ತಾಯಿ-ಮಗಳ ಮಧ್ಯೆ ಸ್ಪರ್ಧೆ, ಗೆಲ್ಲುವೆ: ಗಾಯತ್ರಿ

| Published : Mar 23 2024, 01:04 AM IST

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ತಾಯಿ-ಮಗಳ ಮಧ್ಯೆ ಸ್ಪರ್ಧೆಯಿದ್ದು, ತಾವೇ ಗೆಲ್ಲುವ ಸಂಪೂರ್ಣ ವಿಶ್ವಾಸ, ಭರವಸೆ ಇದೆ. ಶಾಮನೂರು ಹಾಗೂ ತಮ್ಮ ಕುಟುಂಬ ಬೀಗರಾಗುತ್ತೇವೆ. ನಾನು ತಾಯಿ ಸ್ಥಾನದಲ್ಲಿದ್ದೇನೆ. ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಮಗಳಾಗಿದ್ದಾರೆ. ತಾಯಿ-ಮಗಳ ಮಧ್ಯೆ ಸ್ಪರ್ಧೆ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ದಾವಣಗೆರೆಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ತಾಯಿ-ಮಗಳ ಮಧ್ಯೆ ಸ್ಪರ್ಧೆಯಿದ್ದು, ತಾವೇ ಗೆಲ್ಲುವ ಸಂಪೂರ್ಣ ವಿಶ್ವಾಸ, ಭರವಸೆ ಇದೆ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹೇಳಿದರು.

ನಗರದ ಶ್ರೀ ದುರ್ಗಾಂಬಿಕಾದೇವಿ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿ, ದೇವಿಯ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಮನೂರು ಹಾಗೂ ತಮ್ಮ ಕುಟುಂಬ ಬೀಗರಾಗುತ್ತೇವೆ. ನಾನು ತಾಯಿ ಸ್ಥಾನದಲ್ಲಿದ್ದೇನೆ. ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಮಗಳಾಗಿದ್ದಾರೆ. ತಾಯಿ-ಮಗಳ ಮಧ್ಯೆ ಸ್ಪರ್ಧೆ ಎಂದರು.

ತಮ್ಮ ಸ್ಪರ್ಧೆಯ ಬಗ್ಗೆ ಯಾರ ವಿರೋಧವೂ ಇಲ್ಲ. ಕೆಲವರು ಆಕಾಂಕ್ಷಿಗಳು ಟಿಕೆಟ್ ಕೇಳಿದ್ದರು. ಆದರೆ, ಟಿಕೆಟ್ ಸಿಗದಿದ್ದಾಗ ಸಹಜವಾಗಿಯೇ ಟಿಕೆಟ್ ತಪ್ಪಿದವರಿಗೆ ಬೇಜಾರ್ ಆಗಿದೆ. ಆ ಎಲ್ಲರನ್ನೂ ಅಣ್ಣ ಅಂತಲೇ ಮಾತನಾಡಿಸುತ್ತೇನೆ. ಎಲ್ಲರನ್ನೂ ಭೇಟಿಯಾಗಿ ಮಾತನಾಡಿದ್ದೇನೆ ಎಂದು ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಎಸ್.ಎ.ರವೀಂದ್ರನಾಥ ಮತ್ತು ಗುಂಪಿನ ಕುರಿತ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಮೊದಲ ಬಾರಿಗೆ ದಾವಣಗೆರೆ ಕ್ಷೇತ್ರದಲ್ಲಿ ಮಹಿಳೆಯರಿಗೆ ಅವಕಾಶ ಸಿಕ್ಕಿದೆ. ಶೇ.33 ಮೀಸಲಾತಿ ಸಿಕ್ಕಿರುವುದು ನಮಗೂ ಖುಷಿ ತಂದಿದೆ. ಪ್ರಧಾನಿ ಮೋದಿ ಆಶೀರ್ವಾದವೂ ಸಿಕ್ಕಿದೆ. ರಾಜ್ಯ ನಾಯಕರು ನನ್ನನ್ನು ಬಿಜೆಪಿ ಅಭ್ಯರ್ಥಿ ಮಾಡಿದ್ದು, ನ್ಯಾಯಯುತ ಸೇವೆ ಸಲ್ಲಿಸುವೆ. ವಿಶೇಷವಾಗಿ ಹೆಣ್ಣುಮಕ್ಕಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ. ಗೆದ್ದ ನಂತರ ಕ್ಷೇತ್ರದಿಂದ ಕಮಲದ ಹೂವನ್ನು ತೆಗೆದುಕೊಂಡು ಹೋಗಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅರ್ಪಿಸುತ್ತೇನೆ. ವಿಶ್ವ ನಾಯಕ ಮೋದಿಜಿ ಮತ್ತೆ ಪ್ರಧಾನಿ ಆಗಬೇಕೆಂಬುದು ಕಾರ್ಯಕರ್ತರು, ಮತದಾರರ ಆಶಯ ಎಂದು ಹೇಳಿದರು.

ದಾವಣಗೆರೆ ಸಂಸದರಾಗಿ ತಮ್ಮ ಪತಿ ಜಿ.ಎಂ.ಸಿದ್ದೇಶ್ವರ 20 ವರ್ಷ ಮಾಡಿರುವ ಅಭಿವೃದ್ಧಿ ಕಾರ್ಯಗಳ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿದ್ದೇವೆ. ಮಾವ, ದಿವಂಗತ ಜಿ.ಮಲ್ಲಿಕಾರ್ಜುನಪ್ಪ ಅವರು ಹೇಗೆ ಸಂಸದರು ಸುಲಭವಾಗಿ ಕೈಗೆ ಸಿಗುತ್ತಾರೆ ಎಂಬುದನ್ನು ಸಾಧಿಸಿ, ತೋರಿಸಿದ್ದರೋ, ಅದೇ ರೀತಿ ಪತಿ ಸಹ ಕೆಲಸ ಮಾಡಿದ್ದಾರೆ ಎಂದರು.

ಸಂಸದ ಜಿ.ಎಂ.ಸಿದ್ದೇಶ್ವರ, ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್‌, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ.ಪಾಟೀಲ, ಆನಂದ ಇತರರು ಇದ್ದರು.

- - - ಬಾಕ್ಸ್‌

ಒಂದೇ ಮನೆಯ ಮೂವರಿಗೆ ಅಧಿಕಾರಕ್ಕೆ ಜನ ಒಪ್ಪಲ್ಲ: ಸಿದ್ದೇಶ್ವರ - ಶಾಮನೂರು ಮನೆಯ ಮೂರನೇ ವ್ಯಕ್ತಿಗೆ ಜನರಂತೂ ಒಪ್ಪಲ್ಲ,

- ಜಿ.ಮಲ್ಲಿಕಾರ್ಜುನಪ್ಪ ಸೊಸೆ ಗಾಯತ್ರಿಗೆ ಜನ ಆಶೀರ್ವದಿಸ್ತಾರೆ

ದಾವಣಗೆರೆ: ಒಂದೇ ಮನೆಯಲ್ಲಿ ಮೂವರಿಗೆ ಅಧಿಕಾರವೆಂದರೆ ಜನ ಒಪ್ಪುವುದಿಲ್ಲ. ಶಾಮನೂರು ಶಿವಶಂಕರಪ್ಪ ಅವರ ಮನೆಯಲ್ಲಿ ಈಗಾಗಲೇ ಇಬ್ಬರು ಅಧಿಕಾರದಲ್ಲಿದ್ದು, ಮೂರನೇ ವ್ಯಕ್ತಿಗೆ ಅಧಿಕಾರ ಕೊಡುವುದಕ್ಕೆ ಜನರೂ ಒಪ್ಪುವುದಿಲ್ಲ ಎಂದು ಸಂಸದ, ಕೇಂದ್ರದ ಮಾಜಿ ಸಚಿವ ಡಾ. ಜಿ.ಎಂ. ಸಿದ್ದೇಶ್ವರ ಹೇಳಿದರು.

ನಗರದಲ್ಲಿ ಶುಕ್ರವಾರ ಬಿಜೆಪಿ ಅಭ್ಯರ್ಥಿಯಾದ ಪತ್ನಿ ಗಾಯತ್ರಿ ಸಿದ್ದೇಶ್ವರರ ಜೊತೆಗೆ ಶ್ರೀ ದುರ್ಗಾಂಬಿಕಾ ದೇವಿ ದರ್ಶನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಜಿ.ಮಲ್ಲಿಕಾರ್ಜುನಪ್ಪ ಅವರ ಕುಟುಂಬದಲ್ಲಿ ಯಾರೂ ಅಧಿಕಾರದಲ್ಲಿ ಇಲ್ಲ. ಹಾಗಾಗಿ, ಈ ಸಲ ಮಲ್ಲಿಕಾರ್ಜುನಪ್ಪವರ ಹಿರಿಯ ಸೊಸೆ ಗಾಯತ್ರಿ ಸಿದ್ದೇಶ್ವರ್‌ ಅವರಿಗೆ ಗೆಲ್ಲಿಸಬೇಕೆಂಬು ಕ್ಷೇತ್ರದ ಮತ ದಾರರು ನಿರ್ಧಾರ ಮಾಡಿದ್ದಾರೆ ಎಂದರು.

- - -

ಟಾಪ್‌ ಕೋಟ್‌ ಮಾಜಿ ಸಚಿವ ರವೀಂದ್ರನಾಥ ಹಿರಿಯರು, ಮಾರ್ಗದರ್ಶಕರು. ಕರುಣಾಕರ ರೆಡ್ಡಿ ನನ್ನ ಸ್ನೇಹಿತರು. ಮಾಡಾಳು ವಿರೂಪಾಕ್ಷಪ್ಪ, ರೇಣುಕಾಚಾರ್ಯ ಸೇರಿದಂತೆ ಎಲ್ಲರೂ ನನ್ನ ಮಿತ್ರರು. ಎಲ್ಲರೂ ನಮಗೆ ಬೆಂಬಲ ನೀಡುತ್ತಾರೆ. ನನ್ನ ಪತ್ನಿ ಗಾಯತ್ರಿ ಸಿದ್ದೇಶ್ವರ ಎಲ್ಲರನ್ನೂ ಭೇಟಿ ಮಾಡಿ, ಮಾತನಾಡಿದ್ದಾರೆ. ಶೀಘ್ರವೇ ಎಲ್ಲವೂ ಸರಿಯಾಗಲಿದೆ. ದಾವಣಗೆರೆಯಲ್ಲಿ ಮತ್ತೆ ನಾವು ಗೆಲ್ಲುತ್ತೇವೆ

- ಜಿ.ಎಂ.ಸಿದ್ದೇಶ್ವರ, ಸಂಸದ, ದಾವಣಗೆರೆ ಕ್ಷೇತ್ರ

- - -

-(ಫೋಟೋ ಬರಲಿವೆ):