ದಸರೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಗಾರ ಶ್ಲಾಘನೀಯ: ಡಾ.ಸೆಲ್ವಮಣಿ

| Published : Oct 21 2023, 12:30 AM IST

ದಸರೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಗಾರ ಶ್ಲಾಘನೀಯ: ಡಾ.ಸೆಲ್ವಮಣಿ
Share this Article
  • FB
  • TW
  • Linkdin
  • Email

ಸಾರಾಂಶ

ಜ್ಞಾನದಸರಾ ಒಂದು ದಿನದ ತರಬೇತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ದಸರಾ ಕಾರ್ಯಕ್ರಮದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಕಾರ್ಯಾಗಾರ ಆಯೋಜನೆ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಡಾ. ಆರ್‌.ಸೆಲ್ವಮಣಿ ಹೇಳಿದರು. ನಗರದ ಕುವೆಂಪು ರಂಗಮಂದಿರದಲ್ಲಿ ಮಹಾನಗರ ಪಾಲಿಕೆ ನೇತೃತ್ವದ ದಸರಾ ಅಂಗವಾಗಿ ಶುಕ್ರವಾರ ಪದವಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಸಮನ್ವಯ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಜ್ಞಾನದಸರಾ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಿಂತ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಬೇರೆ ರಾಜ್ಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿವಿಧ ಸಂಘ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಪೂರ್ವಸಿದ್ಧತೆ ಬಗ್ಗೆ ತರಬೇತಿ ನೀಡುತ್ತವೆ. ಈ ನಿಟ್ಟಿನಲ್ಲಿ ಪಾಲಿಕೆಯ ಈ ಕಾರ್ಯಕ್ರಮ ಅತ್ಯಮೂಲ್ಯ ಎಂದರು. ಮೊದಲು ನಮ್ಮ ಮುಂದಿನ ಜೀವನದ ಬಗ್ಗೆ ಸೂಕ್ತ ಯೋಜನೆಗಳನ್ನು ಮಾಡಿ, ಅದಕ್ಕೆ ಬೇಕಾದ ಯೋಚನೆಗಳನ್ನು ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಖಾಲಿ ಇರುವ ಹುದ್ದೆಗಳು ಮತ್ತು ವಿವಿಧ ಕೋರ್ಸ್‌ಗಳು, ಗೌರವಧನ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೇಳಿದರು. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಾಧನೆ ಶಿಖರ ಏರಬೇಕಾದರೆ ನಿರ್ದಿಷ್ಟ ಗುರಿ ಇರಬೇಕು. ಇದಕ್ಕೆ ಪೂರಕವಾದ ಜೊತೆಗಾರರನ್ನು ಹೊಂದಿದರೆ ಗುರಿ ತಲುಪುವುದು ಸುಲಭ ಆಗುತ್ತದೆ ಎಂದು ಸಲಹೆ ನೀಡಿದರು. ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ನವರಾತ್ರಿಯ ಶಾರದಾ ಪೂಜೆ ದಿನದಂದೇ ಜ್ಞಾನ ದಸರಾ ಹಮ್ಮಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ತರಬೇತಿ ನೀಡುವ ವಿಶೇಷ ಆಲೋಚನೆಯನ್ನು ಸಮನ್ವಯ ಟ್ರಸ್ಟ್ ಸಹಯೋಗದಲ್ಲಿ ಈ ಬಾರಿ ಹಮ್ಮಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಳ್ಳೆಯ ನಾಯಕರು, ಅಧಿಕಾರಿಗಳು. ಒಳ್ಳೆಯ ಪ್ರಜೆಗಳಾಗಿ ದೇಶ ಕಟ್ಟುವಲ್ಲಿ ಕಾರ್ಯೋನ್ಮುಖರಾಗೋಣ ಎಂದರು. ವೇದಿಕೆಯಲ್ಲಿ ಮೇಯರ್ ಎಸ್. ಶಿವಕುಮಾರ್, ಉಪಮೇಯರ್ ಲಕ್ಷ್ಮಿ ಶಂಕರ ನಾಯಕ್, ಕಲಾದಸರಾ ಸಮಿತಿ ಅಧ್ಯಕ್ಷೆ ಸುರೇಖಾ ಮುರುಳೀಧರ್ ಮತ್ತಿತರರು ಇದ್ದರು. - - - -20ಎಸ್‌ಎಂಜಿಕೆಪಿ04: ಜ್ಞಾನದಸರಾ ಅಂಗವಾಗಿ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ. ಆರ್‌.ಸೆಲ್ವಮಣಿ ಉದ್ಘಾಟಿಸಿದರು.