ಮಕ್ಕಳ ಪ್ರತಿಭೆ ಗುರುತಿಸಲು ಸ್ಪರ್ಧೆ ಅವಶ್ಯ

| Published : Sep 20 2024, 01:39 AM IST / Updated: Sep 20 2024, 01:40 AM IST

ಸಾರಾಂಶ

ಶಾಲಾ ಹಂತಗಳಲ್ಲಿ ಸಿಕ್ಕ ಅವಕಾಶ ಸರಿಯಾಗಿ ಉಪಯೋಗಿಸಿಕೊಂಡರೆ ಮುಂದೆ ಅವರ ಭವಿಷ್ಯದಲ್ಲಿ ಉತ್ತಮ ಪ್ರಗತಿ ಸಾಧ್ಯ

ಶಿರಹಟ್ಟಿ: ವಿದ್ಯಾರ್ಥಿಗಳು ಪುಸ್ತಕದ ಜತೆಗೆ ಕಲೆ, ಸಾಹಿತ್ಯ, ಸಂಗೀತ ವಿಷಯಗಳನ್ನು ಇಚ್ಛಾಶಕ್ತಿಯಿಂದ ಕಲಿಯಬೇಕು. ಇದರಿಂದ ಹಲವಾರು ಪ್ರಯೋಜನಗಳಿದ್ದು, ಶಿಕ್ಷಕರು ಅಂತಹ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಮಾಗಡಿ ಸಿಆರ್‌ಪಿ ಕೆ.ಪಿ. ಕಂಬಳಿ ಹೇಳಿದರು.ಪಟ್ಟಣದ ಎಸ್‌ಎಫ್‌ಸಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಗದಗ ಜಿಪಂ, ಶಿರಹಟ್ಟಿ ತಾಪಂ, ಶಾಲಾ ಶಿಕ್ಷಣ ಇಲಾಖೆ, ಶಿರಹಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಸಮೂಹ ಸಂಪನ್ಮೂಲ ಕೇಂದ್ರ ಶಿರಹಟ್ಟಿ, ಮಾಗಡಿ, ಶಿರಹಟ್ಟಿ ಉರ್ದು ಕ್ಲಸ್ಟರ್‌ನ ಸಹಯೋಗದಲ್ಲಿ ಜರುಗಿದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ಅವರು ಪ್ರಾಸ್ತಾವಿಕ ಮಾತನಾಡಿದರು. ಮಕ್ಕಳಲ್ಲಿರುವ ಪ್ರತಿಭೆ ಅನಾವರಣಗೊಳಿಸಲು ಸ್ಪರ್ಧೆಗಳು ಅವಶ್ಯ ಎಂದರು.

ಶಾಲಾ ಹಂತಗಳಲ್ಲಿ ಸಿಕ್ಕ ಅವಕಾಶ ಸರಿಯಾಗಿ ಉಪಯೋಗಿಸಿಕೊಂಡರೆ ಮುಂದೆ ಅವರ ಭವಿಷ್ಯದಲ್ಲಿ ಉತ್ತಮ ಪ್ರಗತಿ ಸಾಧ್ಯ. ಪ್ರತಿಭೆ ಇರುವ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಬೇಕು. ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಕರು ಹಾಗೂ ಪಾಲಕರು ಸೂಕ್ತ ತರಬೇತಿ ನೀಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಚಂದ್ರಕಾಂತ ನೂರಶೆಟ್ಟರ ಮಾತನಾಡಿ, ಕೇವಲ ಶೇ. ೩೦ರಿಂದ ೪೦ ಅಂಕ ಪಡೆಯುತ್ತಿದ್ದ ಕಾಲದಲ್ಲಿ ಗುಣಮಟ್ಟದ ಮತ್ತು ಮೌಲ್ಯಾಧಾರಿತ ಶಿಕ್ಷಣ ಸಿಗುತ್ತಿತ್ತು. ಆದರೆ ಈಗ ಶೇ. ೯೦ರಷ್ಟು ಅಂಕ ಪಡೆದರೂ ಮೌಲ್ಯಾಧಾರಿತ ಶಿಕ್ಷಣ ಸಿಗುತ್ತಿಲ್ಲ. ವಿದ್ಯಾರ್ಥಿ, ಶಿಕ್ಷಕರ ಸಂಬಂಧಗಳು ಕಡಿಮೆಯಾಗುತ್ತಿವೆ. ಈ ಬೆಳವಣಿಗೆ ಸರಿಯಾದುದಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಪಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷೆ ನೀಲವ್ವ ಹುಬ್ಬಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಶಿರಹಟ್ಟಿ, ಪಪಂ ಸದಸ್ಯ ಫಕ್ಕೀರೇಶ ರಟ್ಟಿಹಳ್ಳಿ, ಸಿಆರ್‌ಪಿಗಳಾದ ಎನ್.ಎನ್. ಸಾವಿರಕುರಿ, ಗೀತಾ ಸರವಿ, ಜಿ.ಡಿ. ಈರಕ್ಕನವರ, ಬಿ.ಎಸ್. ಭಜಂತ್ರಿ, ಜಯಶ್ರೀ ಮಾಂಡ್ರೆ, ಎ.ಎಸ್. ಡಂಬಳ, ನೀಲಕಂಠ ಉಪಸ್ಥಿತರಿದ್ದರು.