ಸಾರಾಂಶ
ಜಿ.ಡಿ. ಹೆಗಡೆ
ಕಾರವಾರ: ಅನಾರೋಗ್ಯದ ಕಾರಣ ಚುನಾವಣಾ ಕರ್ತವ್ಯದಿಂದ ಬಿಡುಗಡೆ ಮಾಡಬೇಕು ಎಂದು ಪತ್ರ ನೀಡುತ್ತಿರುವವರು ವೈದ್ಯಾಧಿಕಾರಿಗಳ ಬಳಿ ಪ್ರಮಾಣಪತ್ರ ತರಲು ಜಿಲ್ಲಾ ಚುನಾವಣಾಧಿಕಾರಿ(ಡಿಸಿ) ಸಮಿತಿಯನ್ನು ರಚನೆ ಮಾಡಿದ್ದಾರೆ.ಯಾವುದೇ ಸಮಸ್ಯೆ ಇಲ್ಲದೇ ಅನಗತ್ಯವಾಗಿ ಕರ್ತವ್ಯಕ್ಕೆ ಹಾಜರಾಗಲು ಹಿಂದಡಿಯಿಡುವುದನ್ನು ತಪ್ಪಿಸಲು ಸಮಿತಿ ರಚನೆ ಮಾಡಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿ ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರ ಬಳಿ ತೆರಳಿ ವೈದ್ಯಕೀಯ ಪ್ರಮಾಣಪತ್ರ ನೀಡಲು ಜಿಲ್ಲಾ ಚುನಾವಣಾಧಿಕಾರಿ(ಡಿಸಿ) ಸೂಚಿಸಿದ್ದಾರೆ.
ಚುನಾವಣಾ ಕರ್ತವ್ಯದಿಂದ ಬಿಡುಗಡೆ ಮಾಡಲು ಕೋರಿ ಅರ್ಜಿ ನೀಡುವವರು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬೇಕು. ಇದರೊಂದಿಗೆ ಪ್ರಮಾಣಪತ್ರವನ್ನು ನೀಡಬೇಕು. ಜಿಲ್ಲಾ ಚುನಾವಣಾಧಿಕಾರಿ ಪರಿಶೀಲನೆ ಮಾಡಿ ಅಗತ್ಯವಿದ್ದಲ್ಲಿ ಚುನಾವಣಾ ಕರ್ತವ್ಯದಿಂದ ಬಿಡುಗಡೆ ಮಾಡುತ್ತಾರೆ.ಗರ್ಭಿಣಿಯರಿಗೆ, ಬಾಣಂತಿಯರಿಗೆ ೧೮೦ ದಿನಗಳ ವೇತನ ಸಹಿತ ರಜೆಯಿದ್ದು, ಇಂಥವರು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರೆ ಎಚ್‌ಆರ್‌ಎಂಎಸ್‌ನಲ್ಲಿ ಸಲ್ಲಿಸಿದ ರಜಾ ಅರ್ಜಿ ಪ್ರತಿಯನ್ನು ನೀಡಬೇಕಿದೆ. ರಜಾ ಅರ್ಜಿ ನೀಡದಿದ್ದರೆ ಚುನಾವಣಾ ವಿನಾಯಿತಿ ಸಿಗುವುದಿಲ್ಲ.
೬೦ ಜನರಿಂದ ಅರ್ಜಿ: ಜಿಲ್ಲೆಯಲ್ಲಿ ೭ ಸಾವಿರಕ್ಕೂ ಅಧಿಕ ಅಧಿಕಾರಿಗಳು, ಸಿಬ್ಬಂದಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದು, ಇವರಲ್ಲಿ ಹಾಲಿ ೬೦ಕ್ಕೂ ಅಧಿಕ ಜನರು ವಿವಿಧ ಕಾರಣದಿಂದ ಚುನಾವಣಾ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಿಲ್ಲ. ಕರ್ತವ್ಯದಿಂದ ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದಾರೆ. ವಿನಾಯಿತಿಗೆ ಅರ್ಜಿ ನೀಡಲು ಇನ್ನೂ ಸಮಯಾವಕಾಶವಿದ್ದು, ಅರ್ಜಿಯ ಸಂಖ್ಯೆ ಅಧಿಕವಾಗುವ ಸಾಧ್ಯತೆಯಿದೆ.ಚುನಾವಣಾ ಕರ್ತವ್ಯ ನಿರ್ವಹಣೆಗಾಗಿ ಜಿಲ್ಲೆಯಲ್ಲಿ ಒಟ್ಟೂ ರ‍್ಯಾಂಡಮೈಸೇಷನ್ ಮೂಲಕ ೭,೬೩೨ ಸಿಬ್ಬಂದಿ ನಿಯೋಜಿಸಲಾಗಿದೆ. ೧,೪೩೫ ಮತಗಟ್ಟೆ ಸಿಬ್ಬಂದಿ, ೧,೯೦೮ ಪ್ರಿಸೈಡಿಂಗ್ ಅಧಿಕಾರಿಗಳು, ೧,೯೦೮ ಸಹಾಯಕ ಮತಗಟ್ಟೆ ಅಧಿಕಾರಿಗಳು, ೩,೮೧೬ ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಒಟ್ಟೂ ೭,೬೩೨ ಸಿಬ್ಬಂದಿ ನೇಮಕವಾಗಿದ್ದಾರೆ.
ಈ ಬಾರಿ ಲೋಕಸಭಾ ಚುನಾವಣಾ ಪ್ರಕ್ರಿಯೆ ಸುಗಮವಾಗಿ ನಡೆಯಲು ಅಗತ್ಯ ಕ್ರಮ ತೆಗೆದುಕೊಳ್ಳುತ್ತಿದ್ದು, ಸೂಕ್ತ ದಾಖಲೆ ಇದ್ದರೆ ಮಾತ್ರ ಚುನಾವಣಾ ಕರ್ತವ್ಯದಿಂದ ಬಿಡುಗಡೆ ಮಾಡಲು ಜಿಲ್ಲಾ ಚುನಾವಣಾಧಿಕಾರಿ ನಿರ್ಧರಿಸಿದ್ದಾರೆ.ಸೂಕ್ತ ದಾಖಲನೆ ನೀಡಬೇಕು: ಚುನಾವಣಾ ಕರ್ತವ್ಯಕ್ಕೆ ವಿನಾಯಿತಿ ಪಡೆಯಲು ಅರ್ಜಿ ಸಲ್ಲಿಸಿದವರು ಸೂಕ್ತ ದಾಖಲೆ ನೀಡಬೇಕು. ಇದನ್ನು ಜಿಲ್ಲಾಧಿಕಾರಿ ಅವರು ಪರಿಶೀಲಿಸಿ ಕರ್ತವ್ಯದಿಂದ ಬಿಡುಗಡೆ ಮಾಡಬೇಕೇ ಅಥವಾ ಬೇಡವೇ ಎನ್ನುವ ತೀರ್ಮಾನ ಮಾಡುತ್ತಾರೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ತಿಳಿಸಿದ್ದಾರೆ. ಚುನಾವಣಾ ಸಿಬ್ಬಂದಿ: ತಾಲೂಕಾವಾರು ವಿವರಅಂಕೋಲಾ ತಾಲೂಕಿಗೆ ೬೩೮, ಭಟ್ಕಳ ೫೯೫, ಹಳಿಯಾಳ ೬೪೫, ಹೊನ್ನಾವರ ೮೮೨, ಕಾರವಾರ ೮೬೪, ಕುಮಟಾ ೮೪೦, ಮುಂಡಗೋಡ ೫೧೬, ಸಿದ್ದಾಪುರ ೬೪೬, ಶಿರಸಿ ೧,೧೧೩, ಜೋಯಿಡಾ ೨೮೯, ಯಲ್ಲಾಪುರ ೫೦೩, ದಾಂಡೇಲಿ ತಾಲೂಕಿಗೆ ೧೦೧ ಜನರು ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ.