ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳ
ಕರಾವಳಿಯಲ್ಲಿ ಸ್ಥಾಪಿಸಲಾಗಿರುವ ಕೋಮು ಸಂಘರ್ಷ ನಿಗ್ರಹ ಪಡೆ (ಎಸಿಎಫ್) ಶಾಶ್ವತ ಅಲ್ಲ, ಒಂದು ಬಾರಿ ಕರಾವಳಿಯಲ್ಲಿ ಶಾಂತಿ ನೆಲೆಸಿದರೆ ಈ ಪಡೆಗೆ ಕೆಲಸ ಇರುವುದಿಲ್ಲ, ಅದು ತಾತ್ಕಾಲಿಕ ಪಡೆ ಎಂದು ಗೃಹಸಚಿವ ಡಾ.ಜಿ ಪರಮೇಶ್ವರ್ ಪ್ರಕಟಿಸಿದ್ದಾರೆ.ಕಾರ್ಕಳ ತಾಲೂಕಿನ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈ ಪಡೆ ಶಾಶ್ವತವಾಗಿ ಉಳಿಯಬಾರದು, ಅದರ ಬದಲು ಶಾಂತಿ ಇರಬೇಕು ಅನ್ನುವುದು ನಮ್ಮ ಉದ್ದೇಶ. ಕರಾವಳಿ ಪ್ರದೇಶ ಅಂದರೆ ಘಟ್ಟದ ಮೇಲಿನ ನಮಗೆ ತುಂಬಾ ಸಂತೋಷ ಇತ್ತು, ಆದರೆ ಇತ್ತೀಚೆಗೆ ಕರಾವಳಿಯ ಪರಿಸ್ಥಿತಿ ಹದಗೆಟ್ಟಿದೆ. ಅದಕ್ಕಾಗಿ ಈ ಪಡೆ ಆರಂಭಿಸಲಾಗಿದೆ. ಮತ್ತೆ ಕರಾವಳಿಯಲ್ಲಿ ಶಾಂತಿ ನೆಲೆಸಿದರೆ ಈ ಪಡೆ ಬೇಕಾಗುವುದಿಲ್ಲ. ಈ ಬಗ್ಗೆ ಶಾಂತಿ ಸಭೆ ಕರೆದು ಸರಿಯಾದ ಸಂದೇಶ ನೀಡುತ್ತೇವೆ ಎಂದರು.
ಪೊಲೀಸ್ ಕೊರತೆ ನಿಜ:ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ ಇರುವುದು ನಿಜ, ಹಿಂದಿನ ಸರ್ಕಾರಗಳು ಪೊಲೀಸ್ ಸಿಬ್ಬಂದಿ ನೇಮಕಾತಿ ಮಾಡಿಲ್ಲ, ಆದ್ದರಿಂದ ಸುಮಾರು 18 ಸಾವಿರ ಸಿಬ್ಬಂದಿ ಕೊರತೆಯಾಗಿದೆ ಎಂದರು. ಕಳೆದ ನಾಲ್ಕೈದು ವರ್ಷಗಳಿಂದ ಈ ಸಮಸ್ಯೆ ಹೆಚ್ಚಾಗಿದೆ, ಪೊಲೀಸ್ ಸಿಬ್ಬಂದಿ ನಿವೃತ್ತರಾದ ತಕ್ಷಣ ನೇಮಕಾತಿ ಮಾಡಿದ್ದರೆ ಈ ಸಮಸ್ಯೆಯಾಗುವುದಿಲ್ಲ, ಈಗ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನೇಮಕಾತಿ ಪ್ರಕ್ರಿಯೆ ಪ್ರಾರಂಭ ಮಾಡಿದ್ದೇವೆ. ಒಳಮೀಸಲಾತಿಯ ಕಾರಣಕ್ಕೆ ಈ ಪ್ರಕ್ರಿಯೆ ಎರಡು ಮೂರು ತಿಂಗಳಿಂದ ವಿಳಂಬ ಆಗಿದೆ ಎಂದರು.
ಈಗಾಗಲೇ 545 ಮಂದಿ ಪಿಎಸ್‌ಐ ನೇಮಕ ಆದೇಶ ಕೊಟ್ಟಿದ್ದೇವೆ, ಆದರೆ, ಪಿಎಸ್ಐ ಹಗರಣದಿಂದಾಗಿ ಈ 656 ಮಂದಿಯ ನೇಮಕಾತಿಯೇ ನಿಲ್ಲುವಂತಾಗಿದೆ. ಇನ್ನೂ 402 ಮಂದಿಗೆ ಇನ್ನೊಂದೆರಡು ವಾರದಲ್ಲಿ ಆದೇಶ ನೀಡುತ್ತೇವೆ, ನಂತರ 600 ಮಂದಿ ಸಬ್‌ಇನ್ಸ್‌ಪೆಕ್ಟರ್ ಗಳ ನೇಮಕಾತಿ ಆಗುತ್ತದೆ ಎಂದರು. ಹಿಂದಿನ ಸರ್ಕಾರಗಳು ಒಂದೂವರೆ ಸಾವಿರ ಸಬ್ ಇನ್ಸ್ಪೆಕ್ಟರ್ ಹುದ್ದೆ ತುಂಬದೆ ಖಾಲಿ ಇಟ್ಕೊಂಡಿದ್ರು, ಇನ್ನು ಸಮಸ್ಯೆ ಆಗದೆ ಇರುತ್ತಾ ಎಂದವರು ಪ್ರಶ್ನಿಸಿದರು.