ಇದು ಸ್ಪರ್ಧಾತ್ಮಕ ಜಗತ್ತು, ಇಲ್ಲಿ ನಿತ್ಯ ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಮಾತ್ರ ಉತ್ತಮ ಭವಿಷ್ಯ ಹೊಂದಲು ಸಾಧ್ಯ.

ಕನ್ನಡಪ್ರಭ ವಾರ್ತೆ ಮುಳಗುಂದ

ಇದು ಸ್ಪರ್ಧಾತ್ಮಕ ಜಗತ್ತು, ಇಲ್ಲಿ ನಿತ್ಯ ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಮಾತ್ರ ಉತ್ತಮ ಭವಿಷ್ಯ ಹೊಂದಲು ಸಾಧ್ಯ. ಆದುದರಿಂದ ವಿದ್ಯಾರ್ಥಿ ಜೀವನಕ್ಕೆ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಎಚ್. ಪಾಟೀಲ ಹೇಳಿದರು.

ಪಟ್ಟಣದ ಆರ್.ಎನ್. ದೇಶಪಾಂಡೆ ಸರಕಾರಿ ಪ್ರಥಮ ದರ್ಜೆಯಲ್ಲಿ ಕಾಲೇಜಿನಲ್ಲಿ ಕನ್ನಡ ವಿಭಾಗದಿಂದ ನಡೆದ ಅಮರ ಮಹಾವೀರ ಕವನ ಸಂಕಲನ ಲೋಕಾರ್ಪಣೆ ಹಾಗೂ ಕವನ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಹೆಚ್ಚು ಓದಿನಕಡೆ ಗಮನ ಹರಿಸಬೇಕು. ಉಪನ್ಯಾಸಕರು ಹೇಳುವ ಪ್ರತಿಯೊಂದು ವಿಷಯವನ್ನು ಗಮನವಿಟ್ಟು ಆಲಿಸಿದಾಗ ಮಾತ್ರ ಉತ್ತಮ ಪ್ರಜೆಗಳಾಗಿ ಭಾವಿ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುವುದು. ಮಹಾವೀರರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಕನ್ನಡ ಉಪನ್ಯಾಸಕ ಶಿವಪ್ಪ ಮುದಿಯಜ್ಜನವರ ಮಾತನಾಡಿ, ಮಹಾವೀರರ ಸತ್ಯ, ಶಾಂತಿ, ಅಹಿಂಸೆ, ತತ್ವಗಳು ನಮಗೆಲ್ಲಾ ದಾರಿ ದೀಪವಾಗಿದ್ದು ಅವರ ಮಾರ್ಗದಲ್ಲಿ ನಾವೆಲ್ಲರೂ ಸಾಗಿದಾಗ ಸುಂದರ ಬದುಕು ನಿರ್ಮಿಸಲು ಸಾಧ್ಯವಾಗುತ್ತದೆ ಎಂದರು.

ಕವನ ಸ್ಪರ್ಧೆಯಲ್ಲಿ ವಿಜೇತರಾದ ಶಾಲಿನಿ ಆರ್.ಸುನೇನಾ, ಶಿವಕುಮಾರ ಕಳ್ಳಿಮನಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಉಜರೆಯ ಧರ್ಮಸ್ಥಳ ಮಂಜುನಾಥೇಶ್ವರ ಪಪೂ ಕಾಲೇಜಿನ ಸಹಾಯಕ ಪ್ರಾದ್ಯಾಪಕ ಡಾ. ರಾಜಶೇಖರ ಹಳೆಮನಿ, ಶಾಸ್ತ್ರದಾನಿಗಳಾದ ನಾಗರಾಜ ದೇಶಪಾಂಡೆ, ಸಂತೋಷ ದೇಶಪಾಂಡೆ, ಎಸ್.ಸಿ. ಚವಡಿ, ಅಶೋಕ ಸೊನಗೋಜಿ, ಕೆ.ಎಲ್. ಕರಿಗೌಡ್ರ, ವಿಜಯ ನೀಲಗುಂದ, ವೀರೇಂದ್ರ ಹೂಲಿ, ಮಹಾವೀರ ಹೊಂಬಣ್ಣವರ, ಅಜ್ಜಪ್ಪ ಹುಗೆಣ್ಣವರ, ಪ್ರಾ. ಆರ್.ಎಂ. ಕಲ್ಲನಗೌಡ್ರ ಇದ್ದರು.