ಕೊಪ್ಪಳ: ಗವಿಸಿದ್ದ ಕೃಪೆ ಮಾಡಿದಾಗ ನಾನು ಬರುತ್ತೇನೆ. ಈಗ ನೀವು ಹೋರಾಟ ಮುಂದುವರಿಸಿರಿ, ನಾನು ಸುಮ್ಮನೆ ಕೂತಿಲ್ಲ. ನನ್ನ ಹಂತದಲ್ಲಿ ಎಲ್ಲ ಪ್ರಯತ್ನ ಮಾಡುತ್ತೇನೆ ಎಂದು ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಫೆ. 24ರಂದು ಬಲ್ಡೋಟ ಹಟಾವೋ ಕೊಪ್ಪಳ ಬಚಾವೋ ಸಮಿತಿಯಿಂದ ಜರುಗುವ ಬಂದ್ ಉದ್ದೇಶಿಸಿ ಸಮಿತಿಯವರಿಗೆ ತಿಳಿಸಿದ್ದಾರೆ.

ನಗರದ ಗವಿಮಠದಲ್ಲಿ ಬಲ್ಡೋಟ ಹಟಾವೋ ಕೊಪ್ಪಳ ಬಚಾವೋ ಹೋರಾಟ ಸಮಿತಿಯಿಂದ ಭೇಟಿ ಮಾಡಿದ ತಂಡಕ್ಕೆ ಮಾರ್ಗದರ್ಶನ ಮಾಡಿದ ಅವರು, ಮಠ ನಿಮ್ಮದೆ‌. ನಿಮ್ಮೊಂದಿಗೆ ಇದ್ದೇನೆ. ಗವಿಸಿದ್ದಪ್ಪಜ್ಜನ ಕೃಪೆ ಆದಾಗ ನಾನು ಬರುತ್ತೇನೆ. ಬಂದ್ ದಿನ ಬಂದವರಿಗೆ ಅನ್ನದಾಸೋಹಕ್ಕೆ ಪ್ರಸಾದ ಆಗಲಿ. ಗವಿಮಠ ನಿಮ್ಮದು, ನೀವೇ ಪ್ರಸಾದ ತಯಾರಿಸಿಕೊಂಡು ಚಳವಳಿಯಲ್ಲಿ ಬಂದವರಿಗೆ ಅನ್ನದಾಸೋಹ ಮಾಡಿ ಎಂದರು.

ನಗರಸಭೆ ಮುಂದೆ 108ನೇ ದಿನದ ಬಲ್ಡೋಟ ಹಟಾವೋ ಕೊಪ್ಪಳ ಬಚಾವೋ ಧರಣಿಯ ಬೆಂಬಲಿಸಿ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಇಲ್ಲಿ ಜೀವ ಹಾರಿ ಹೋಗುತ್ತವೆ ಎಂದಾದರೆ ಉದ್ಯೋಗ ಸಮಸ್ಯೆ ಕುರಿತು ಮಾತನಾಡಿದರೆ ತಪ್ಪಾಗುತ್ತದೆ. ಇಷ್ಟೊಂದು ಕಾರ್ಖಾನೆ ಕೇಂದ್ರಿಕೃತಗೊಂಡು ಯಾರಿಗೆ ಉದ್ಯೋಗ ಕೊಟ್ಟಿವೆ. ಚೀಪ್ ಲೇಬರ್ ಈಶಾನ್ಯ ಭಾರತ, ಉತ್ತರ ಭಾರತ ರಾಜ್ಯಗಳಿಂದ ತಂದು ಅವರ ಆರೋಗ್ಯ ಹಾಳು ಮಾಡುತ್ತವೆ. ಎಲ್ಲರೂ ಇಲ್ಲಿ ಬಲಿಪಶುಗಳೇ ಆಗಿದ್ದೇವೆ. ಫೆ. 24ರ ಬಂದ್‌ಗೆ ನಮ್ಮ ಸಂಘಟನೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಆ ಹೋರಾಟ ಅಭೂತ ಪೂರ್ವ ಯಶಸ್ವಿಗೊಳಿಸಲು ಶ್ರಮಿಸೋಣ ಎಂದರು.

ಧರಣಿ ನೇತೃತ್ವ ವಹಿಸಿದ್ದ ಅಲ್ಲಮಪ್ರಭು ಬೆಟ್ಟದೂರು ನಗರದ ನಾಗರಿಕರು ಫೆ. 24ರ ಬಂದ್ ಯಶಸ್ವಿ ಮಾಡಬೇಕೆಂದು ವಿನಂತಿಸಿಕೊಂಡರು. ಗುರುರಾಜ ದೇಸಾಯಿ ಧರಣಿ ಬೆಂಬಲಿಸಿ ಮಾತನಾಡಿದರು.

ಸ್ವಾಮೀಜಿ ಭೇಟಿ ಮಾಡಿದ ತಂಡದಲ್ಲಿ ಹಿರಿಯ ನ್ಯಾಯವಾದಿ ವಿ.ಎಂ‌. ಭೂಸನೂರಮಠ, ವಕೀಲ ಪೀರಾ ಹುಸೇನ ಹೊಸಳ್ಳಿ, ಕೃಷಿ ಬೆಲೆ ಆಯೋಗ ಸದಸ್ಯ ಡಿ.ಎಚ್. ಪೂಜಾರ, ಮಹಿಳಾ ಘಟಕ ಪ್ರಮುಖರಾದ ಕಾವ್ಯಾ ಪ್ರಸನ್ನ ಗಡಾದ್, ಸರೋಜಾ ಬಾಕಳೆ, ಸೌಮ್ಯಾ ನಾಲವಾಡ, ಶ್ವೇತಾ ಅಕ್ಕಿ, ವಿದ್ಯಾ ನಾಲವಾಡ, ವಕೀಲ ರಾಜು ಬಾಕಳೆ, ಸಂಚಾಲಕ ಮಲ್ಲಿಕಾರ್ಜುನ ಬಿ‌. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಡಾ. ಮಂಜುನಾಥ ಸಜ್ಜನ್, ಶರಣು ಗಡ್ಡಿ, ಮಹಾಂತೇಶ ಕೊತಬಾಳ, ವಿಪಿನ್ ಕುಮಾರ್ ತಾಲೆಡಾ, ವಕೀಲ ಪ್ರವೀಣ ಅಕ್ಕಿ, ರಾಜಶೇಖರ ಏಳುಬಾವಿ, ಮಹಾದೇವಪ್ಪ ಮಾವಿನಮಾಡು, ಮೂಕಪ್ಪ ಮೇಸ್ತ್ರಿ ಬಸಾಪುರ, ಸುರೇಶ ಪೂಜಾರ ಮುಂತಾದವರು ಇದ್ದರು.