ವಿಷಯವನ್ನು ಗೃಹ ಸಚಿವರ ಗಮನಕ್ಕೆ ತರಲಾಗುವುದೆಂದರು.ಇದಕ್ಕೆ ಒಪ್ಪದ ಕಾರ್ಯಕಕರ್ತರು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು. ಶಾಸಕರು ಸ್ಥಳದಿಂದ ತೆರಳದಂತೆ ತಡೆದು ತರಾಟೆಗೆ ತೆಗೆದುಕೊಂಡರು. ಕೂಡಲೇ ಮಧ್ಯ ಪ್ರವೇಶಿಸಿದ ಪೋಲಿಸರು ಶಾಸಕರಿಗೆ ಭದ್ರತೆ ನೀಡಿ ಸ್ಥಳದಿಂದ ತೆರಳಲು ಅವಕಾಶ ಕಲ್ಪಿಸಿದರು.
ಬಿಜೆಪಿ ಪ್ರಮುಖರ ಭೇಟಿ:ಸಿದ್ದಾಪುರ ಆಸ್ಪತ್ರೆಯ ಶವಗಾರಕ್ಕೆ ಭೇಟಿ ನೀಡಿ ಮೃತದೇಹ ವಿಕ್ಷೀಸಿದ ಬಿಜೆಪಿ ಪ್ರಮುಖರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಿದ್ದಾಪುರದಲ್ಲಿ ಸುದ್ದಿಗಾರೊಂದಿಗೆ ಬಿಜೆಪಿ ಅಭ್ಯರ್ಥಿ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ತನ್ನ ಪರ ಪ್ರಚಾರ ನಡೆಸುತಿದ್ದವರನ್ನು ಹತ್ಯೆ ಮಾಡಿರುವುದು ಖಂಡನೀಯ. ಕೂಡಲೇ ಸರ್ಕಾರ ಕೃತ್ಯ ನಡೆಸಿದವರನ್ನು ಬಂಧಿಸಿ ತಕ್ಕ ಶಿಕ್ಷೆ ನೀಡಬೇಕು ಎಂದರು.
ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಕಾನೂನು ಹದಗೆಟ್ಟಿದ್ದು ಒಂದು ವರ್ಗದವರನ್ನು ಓಟಿಗಾಗಿ ಸರ್ಕಾರ ಒಲೈಕೆ ಮಾಡುತ್ತಿದೆ. ಈ ಕೃತ್ಯವನ್ನುಸರ್ಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಕ್ಷರಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ರಾಜ್ಯದಲ್ಲಿ ಸರಣಿಯಾಗಿ ಹಿಂದೂ ಕಾರ್ಯಕಕರ್ತರ ಹತ್ಯೆಯಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭಯೋತ್ಪಾದಕ ದರೋಡೆ ಪ್ರಕರಣಗಳು ಜಾಸ್ತಿಯಾಗಿದ್ದು ಸರ್ಕಾರ ಒಂದು ಕೋಮಿನವರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆದು ಬಿಜೆಪಿ ಕಾರ್ಯಕರ್ತರ ಮೇಲೆ ಕಿರುಕುಳ ಹಲ್ಲೆ ನಡೆಸಲು ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಮಾತನಾಡಿ, ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಹಿಂದೂ ಕಾರ್ಯಕರ್ತರ ಹತ್ಯೆಯಾಗುತ್ತಿದೆ. ಒಂದೆ ದಿನದಲ್ಲಿ ರಾಜ್ಯದಲ್ಲಿ ನಾಲ್ಕು ಇಂತಹ ಘಟನೆಗಳಾಗಿದ್ದು ಹುಬ್ಬಳಿಯಲ್ಲಿ ನೇಹಾ ಹೀರೆಮಠ್ ಎಂಬ ಯುವತಿಯನ್ನು ಲವ್ ಜಿಹಾದ್ ಹೆಸರಿನಲ್ಲಿ ಇರಿದು ಹತ್ಯೆ ಮಾಡಿರುವುದು, ಜೈ ಶ್ರೀ ರಾಂ ಘೋಷಣೆ ಕೂಗಿದಕ್ಕೆ ಹಲ್ಲೆ ಸೇರಿದಂತೆ ಹಿಂದೂಗಳ ಮೇಲೆ ಜಿಹಾದಿ ಸಂತತಿಗಳು ಆಕ್ರಮಣ ಮಾಡಲು ಸರ್ಕಾರದ ಕುಮ್ಮಕ್ಕೆ ಕಾರಣ ಎಂದರು.ಮೃತರ ಕುಟುಂಬಕ್ಕೆ ಬಿಜೆಪಿ ವತಿಯಿಂದ 10 ಲಕ್ಷ ರು. ನೆರವು ನೀಡಲಾಗುವುದು ಎಂದು ಸಿ.ಟಿ.ರವಿ ಭರವಸೆ ನೀಡಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ರವಿ ಕಾಳಪ್ಪ, ಪಕ್ಷದ ಪ್ರಮುಖರಾದ ಭಾರತೀಶ್, ವಿ ಕೆ ಲೋಕೇಶ್, ಚಲನ್ , ಸುವಿನ್ ಗಣಪತಿ , ಹಿಂದೂ ಪರ ಸಂಘಟನೆಗಳ ಪ್ರಮುಖರಾದ ರಘು ಸಕಲೇಶಪುರ, ಮೀರನ್ ಕಾರ್ಯಪ್ಪ, ಕಂಠಿ ಕಾರ್ಯಪ್ಪ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.ಜಿಲ್ಲಾ ಎಸ್‌ಪಿ, ಎಎಸ್‌ಪಿ ನೇತೃತ್ವದಲ್ಲಿ ಸುಮಾರು 300 ಕ್ಕೂ ಅಧಿಕ ಪೋಲಿಸ್ ಸಿಬ್ಬಂದಿ ಬಂದೋಬಸ್ತು ಒದಗಿಸಿದರು.
..........ಎಲ್ಲ ಆರೋಪಿಗಳ ಬಂಧನ ಶೀಘ್ರ: ಎಸ್ಪಿ ಭರವಸೆಎಸ್ ಪಿ ರಾಮರಾಜನ್ ಮಾತನಾಡಿ, ಘಟನೆಗೆ ಸಂಭಂದಿಸಿದಂತೆ ಈಗಾಗಲೇ ಓರ್ವನನ್ನು ಬಂದಿಸಲಾಗಿದ್ದು ಉಳಿದ ಆರೋಪಿಗಳನ್ನು ಕೂಡಲೇ ಬಂಧಿಸಲಾಗುವುದು. ಆರೋಪಿಗಳ ಮೇಲೆ ಕೊಲೆ ಸೇರಿದಂತೆ ಇನ್ನಿತರ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ವೆಂಕಟರಾಜ್, ಈ ಭಾಗದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಈಗಾಗಲೇ ಸಿದ್ದಾಪುರ ಸೇರಿದಂತೆ ಸುತ್ತ ಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಹಾಗೂ ಮೃತರ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದರು. ನಂತರ ಪ್ರತಿಭಟನೆ ಹಿಂಪಡೆದು ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ವಾಲ್ನೂರಿಗೆ ಸಾಗಿಸಲಾಯಿತು.