ಮಣಿಪಾಲ: ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಅಂತರರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನಾಚರಣೆಯನ್ನು ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿರುವ ಮಕ್ಕಳು, ಅವರ ಪಾಲಕರು ಹಾಗೂ ಕ್ಯಾನ್ಸರ್‌ ಗೆದ್ದ ಮಕ್ಕಳೊಂದಿಗೆ ಆಚರಿಸಲಾಯಿತು. ಈ ದಿನಾಚರಣೆಯ ಪ್ರಯುಕ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಹಾಗೂ ಅವರ ಕುಟುಂಬಗಳ ಮನೋಬಲ ಹೆಚ್ಚಿಸುವ ಉದ್ದೇಶದಿಂದ ಮನರಂಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿ ಕೆ. ಎಂ. ಸಿ. ಮಣಿಪಾಲದ ಡೀನ್‌ ಡಾ. ಅನಿಲ್ ಕೆ. ಭಟ್ ಅವರು ಬಾಲ್ಯ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಸಮುದಾಯದ ಪಾತ್ರ ಅತ್ಯಂತ ಮಹತ್ವದ್ದೆಂದು ಹೇಳಿದರು. ಪ್ರತಿಯೊಬ್ಬ ಮಗುವಿಗೂ ಅಗತ್ಯವಾದ ಸಮಗ್ರ ಚಿಕಿತ್ಸೆ ದೊರೆಯುವಂತೆ ಸಹಕಾರ ಅಗತ್ಯ ಎಂದರು.

ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ಅವರು, ಅವರು ಮಕ್ಕಳ ಕ್ಯಾನ್ಸರ್ ರೋಗಿಗಳಿಗೆ ಅಗತ್ಯವಿರುವ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಒದಗಿಸುವ ಮೂಲಕ ಅತ್ಯುತ್ತಮ ಚಿಕಿತ್ಸೆ ನೀಡುವಲ್ಲಿ ಆಸ್ಪತ್ರೆಯ ಬದ್ಧತೆಯನ್ನು ತಿಳಿಸಿದರು.

ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ಕ್ಯಾನ್ಸರ್ ವಿಭಾಗದ ಮುಖ್ಯಸ್ಥ ಡಾ. ವಾಸುದೇವ ಭಟ್ ಕೆ. ಅವರು, ಬಾಲ್ಯ ಕ್ಯಾನ್ಸರ್ ಅನ್ನು ಸಮಯಕ್ಕೆ ಸರಿಯಾಗಿ ಪತ್ತೆಹಚ್ಚಿ, ಸೂಕ್ತ ತಂಡದಿಂದ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಿದರೆ ಸಂಪೂರ್ಣ ಗುಣಮುಖಗೊಳಿಸಲು ಸಾಧ್ಯವೆಂದು ತಿಳಿಸಿದರು.ನರ್ಸಿಂಗ್ ಮುಖ್ಯಸ್ಥೆ ಡಾ. ಸುಬಾ ಸೂರಿಯಾ, ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್‌ ಸಂಸ್ಥಾಪಕ ಅರ್ಜುನ್ ಭಂಡಾರ್ಕರ್ ಹಾಗೂ ಲಯನ್ಸ್ ಕ್ಲಬ್ ಮಣಿಪಾಲ ಅಧ್ಯಕ್ಷ ಡಾ. ನಿಶಾಂತ್ ಬಿ. ಭಟ್ ಉಪಸ್ಥಿತರಿದ್ದರು. ಕ್ಯಾನ್ಸರ್ ಪೀಡಿತ ಧೈರ್ಯಶಾಲಿ ಮಕ್ಕಳ ಹಾಗೂ ಅವರ ಕುಟುಂಬಗಳ ಮುಖದಲ್ಲಿ ನಗು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಯಿತು. ಅಸ್ಥಿಮಜ್ಜೆ ಕಸಿಯ ನಂತರ ಕ್ಯಾನ್ಸರ್‌ನಿಂದ ಗುಣಮುಖರಾದ ಚೈತ್ರಾ ಮತ್ತು ಫರ್ಹಾನಾ ಕಾರ್ಯಕ್ರಮ ನಿರೂಪಿಸಿದರು.