ಕನ್ನಡ ನೆಲ, ಜಲ, ನಾಡು, ಭಾಷೆ ಉಳಿವಿಗಾಗಿ ಪ್ರತಿಯೊಬ್ಬರೂ ಕಂಕಣಬದ್ಧರಾಗಬೇಕು ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ತುಮಕೂರುಕನ್ನಡ ನೆಲ, ಜಲ, ನಾಡು, ಭಾಷೆ ಉಳಿವಿಗಾಗಿ ಪ್ರತಿಯೊಬ್ಬರೂ ಕಂಕಣಬದ್ಧರಾಗಬೇಕು ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಕರೆ ನೀಡಿದರು. ನಗರದ ಸೋಮೇಶ್ವರ ಬಡಾವಣೆಯಲ್ಲಿ ಮಯೂರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ 18 ನೇ ವರ್ಷದ ಸೋಮೇಶ್ವರ ಕನ್ನಡ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ನೆಲ, ಜಲ, ಭಾಷೆಯ ಬಗ್ಗೆ ಪ್ರತಿಯೊಬ್ಬ ಕನ್ನಡಿಗರು ಅಭಿಮಾನ ಬೆಳೆಸಿಕೊಳ್ಳಬೇಕು. ಈ ಮೂಲಕ ನಮ್ಮ ನೆಲ, ಜಲ ಹಾಗೂ ಭಾಷೆಗೆ ಧಕ್ಕೆ ಬಂದಾಗ ಹೋರಾಟ ನಡೆಸುವ ಮನೋಭಾವ ಹೊಂದಬೇಕು. ಪ್ರಸ್ತುತ ದಿನಗಳಲ್ಲಿ ಕನ್ನಡ ಭಾಷೆಯ ಅಭಿವೃದ್ಧಿಗೆ ಸರ್ಕಾರಗಳ ಜತೆಗೆ ನಾಡಿನಲ್ಲಿರುವ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದ ಅವರು, ಮಯೂರ ವೇದಿಕೆಯಿಂದ ೧೮ನೇ ವರ್ಷದ ಸೋಮೇಶ್ವರ ಕನ್ನಡ ಹಬ್ಬ ಆಚರಿಸುತ್ತಿರುವುದು ಈ ಬಡಾವಣೆಯ ನಾಗರಿಕರ ಸಹಕಾರಕ್ಕೆ ಸಾಕ್ಷಿಯಾಗಿದೆ. ಬಡಾವಣೆಗಳಲ್ಲಿ ಮನೆಯ ಅಕ್ಕಪಕ್ಕ ಬಾಡಿಗೆ ಬರುವ ಅನ್ಯ ಭಾಷೆಯವರಿಗೂ ಕನ್ನಡ ಭಾಷೆ ಕಲಿಸುವ ಕೆಲಸ ಆಗಬೇಕು. ಈ ಕಾರ್ಯವನ್ನು ಬೇರೆ ಯಾರೂ ಮಾಡುವುದಿಲ್ಲ, ನಾವು ನೀವೆಲ್ಲರೂ ಮಾಡಬೇಕು. ಬಡಾವಣೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳಾದರೂ ಮಯೂರು ವೇದಿಕೆಯವರು ತಮ್ಮ ಗಮನಕ್ಕೆ ತರುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ನನ್ನ ಗಮನಕ್ಕೆ ಸಮಸ್ಯೆ ಬಂದ ತಕ್ಷಣ ಅದನ್ನು ಬಗೆಹರಿಸುವ ಕೆಲಸ ಮಾಡಲಾಗುತ್ತಿದೆ. ಮಯೂರು ವೇದಿಕೆಯ ಮುಂದಿನ ದಿನಗಳಲ್ಲಿ ಮತ್ತಷ್ಟು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ ಎಂದು ಆಶಿಸಿದರು. ಮಯೂರ ವೇದಿಕೆಯ ಕನ್ನಡಾಭಿಮಾನ ಹೀಗೆ ಮುಂದುವರೆಯಲಿ, ನಮ್ಮ ಮಾತೃಭಾಷೆಯ ಅಭಿವೃದ್ಧಿಗೆ ಶ್ರಮಿಸಲಿ ಎಂದು ಹೇಳಿದರು.

ಸ್ಫೂರ್ತಿ ಡೆವಲಪರ್ಸ್‌ನ ಎಸ್.ಪಿ. ಚಿದಾನಂದ್ ಮಾತನಾಡಿ, ಕನ್ನಡ ಹಬ್ಬ ಕೇವಲ ನವೆಂಬರ್, ಡಿಸೆಂಬರ್ ತಿಂಗಳಿಗೆ ಸೀಮಿತವಾಗದೆ ಜನವರಿ 1ರಿಂದಲೇ ಕನ್ನಡ ಬಾವುಟವನ್ನು ಎಲ್ಲರೂ ಹಾರಿಸಲು ಸಂಕಲ್ಪ ತೊಡಬೇಕು. ಎಂದು ಕರೆ ನೀಡಿದರು.

ತುಮಕೂರು ನಗರದಲ್ಲಿ ಚಿಕ್ಕಪೇಟೆ ಮತ್ತು ಎಸ್.ಎಸ್.ಪುರಂ ಬಡಾವಣೆಗಳಿಗೆ 100 ವರ್ಷಕ್ಕಿಂತ ಹೆಚ್ಚು ಇತಿಹಾಸ ಇದೆ. ಮಯೂರ ವೇದಿಕೆಯ ಕಾರ್ಯಕರ್ತರು ಬಡಾವಣೆಯ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಡಾವಣೆಯಲ್ಲಿರುವ ಸಂಗೀತ, ನೃತ್ಯ ಕ್ಷೇತ್ರದ ಕಲಾವಿದರಿಗೆ ಹೆಚ್ಚು ಹೆಚ್ಚು ಅವಕಾಶ ಮಾಡಿಕೊಡಬೇಕು ಎಂದು ಅವರು ತಿಳಿಸಿದರು.ಮಯೂರು ವೇದಿಕೆ ಅಧ್ಯಕ್ಷ ಪಿ. ಸದಾಶಿವಯ್ಯ ಮಾತನಾಡಿ, ಕನ್ನಡ ನಾಡು-ನುಡಿ, ನೆಲ, ಜಲ ಉಳಿವಿಗಾಗಿ, ಕನ್ನಡವನ್ನು ಕಟ್ಟಲು ನಾವೆಲ್ಲಾ ಪ್ರಾಮಾಣಿಕ ಪ್ರಯತ್ನ ಮಾಡೋಣ. ಕನ್ನಡ ನಾಡಿನ ಹಿರಿಮೆ-ಗರಿಮೆಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಲು ಶ್ರಮಿಸೋಣ ಎಂದರು. ಈ ಸಂದರ್ಭದಲ್ಲಿ ಸಿದ್ದಗಂಗಾ ಆಸ್ಪತ್ರೆಯ ಡಾ. ಪರಮೇಶ್, ಡಾ. ವರುಣ್ ಅಸ್ರಣ್ಣ, ಮಯೂರ ವೇದಿಕೆಯ ಅಧ್ಯಕ್ಷ ಪಿ. ಸದಾಶಿವಯ್ಯ, ಪ್ರಧಾನ ಕಾರ್ಯದರ್ಶಿ ಎನ್.ಆರ್. ಸ್ವಾಮಿ, ಟಿ.ಸಿ.ಕಾಂತರಾಜು, ಕರುಣಾರಾಧ್ಯ, ಅನು ಶಾಂತರಾಜು, ಚಂದ್ರಶೇಖರ್, ರವಿ ಚೆಂಗಾವಿ, ರಾಜಕುಮಾರ ಗುಪ್ತ, ಎಚ್.ಎಸ್. ಶ್ರೀನಿವಾಸಮೂರ್ತಿ, ರೇಣುಕಯ್ಯ, ಮಂಜೇಶ್, ರೇಣುಕಯ್ಯ, ಶಿವಣ್ಣ ಬಿ.ಆರ್. ಮತ್ತಿತರರು ಉಪಸ್ಥಿತರಿದ್ದರು.