ಸಾರ್ವಜನಿಕರಿಗಿನ್ನು ಸಮುದಾಯ ನಿರ್ವಾಹಕರಿಂದ ಸ್ವಚ್ಛತಾ ಪಾಠ

| Published : Jul 11 2025, 01:47 AM IST

ಸಾರಾಂಶ

ಸ್ವಚ್ಛತಾ ಮಿಷನ್ ಅಡಿ ಪಾಲಿಕೆ ವ್ಯಾಪ್ತಿಯಲ್ಲಿ 15000 ಜನರಿಗೊಬ್ಬರಂತೆ ಕಮ್ಯುನಿಟಿ ಮೊಬಲೈಸರ್‌ಗಳನ್ನು ನೇಮಕ ಮಾಡಲಾಗಿದೆ. ಅಭ್ಯರ್ಥಿಗಳ ಸಂದರ್ಶನ ಮುಗಿದಿದ್ದು, ಕೆಲವೇ ದಿನಗಳಲ್ಲಿ ಅವರಿಗೆ ತರಬೇತಿ ನೀಡಿ, ವಾರ್ಡ್‌ಗಳಲ್ಲಿ ಕೆಲಸಕ್ಕೆ ನಿಯೋಜಿಸಲಾಗುವುದು. ಇದರಿಂದ ತ್ಯಾಜ್ಯ ನಿರ್ವಹಣೆಗೆ ಅನುಕೂಲವಾಗಲಿದೆ.

ಮಹಮ್ಮದ ರಫೀಕ್ ಬೀಳಗಿ

ಹುಬ್ಬಳ್ಳಿ: ಇನ್ಮುಂದೆ ಕಸ ಸಂಗ್ರಹಿಸುವ ಸಿಬ್ಬಂದಿ ಜತೆ ಸಮುದಾಯ ನಿರ್ವಾಹಕರು ನಿಮ್ಮ ಮನೆಗೆ ಬಂದು ಕಸ ಹೇಗೆ ವಿಲೇವಾರಿ ಮಾಡಬೇಕೆಂದು ಪಾಠ ಹೇಳಲಿದ್ದಾರೆ. ಕಸದ ಸಮಸ್ಯೆಯಿಂದ ಕಂಗೆಟ್ಟಿರುವ ಮಹಾನಗರ ಪಾಲಿಕೆ ಸಮುದಾಯ ನಿರ್ವಾಹಕರನ್ನು ನೇಮಿಸಿಕೊಳ್ಳುವ ಮೂಲಕ ಸಮಸ್ಯೆಗೆ ಮುಕ್ತಿ ಹಾಡಲು ಮುಂದಾಗಿದೆ.

ಸ್ಮಾರ್ಟ್‌ ಸಿಟಿ ಪಟ್ಟ ಪಡೆದಿರುವ ಹುಬ್ಬಳ್ಳಿ-ಧಾರಾವಾಡ ಅವಳಿ ನಗರದಲ್ಲಿ ಕಸದ ಸಮಸ್ಯೆ ಗಂಭೀರವಾಗಿದೆ. ಕಸ ವಿಂಗಡಣೆ, ವಿಲೇವಾರಿ ಮತ್ತು ಎಲ್ಲೆಂದರಲ್ಲಿ ಕಸ ಎಸೆಯುತ್ತಿರುವುದು ಪಾಲಿಕೆಗೆ ದೊಡ್ಡ ತಲೆನೋವಾಗಿದೆ. ಕಸ ಕಂಡಲ್ಲಿ ಫೋಟೋ ಕಳುಹಿಸಿ ಅಭಿಯಾನ ಶುರು ಮಾಡಿ 391 ಬ್ಲ್ಯಾಕ್‌ ಸ್ಪಾಟ್‌ ತೆರವುಗೊಳಿಸಲಾಗಿದೆ. ಆದರೂ ಕಸದ ಸಮಸ್ಯೆಗೆ ಮಾತ್ರ ಪರಿಹಾರ ದೊರೆಯುತ್ತಿಲ್ಲ. ಇದರಿಂದಾಗಿ ಕಸವನ್ನು ಮೂಲದಲ್ಲೇ ಬೇರ್ಪಡಿಸುವ ಮತ್ತು ಸಮರ್ಪಕ ವಿಲೇವಾರಿ ಕುರಿತಂತೆ ಜನರಿಗೆ ತಿಳಿವಳಿಗೆ ಮೂಡಿಸಲು ಸಮುದಾಯ ನಿರ್ವಾಹಕರ (ಕಮ್ಯುನಿಟಿ ಮೊಬೈಲೇಸರ್)ನ್ನು ನೇಮಿಸಿಕೊಂಡಿದೆ.

15 ಸಾವಿರ ಜನಸಂಖ್ಯೆಗೆ ಒಬ್ಬರಂತೆ ಒಟ್ಟು 63 ಸಮುದಾಯ ನಿರ್ವಾಹಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಈಗಾಗಲೇ ಇವರ ಸಂದರ್ಶನ ಮುಗಿದಿದ್ದು, ಮೂರು ವರ್ಷದ ಗುತ್ತಿಗೆ ಆಧಾರ ಮೇಲೆ ₹18787 ವೇತನ ನೀಡುವ ಒಪ್ಪಂದ ಮಾಡಿಕೊಂಡು ನೇಮಕ ಮಾಡಿಕೊಳ್ಳಲಾಗಿದೆ. ಎಸ್ಸೆಸ್ಸೆಲ್ಸಿ ಪಾಸಾದ ಕಂಪ್ಯೂಟರ್ ಜ್ಞಾನ ಹೊಂದಿದ ಉತ್ತಮ ವಾಕ್ ಚಾತುರ್ಯ ಹೊಂದಿದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡಿದ್ದು, ಇನ್ನೊಂದು ವಾರದಲ್ಲಿ ಇವರು ಕಾರ್ಯಾರಂಭ ಮಾಡಲಿದ್ದಾರೆ. ಇವರಿಗೆ ವೇತನವನ್ನು ರಾಜ್ಯ ಸರ್ಕಾರವೇ ನೀಡಲಿದ್ದು, ಅದನ್ನು ಪಾಲಿಕೆ ಮುಖಾಂತರ ಪಾವತಿಸಲಾಗುತ್ತದೆ.

ಇವರು ಪ್ರತಿದಿನ ಆಟೋ ಟಿಪ್ಪರ್ ವಾಹನದಲ್ಲಿ ಪ್ರತಿ ಮನೆಮನೆಗೆ ಹೋಗಿ ಕಸ ಬೇರ್ಪಡಿಸಿಯೇ ನೀಡಬೇಕು ಎಂದು ಜನರಿಗೆ ತಿಳಿ ಹೇಳುವುದು, ಅಲ್ಲದೇ ಕಸದ ವಿಂಗಡನೆ ಮತ್ತು ವಾಹನಗಳು ಸರಿಯಾಗಿ ಎಲ್ಲ ಮನೆಗಳಿಂದ ಕಸ ಸಂಗ್ರಹಿಸುತ್ತಿವೆಯೋ ಇಲ್ಲವೋ ಎನ್ನುವ ಕುರಿತು ಮಾಹಿತಿ ಪಡೆಯಲಿದ್ದಾರೆ. ಇವರು ಪ್ರತಿದಿನ ಭೇಟಿ ನೀಡಿದ ಮನೆಗಳ ವಿವರವನ್ನು ಅಂದೇ ಪಾಲಿಕೆಗೆ ಸಲ್ಲಿಸಬೇಕಿರುತ್ತದೆ.

ಇದಲ್ಲದೆ, ಪಾಲಿಕೆ ಗುರುತಿಸಿದ ಬ್ಲ್ಯಾಕ್ ಸ್ಪಾಟ್ ಮೇಲೆ ಕಣ್ಣಿಡುವ ಸಮುದಾಯ ನಿರ್ವಾಹಕರು ಅಲ್ಲಿ ಕಸ ಚೆಲ್ಲುವವರನ್ನು ಗುರುತಿಸಿ ದಂಡ ವಸೂಲಿ ಮಾಡಲಿದ್ದಾರೆ. ಇನ್ನು ಮನೆಗಳಿಗೆ ತೆರಳಿ ಮೊದಲು ಸ್ವಚ್ಛತಾ ಪಾಠ ಮಾಡುವ ಇವರು ಮುಂದಿನ ದಿನಗಳಲ್ಲಿ ಸಾರ್ವಜನಿಕರು ತಿದ್ದಿಕೊಳ್ಳದಿದ್ದರೆ ದಂಡಾಸ್ತ್ರ ಪ್ರಯೋಗ ಮಾಡಲಿದ್ದಾರೆ. ಹೀಗಾಗಿ, ಪಾಠ ಹೇಳಿಸಿಕೊಳ್ಳುವವರು ದಂಡ ಪ್ರಯೋಗದ ಮೊದಲೇ ತಿದ್ದಿಕೊಂಡು ಹಸಿ-ಒಣ ಕಸ ಬೇರ್ಪಡಿಸಿಯೇ ವಾಹನಕ್ಕೆ ನೀಡುವುದು ಒ‍ಳಿತು.

ಸ್ವಚ್ಛತಾ ಮಿಷನ್ ಅಡಿ ಪಾಲಿಕೆ ವ್ಯಾಪ್ತಿಯಲ್ಲಿ 15000 ಜನರಿಗೊಬ್ಬರಂತೆ ಕಮ್ಯುನಿಟಿ ಮೊಬಲೈಸರ್‌ಗಳನ್ನು ನೇಮಕ ಮಾಡಲಾಗಿದೆ. ಅಭ್ಯರ್ಥಿಗಳ ಸಂದರ್ಶನ ಮುಗಿದಿದ್ದು, ಕೆಲವೇ ದಿನಗಳಲ್ಲಿ ಅವರಿಗೆ ತರಬೇತಿ ನೀಡಿ, ವಾರ್ಡ್‌ಗಳಲ್ಲಿ ಕೆಲಸಕ್ಕೆ ನಿಯೋಜಿಸಲಾಗುವುದು. ಇದರಿಂದ ತ್ಯಾಜ್ಯ ನಿರ್ವಹಣೆಗೆ ಅನುಕೂಲವಾಗಲಿದೆ ಎಂದು ಮಹಾನಗರ ಪಾಲಿಕೆ ಹೆಚ್ಚುವರಿ ಆಯುಕ್ತ ವಿಜಯಕುಮಾರ್ ಆರ್‌ ಹೇಳಿದರು.

ಅವಳಿ ನಗರದಲ್ಲಿ ತ್ಯಾಜ್ಯ ನಿರ್ವಹಣೆ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಬ್ಲ್ಯಾಕ್ ಸ್ಪಾಟ್ ಸೇರಿ ರಸ್ತೆಯಲ್ಲಿ ಕಸ ಎಸೆಯುವವರನ್ನು ಗುರುತಿಸಿ ಅವರಿಂದ ದಂಡ ವಸೂಲಿ ಮಾಡಲು ಸಮುದಾಯ ನಿರ್ವಾಹಕರನ್ನು ನೇಮಕ ಮಾಡಲಾಗಿದೆ. ಇದರಿಂದಾಗಿ ನಗರ ಸ್ವಚ್ಛತೆಗೆ ಸಹಕಾರಿಯಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸಂತೋಷ ಯರಗಂಬಳಿ ಹೇಳಿದರು.