ಕಾರ್ಮಿಕ ಇಲಾಖೆಯಲ್ಲಿ ನೋಂದಣಿಯಾದ ಕಾರ್ಮಿಕರಿಗೆ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿ ಅವರಿಗೆ ಸೌಲಭ್ಯಗಳನ್ನು ದೊರಕುವಂತೆ ಅಧಿಕಾರಿಗಳು ಮಾಡಬೇಕು.

ದಾಂಡೇಲಿ: ಬರಗಾಲದಿಂದ ಬೆಳೆಹಾನಿಯಾದ ಹಿನ್ನೆಲೆ ರಾಜ್ಯ ಸರ್ಕಾರವು ಬರ ಪರಿಹಾರವಾಗಿ ₹೫೦೦೦ ಹಣವನ್ನು ರೈತರ ಖಾತೆಗೆ ಜಮೆ ಮಾಡಲಿದೆ ಎಂದು ಶಾಸಕ ಆರ್‌.ವಿ. ದೇಶಪಾಂಡೆ ತಿಳಿಸಿದರು.

ದಾಂಡೇಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಳಿಯಾಳ- ದಾಂಡೇಲಿ- ಜೋಯಿಡಾ ಕ್ಷೇತ್ರದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ದಾಂಡೇಲಿ- ಜೋಯಿಡಾ- ಹಳಿಯಾಳ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ ಎಂದು ಘೋಷಣೆ ಮಾಡಲಾಗಿದ್ದು, ಬರ ಪರಿಹಾರಕ್ಕಾಗಿ ತಹಸೀಲ್ದಾರರಿಗೆ ವರದಿ ಸಲ್ಲಿಸಲಾಗಿದೆ ಎಂದರು.

ಹೆಸ್ಕಾಂನಿಂದ ಪ್ರಧಾನಮಂತ್ರಿ ಸೂರ್ಯಘರ್ ವಿದ್ಯುತ್‌ ಯೋಜನೆಗಳ ಮರು ಪಾವತಿ ಅವಧಿ ಮುಂದಿನ ೨೦ ವರ್ಷಗಳ ಉಚಿತ ವಿದ್ಯುತ್‌ ಸೌಲಭ್ಯ ಹೊಂದಿದ್ದು, ೧ ಕಿವ್ಯಾ ಸೋಲಾರ್‌ ದರ ₹೬೦ ಸಾವಿರದಿಂದ ₹೮೦ ಸಾವಿರ ಸಬ್ಸಿಡಿ, ೨ ಕಿವ್ಯಾ ₹೧.೨೦ ಲಕ್ಷದಿಂದ ₹೧.೬೦ ಲಕ್ಷದ ಸಬ್ಸಿಡಿ ದರ, ೩ ಕಿವ್ಯಾ ₹೧.೮೦ ಲಕ್ಷರಿಂದ ₹೨.೪೦ ಲಕ್ಷ ಸಬ್ಸಿಡಿ ಹೆಚ್ಚಿಸಿದ್ದು, ಇದರಿಂದ ಜನಸಾಮಾನ್ಯರಿಗೆ ಹೆಚ್ಚಿನ ಸೌಲಭ್ಯವಾಗಲಿದೆ ಎಂದರು.

ದಾಂಡೇಲಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ೬ ತಿಂಗಳಿಗೊಮ್ಮೆ ವಿಶೇಷ ತಜ್ಞ ವೈದ್ಯರನ್ನು ಕರೆಸುವುದರ ಮೂಲಕ ಆರೋಗ್ಯ ಶಿಬಿರವನ್ನು ಏರ್ಪಡಿಸಲು ತಿಳಿಸಿದರು.

ಯುವನಿಧಿ ಯೋಜನೆಗೆ ಪದವಿ, ಡಿಪ್ಲೊಮಾ ಅರ್ಹ ವಿದ್ಯಾರ್ಥಿಗಳು ಸದುಪಯೋಗ ಪಡಿಸಲು ಸೂಚಿಸಿದರು. ಪಶು ಸಂಗೋಪನೆ ಇಲಾಖೆಯ ಆರೋಗ್ಯ ಕ್ಯಾಂಪ್‌ಗಳನ್ನು ಏರ್ಪಡಿಸುವುದನ್ನು ತಹಸೀಲ್ದಾರರು ಮತ್ತು ಪೌರಾಯುಕ್ತರ ಉಸ್ತುವಾರಿಯಲ್ಲಿ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಕಾರ್ಮಿಕ ಇಲಾಖೆಯಲ್ಲಿ ನೋಂದಣಿಯಾದ ಕಾರ್ಮಿಕರಿಗೆ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿ ಅವರಿಗೆ ಸೌಲಭ್ಯಗಳನ್ನು ದೊರಕುವಂತೆ ಅಧಿಕಾರಿಗಳು ಮಾಡಬೇಕು.

ದಾಂಡೇಲಿ ನಗರಸಭೆಯಿಂದ ವಸತಿ ಪಿಎಂಜಿವೈ, ಆಶ್ರಯ, ಜಿ+೨ ಎಎಚ್‌ಪಿಎಂ ಯೋಜನೆಗಳಲ್ಲಿ ಒಟ್ಟು ೧೧೦೦ ಮನೆಗಳು ಮಂಜೂರಾಗಿದ್ದು, ೧೯೨ ಮುಕ್ತಾಯವಾಗಿವೆ, ೯೦೮ ಮನೆ ಬಾಕಿ ಇವೆ. ನಗರಸಭೆಯ ವ್ಯಾಪ್ತಿಯಲ್ಲಿ ರಸ್ತೆಗಳು ಅಗಲಿಕರಣ ಮಾಡುವಾಗ ನಗರಸಭೆಯ ಅನುಮತಿ ಪಡೆದುಕೊಂಡು ಸಂಬಂಧಪಟ್ಟ ಇಲಾಖೆಯವರು ಕೆಲಸವನ್ನು ಮಾಡಬೇಕು ಎಂದು ಶಾಸಕರು ಸೂಚಿಸಿದರು.

ತೋಟಗಾರಿಕೆ ೨೦೨೫- ೨೬ನೇ ಸಾಲಿನಲ್ಲಿ ಮಾವು ಇನ್ಸುರೆನ್ಸ್ಅನ್ನು ೮ ರೈತರು ₹೧,೭೬,೪೪೯ ಪಡೆದುಕೊಂಡಿದ್ದಾರೆ. ಅಂಗನವಾಡಿ ಹುದ್ದೆಗಳು ಖಾಲಿಯಿದ್ದು, ಬೇಗನೆ ಭರ್ತಿ ಮಾಡಲು ಇಲಾಖೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.

ಬಿಸಿಎಂ ಅಧಿಕಾರಿಗಳು ಹಾಸ್ಟೆಲ್‌ಗೆ ಆಕಸ್ಮಿಕ ಭೇಟಿ ನೀಡಿ, ಗುಣಮಟ್ಟದ ಆಹಾರ ಬಗ್ಗೆ ಪರಿಶೀಲನೆ ಮತ್ತು ಕಟ್ಟಡಗಳಿಗೆ ಸುಣ್ಣ ಬಣ್ಣ ಹಚ್ಚಲು ಕ್ರಮ ಕೈಗೊಳುವಂತೆ ತಿಳಿಸಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಶೈಲೇಶ ಪರಮಾನಂದ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಟಿ.ಸಿ. ಹಾದಿಮನಿ, ನಗರಸಭೆಯ ಪೌರಾಯುಕ್ತ ವಿವೇಕ ಬನ್ನೆ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಸ್ಥಳೀಯರು ಇದ್ದರು.