ವಶ ಪಡೆದ ರೈತರ ಜಮೀನುಗಳಿಗೆ ಪರಿಹಾರ ನೀಡಿ

| Published : Feb 12 2025, 12:31 AM IST

ಸಾರಾಂಶ

ಹನೂರು ದೀಪದ ಒಡ್ದು ಸ್ಥಳದಲ್ಲಿ ಜಮೀನು ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ರೈತ ಸಂಘಟನೆಯಿಂದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ರಘು ಅವರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಹನೂರು

ಮಲೆಮಹದೇಶ್ವರ ಬೆಟ್ಟದ ದೀಪದ ಗಿರಿ ಒಡ್ಡಿನಲ್ಲಿ ವಶಪಡಿಸಿಕೊಂಡಿರುವ ರೈತರ ಜಮೀನುಗಳಿಗೆ ಪರಿಹಾರ ನೀಡಿ ಇಲ್ಲಿನ ನಿವಾಸಿಗಳ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹನೂರು ತಾಲೂಕು ಅಧ್ಯಕ್ಷ ಚಂಗಡಿ ಕರಿಯಪ್ಪ ಅವರ ನೇತೃತ್ವದಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ರಘು ಅವರಿಗೆ ಮನವಿ ಸಲ್ಲಿಸಲಾಯಿತು.

ತಾಲೂಕು ರೈತ ಸಂಘದ ಅಧ್ಯಕ್ಷ ಚಂಗಡಿ ಕರಿಯಪ್ಪ ಮಾತನಾಡಿ, ದೀಪದ ಗಿರಿ ಒಡ್ಡಿನಲ್ಲಿ ಮಹದೇಶ್ವರ ಸ್ವಾಮಿಯ 108 ಅಡಿ ಪ್ರತಿಮೆ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲ್ಲೂ ವ್ಯಾವಸಾಯ ಹಾಗೂ ಜೀವನ ಸಾಗಿಸಿಸುತ್ತಿದ್ದ ರೈತರು ನಿವಾಸಿಗಳ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ. ಪಡಿಸಿಕೊಂಡಿರುವ ಜಮೀನಿಗೆ ಯಾವುದೇ ರೀತಿಯ ಪರಿಹಾರ ಪರ್ಯಾಯ ವ್ಯವಸ್ಥೆಯನ್ನು ಇಂದಿಗೂ ನೀಡಿಲ್ಲ. ಪ್ರತಿಮೆ ನಿರ್ಮಾಣ ಮಾಡುವಾಗ ಅಲ್ಲಿ ಕಟ್ಟಡಗಳು ಕುಸಿದು ಬಿದಿದ್ದು ರೈತರ ಜಮೀನಿನಲ್ಲಿ ಬೆಳೆಯಲಾಗಿದ್ದ ತೆಂಗಿನ ಮರ, ಮಾವಿನ ಮರ, ಹಲಸಿನಮರ ಹಾಗೂ ವಾಸದ ಮನೆಗಳು ಜಖಂ ಗೊಂಡಿದೆ ಇದರಿಂದ ರೈತರಿಗೆ ನಷ್ಟವಾಗಿದೆ ಎಂದು ದೂರಿದರು.

ಜಿಲ್ಲಾ ಆಡಳಿತಕ್ಕೂ ಹಾಗೂ ಹಾಲಿ ಮತ್ತು ಮಾಜಿ ಶಾಸಕರಿಗೂ ಹಾಗೂ ಸಚಿವರಿಗೂ, ಪ್ರಾಧಿಕಾರದ ಕಾರ್ಯದರ್ಶಿಗಳಿಗೂ, ಅನೇಕ ಬಾರಿ ಮನವಿ ಕೊಟ್ಟಿದ್ದು ಇದುವರೆಗೂ ಪರ್ಯಾಯ ವ್ಯವಸ್ಥೆ ಮಾಡಿಲ್ಲ, ಮುಂದೆ ಬರುವ ಮಲೆಮಹದೇಶ್ವರ ಬೆಟ್ಟದ ಸಂಪುಟ ಸಭೆಯಲ್ಲಿ ನಮ್ಮಗಳ ಎಲ್ಲಾ ಸಮಸ್ಯೆ ಚರ್ಚಿಸಿ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಡಬೇಕು. ಈ ಮನವಿಗೆ ಸಂಪುಟ ಸಭೆಯಲ್ಲಿ ವ್ಯವಸ್ಥೆ ಮಾಡದ್ದಿದ ಪಕ್ಷದಲ್ಲಿ ಸದರಿ ಸ್ಥಳದಲ್ಲಿ ಮುಂದಿನ ಅಭಿವೃದ್ಧಿಗೆ ಅವಕಾಶ ಕೊಡದೆ ನಮ್ಮಗಳ ಹಕ್ಕು ಒತ್ತಾಯವನ್ನು ಚಳುವಳಿ ಮೂಲಕ ಹಕ್ಕನ್ನು ಚಲಾಯಿಸುತ್ತೇವೆ ಎಂದು ತಿಳಿಸಿದರು.

ದೀಪದ ಗಿರಿ ಒಡ್ಡಿನ ನಿವಾಸಿ ರೈತ ಮಹಿಳೆ ಜ್ಯೋತಿ ಅನಾದಿಕಾಲದಿಂದಲು ಸಹ ವ್ಯವಸಾಯವನ್ನು ಮಾಡುತಿದ್ದ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡಿರುವ ಭೂಮಿಯು ನಮ್ಮ ಅನುಭವದ ಭೂಮಿಯಾಗಿದ್ದು, ನಾವು ವಾಸಮಾಡುತಿದ್ದ ಮನೆಗಳು, ತೆಂಗಿನಮರ, ಹಲಸಿನ ಮರ, ಮಾವಿನಮರ ಬೆಳೆಗಳು ನಾಶವಾಗಿವೆ. ಹಲವಾರು ಭಾರಿ ಸಂಭಂಧಪಟ್ಟ ಅಧಿಕಾರಿಗಳಿಗೆ ಮನವಿಯನ್ನು ಮಾಡಿದ್ದರೂ ಸಹ ಯಾವುದೇ ರೀತಿಯಾದ ಪರಿಹಾರವನ್ನು ನೀಡಿಲ್ಲ. ಮುಂದೆ ಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯ ಒಳಗಾಗಿ ಪರಿಹಾರವನ್ನು ನೀಡಬೇಕೆಂದು ಮನವಿ ಮಾಡಿದರು.

ಮನವಿಯನ್ನು ಸ್ವೀಕರಿಸಿದ ಪ್ರಾಧಿಕಾರದ ಕಾರ್ಯಧರ್ಶಿ ರಘು ಪ್ರತಿಕ್ರಿಯಿಸಿ, ಈಗಾಗಲೆ ಈ ವಿಷಯದ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಇಲ್ಲಿಯವರೆಗೆ ಅಲ್ಲಿ ವಾಸಿಸುತ್ತಿರುವಂತಹ ಸ್ಥಳೀಯರಿಗೆ ಯಾವುದೇ ರೀತಿಯಾದ ತೊಂದರೆಯನ್ನು ನೀಡಿಲ್ಲ ಈಗಾಗಲೇ ಹಲವರಿಗೆ ತಾತ್ಕಾಲಿಕವಾಗಿ ಪ್ರಾಧಿಕಾರದಲ್ಲಿ ಕೆಲಸವನ್ನು ನೀಡಲಾಗಿದೆ. ಕಂದಾಯ ಇಲಾಖೆ ವತಿಯಿಂದ ಜಮೀನನ್ನು ಸರ್ವೆ ಮಾಡಿ ನಂತರದ ದಿನಗಳಲ್ಲಿ ಸೂಕ್ತವಾದ ಪರಿಹಾರವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.

ಸ್ಥಳದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹನೂರು ತಾಲೂಕು ಅಧ್ಯಕ್ಷ ಚಂಗಡಿ ಕರಿಯಪ್ಪ, ಸಂಘಟನಾ ಕಾರ್ಯದರ್ಶಿ ಪ್ರಸಾದ್, ಸಂಚಾಲಕ ಕಾಡುಹೊಲ ಕುಮಾರ್, ಮಹಿಳಾ ಕಟಕ ಅಧ್ಯಕ್ಷ ಜ್ಯೋತಿ, ಭಾಗ್ಯಮ್ಮ, ದೇವಮ್ಮ, ಪುಟ್ಟಮ್ಮ, ಮಾದೇವಮ್ಮ, ನಾಗರಾಜು, ಉಮೇಶ, ಮಹದೇವಸ್ವಾಮಿ, ಕುಮಾರ್, ಶಿವರಾಜು, ಆನೆಹೊಲ ಕುಮಾರ್ ಸೇರಿದಂತೆ ಇನ್ನಿತರರು ಇದ್ದರು.