ರೈತಸಭಾಂಗಣ ನವೀಕರಣಕ್ಕೆ ಅಧಿಕಾರಸ್ಥರ ಪ್ರತಿಷ್ಠೆಯ ಪೈಪೋಟಿ

| Published : Jul 02 2024, 01:30 AM IST

ರೈತಸಭಾಂಗಣ ನವೀಕರಣಕ್ಕೆ ಅಧಿಕಾರಸ್ಥರ ಪ್ರತಿಷ್ಠೆಯ ಪೈಪೋಟಿ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ನಗರದ ಪಾರಂಪರಿಕ ಕಟ್ಟಡವಾದ ರೈತ ಸಭಾಂಗಣದಲ್ಲಿ ಕರ್ನಾಟಕ ಸಂಘದಿಂದ ನಡೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಘಟಕರು ರೈತ ಸಭಾಂಗಣದ ನವೀಕರಣದ ಬಗ್ಗೆ ಪ್ರಸ್ತಾಪಿಸಿದಾಗ ನವೀಕರಣದ ಕ್ರೆಡಿಟ್‌ಗೆ ಉಭಯಪಕ್ಷಗಳ ನಾಯಕರು ಪೈಪೋಟಿ ನಡೆಸಿದ್ದು ಅಚ್ಚರಿಗೆ ಕಾರಣವಾಗಿತ್ತು.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಚುನಾವಣಾ ಪೂರ್ವದಲ್ಲಿ ಅಧಿಕಾರಕ್ಕಾಗಿ ವಿವಿಧ ಪಕ್ಷಗಳ ನಾಯಕರ ನಡುವೆ ಪೈಪೋಟಿ ನಡೆಯುವುದು ಸಹಜ. ಆದರೆ, ರೈತ ಸಭಾಂಗಣದ ನವೀಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಅಧಿಕಾರಸ್ಥರ ನಡುವೆ ಪ್ರತಿಷ್ಠೆಯ ಪೈಪೋಟಿ ಏರ್ಪಟ್ಟಿರುವುದು ಕಂಡುಬಂದಿದೆ.

ನಗರದ ಪಾರಂಪರಿಕ ಕಟ್ಟಡವಾದ ರೈತ ಸಭಾಂಗಣದಲ್ಲಿ ಕರ್ನಾಟಕ ಸಂಘದಿಂದ ನಡೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಘಟಕರು ರೈತ ಸಭಾಂಗಣದ ನವೀಕರಣದ ಬಗ್ಗೆ ಪ್ರಸ್ತಾಪಿಸಿದಾಗ ನವೀಕರಣದ ಕ್ರೆಡಿಟ್‌ಗೆ ಉಭಯಪಕ್ಷಗಳ ನಾಯಕರು ಪೈಪೋಟಿ ನಡೆಸಿದ್ದು ಅಚ್ಚರಿಗೆ ಕಾರಣವಾಗಿತ್ತು.

ಆರು ದಶಕದ ಇತಿಹಾಸವನ್ನು ಹೊಂದಿರುವ ರೈತಸಭಾಂಗಣ ಸೌಲಭ್ಯಗಳಿಂದ ವಂಚಿತವಾಗಿ ಇಲ್ಲಿಯವರೆಗೆ ಆಧುನಿಕತೆಯ ಸ್ಪರ್ಶವನ್ನೇ ಕಾಣದೆ ಮೂಲೆಗುಂಪಾಗಿತ್ತು. ಹಲವಾರು ಬಾರಿ ನವೀಕರಣದ ಬಗ್ಗೆ ಸಂಘಟನೆಗಳು ಪ್ರಸ್ತಾಪಿಸಿದ್ದರೂ ಯಾರೊಬ್ಬರೂ ಅದರತ್ತ ಆಸಕ್ತಿ ತೋರಿರಲಿಲ್ಲ. ಸಭಾಂಗಣದ ಸ್ಥಿತಿ-ಗತಿಗಳನ್ನು ತೋರಿಸಬೇಕೆಂಬ ಉದ್ದೇಶದಿಂದಲೇ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡರು ರೈತ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು.

ಆರಂಭದಲ್ಲಿ ಮಾತನಾಡಿದ ಸಚಿವ ಎನ್.ಚಲುವರಾಯಸ್ವಾಮಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದ ದುರಸ್ತಿ ಕಾಮಗಾರಿ ಮುಗಿದ ಕೂಡಲೇ ರೈತ ಸಭಾಂಗಣದ ಆಧುನೀಕರಣ ಕಾಮಗಾರಿ ಆರಂಭಗೊಳ್ಳಲಿದೆ. ಆರು ತಿಂಗಳು ಅಥವಾ ಒಂದು ವರ್ಷದೊಳಗೆ ರೈತಸಭಾಂಗಣಕ್ಕೆ ಹೊಸ ರೂಪ ನೀಡುವುದಾಗಿ ಹೇಳಿ ನಿರ್ಗಮಿಸಿದರು.

ಆ ವೇಳೆಗಾಗಲೇ ವೇದಿಕೆಯಲ್ಲಿದ್ದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ದೂರವಾಣಿ ಮುಖಾಂತರವೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿ ರೈತಸಭಾಂಗಣದ ನವೀಕರಣದ ವಿಷಯ ಪ್ರಸ್ತಾಪಿಸಿದಾಗ, ಒಂದು ಕೋಟಿಯಲ್ಲ, ಎರಡು ಕೋಟಿ ರು. ಖರ್ಚಾಗಲಿ. ಸಭಾಂಗಣದ ನವೀಕರಣಕ್ಕೆ ಸಿಎಸ್‌ಆರ್ ಫಂಡ್ ಮೂಲಕ ಹಣ ನೀಡುವ ಭರವಸೆ ನೀಡಿದಲ್ಲದೇ, ನವೀಕರಣದ ಅಂದಾಜುಪಟ್ಟಿ ಕಳುಹಿಸಿ, ಪೂಜೆಗೆ ಸಿದ್ಧಮಾಡಿಕೊಳ್ಳುವಂತೆ ತಿಳಿಸಿದ್ದನ್ನು ಸಿ.ಎಸ್.ಪುಟ್ಟರಾಜು ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.

ಆ ನಂತರದಲ್ಲಿ ಮಾತಿಗೆ ನಿಂತ ಶಾಸಕ ಪಿ.ರವಿಕುಮಾರ್, ರೈತಸಭಾಂಗಣದ ನವೀಕರಣಕ್ಕೆ ಆರ್‌ಎಪಿಸಿಎಂಎಸ್‌ನಿಂದ ೨೦ ಲಕ್ಷ ರು. ಹಾಗೂ ಸರ್ಕಾರದಿಂದ ೮೦ ಲಕ್ಷ ರು. ಸೇರಿಸಿ ಒಂದು ಕೋಟಿ ರು. ವೆಚ್ಚದಲ್ಲಿ ಆತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂಬ ಭರವಸೆ ನೀಡಿದರು. ಕಾರ್ಗೋ ವಿಮಾನ ನಿಲ್ದಾಣವನ್ನು ಮಂಡ್ಯಕ್ಕೆ ತರುತ್ತಿದ್ದು, ಕೇಂದ್ರ ಸಚಿವರು ಹೆಚ್ಚಿನ ಸಹಕಾರ ನೀಡುವಂತೆ ಮನವಿಯನ್ನೂ ಇಟ್ಟರು.

ಅಂದಾಜುಪಟ್ಟಿ ಪ್ರಕ್ರಿಯೆ ಆರಂಭ:

ರೈತ ಸಭಾಂಗಣದ ನವೀಕರಣಕ್ಕೆ ಸಂಬಂಧಿಸಿದಂತೆ ಸೋಮವಾರವೇ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ನಿರ್ಮಿತಿ ಕೇಂದ್ರದವರನ್ನು ಕರೆತಂದು ಅಂದಾಜುಪಟ್ಟಿಯನ್ನು ತಯಾರಿಸುತ್ತಿದ್ದಾರೆಂದು ತಿಳಿದುಬಂದಿದೆ. ಆದಷ್ಟು ಬೇಗ ರೈತಸಭಾಂಗಣಕ್ಕೆ ಅಗತ್ಯವಿರುವ ಸೌಲಭ್ಯಗಳ ಕುರಿತಾದ ಅಂದಾಜುಪಟ್ಟಿ ಹಾಗೂ ನೀಲಿ ನಕಾಶೆಯೊಂದಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಶೀಘ್ರ ಮಂಜೂರು ಮಾಡಿಸಿ ಪಾರಂಪರಿಕ ಕಟ್ಟಡವಾದ ರೈತ ಸಭಾಂಗಣ ನವೀಕರಣದ ಕ್ರೆಡಿಟ್ ತೆಗೆದುಕೊಳ್ಳುವುದಕ್ಕೆ ಜೆಡಿಎಸ್ ಪಡೆ ಮುಂದಾಗಿದೆ.

ಕೇಂದ್ರದಿಂದ ಹಣ ಬಿಡುಗಡೆಗೊಳಿಸಿ ಆರು ತಿಂಗಳೊಳಗೆ ಕಾಮಗಾರಿ ಪೂರೈಸುವುದರೊಂದಿಗೆ ಕಾಂಗ್ರೆಸ್‌ನವರಿಗೆ ಹಿನ್ನಡೆ ಉಂಟುಮಾಡಬೇಕೆಂಬ ಉದ್ದೇಶವೂ ಇದರ ಹಿಂದೆ ಅಡಗಿರುವಂತೆ ಕಂಡುಬರುತ್ತಿದೆ. ಅಭಿವೃದ್ಧಿಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್‌ನವರು ನಡೆಸುತ್ತಿರುವ ಪ್ರತಿಷ್ಠೆಯ ಪೈಪೋಟಿಯಲ್ಲಿ ಪಾರಂಪರಿಕ ಕಟ್ಟಡ ಎನಿಸಿರುವ ರೈತಸಭಾಂಗಣ ತನ್ನ ಮೂಲ ರೂಪವನ್ನು ಉಳಿಸಿಕೊಂಡು ಯಾವ ರೀತಿ ಆಧುನಿಕ ಸ್ಪರ್ಶವನ್ನು ಪಡೆದುಕೊಳ್ಳಲಿದೆ ಎನ್ನುವುದು ಎಲ್ಲರ ಕುತೂಹಲವನ್ನು ಕೆರಳಿಸುವಂತೆ ಮಾಡಿದೆ.ಎಚ್‌ಡಿಕೆಯಿಂದಲೇ ಘೋಷಣೆ

ಪಾರಂಪರಿಕ ಕಟ್ಟಡ ಎನಿಸಿರುವ ರೈತಸಭಾಂಗಣ ನವೀಕರಣ ಸಂಬಂಧ ಈಗಾಗಲೇ ನಿರ್ಮಿತಿ ಕೇಂದ್ರದವರಿಂದ ಅಂದಾಜು ಪಟ್ಟಿ ತಯಾರಿಸುತ್ತಿದ್ದೇನೆ. ಈ ವಾರದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯಕ್ಕೆ ಆಗಮಿಸುತ್ತಿದ್ದಾರೆ. ರೈತಸಭಾಂಗಣಕ್ಕೆ ಹಣಕಾಸಿನ ನೆರವು ನೀಡುವ ಸಂಬಂಧ ಅವರಿಂದಲೇ ಘೋಷಣೆ ಮಾಡಿಸುತ್ತೇನೆ. ೨ ಕೋಟಿ ರು. ಹಣ ಖರ್ಚಾದರೂ ನೀಡುವ ಭರವಸೆ ಸಿಕ್ಕಿರುವುದರಿಂದ ಶೀಘ್ರದಲ್ಲೇ ರೈತಸಭಾಂಗಣದ ನವೀಕರಣ ಮುಹೂರ್ತ ನಿಗದಿಪಡಿಸಲಾಗುವುದು.

- ಸಿ.ಎಸ್.ಪುಟ್ಟರಾಜು, ಮಾಜಿ ಸಚಿವರು