ಸಾರಾಂಶ
- ಅಹಮ್ಮದ್ ಕಬೀರ್ ಖಾನ್, ಇತರರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ
- - -ದಾವಣಗೆರೆ: ಲೋಕಸಭೆ, ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರವಾದ ಹಿನ್ನೆಲೆ ಪ್ರಚೋದನಾತ್ಮಕ ವೀಡಿಯೋ ಪೋಸ್ಟನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪದ ಮೇಲೆ ಮಹಾನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಇತರರ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ.
ಪಾಲಿಕೆ 3ನೇ ವಾರ್ಡ್ ಮಾಜಿ ಸದಸ್ಯ ಹಾಗೂ ಅಹಮ್ಮದ್ ನಗರದ ವಾಸಿ ಅಹಮ್ಮದ್ ಕಬೀರ್ ಖಾನ್ ಹಾಗೂ ಇತರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಏ.8ರಂದು ಬೆಳಗಿನ ಜಾವ ಅಹಮ್ಮದ್ ಕಬೀರ್ ಖಾನ್ ಎಲ್ಲಿಯೋ ಕುಳಿತು, ಎಲ್ಲ ಊರುಗಳಲ್ಲಿ ಈ ಬಿಲ್ ರದ್ದುಪಡಿಸುವ ಕುರಿತು ಪ್ರತಿಭಟಿಸುತ್ತಿದ್ದಾರೆ ಎಂಬುದೂ ಸೇರಿದಂತೆ ಪ್ರಚೋದನಾಕಾರಿ ವೀಡಿಯೋ ಪೋಸ್ಟ್ ಮಾಡಿದ್ದನು.ವಕ್ಫ್ ಕಾಯ್ದೆ ಜಾರಿ ವಿರುದ್ಧ ಎಲ್ಲ ಕಡೆ ಏನು ಮಾಡಬೇಕೆಂದು ಸಲಹೆ ನೀಡುತ್ತಿದ್ದಾರೆ. ಅದಕ್ಕೆ ನನ್ನಿಂದ ಒಂದು ಮಾತು ಹೇಳಲಿಚ್ಛಿಸುತ್ತೇನೆ. ಪ್ರತಿಭಟಿಸುವುದರಿಂದ, ಕಟೌಟ್ ಹಿಡಿಯುವುದರಿಂದ, ಡಿಸಿ ಸಾಹೇಬರಿಗೆ, ಸಿಎಂ ಅವರಿಗೆ ಲೆಟರ್ ಕೊಡುವುದರಿಂದ ಏನೂ ಲಾಭವಿಲ್ಲ. ಇದಕ್ಕೆ ರೋಡಿಗೆ ಇಳಿಯುವುದು ಅವಶ್ಯವಾಗಿದೆ. ಏನೇ ಮಾಡಬೇಕು ಅಂತಿದ್ದೀರ ನೀವು ಕುಳಿತು, ಮಾತನಾಡಿಕೊಂಡು ಮಾಡಿ. ಈ ಕಾಯ್ದೆ ಅಷ್ಟು ಸುಲಭವಾಗಿ ರದ್ದು ಮಾಡುವುದಿಲ್ಲ. ಅದಕ್ಕೋಸ್ಕರ ತ್ಯಾಗ, ಬಲಿದಾನ ಕೊಡಬೇಕಾಗುತ್ತದೆ ಎಂದು ಪ್ರಚೋದನಾಕಾರಿಯಾಗಿ ವೀಡಿಯೋದಲ್ಲಿ ಅಹಮ್ಮದ್ ಮಾತನಾಡಿದ್ದಿದೆ.
ಈ ಕುರಿತ ಪೋಸ್ಟ್ ಮಾಡಿದ್ದ ವೀಡಿಯೋ ಪರಿಶೀಲಿಸಿದ್ದು, ಅಹಮ್ಮದ್ ಕಬೀರ್ ಖಾನ್ ಮತ್ತು ಇತರೆಯವರ ವಿರುದ್ಧ ಠಾಣಾ ಗುನ್ನೆ ನಂ.62/2025 U/S 54, 352, 353(1)(ಬಿ)(ಸಿ) (2) ರೆ/ವಿ 3(5) ಬಿಎನ್ ಎಸ್-2023 ರೀತ್ಯಾ ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.- - -(ಸಾಂದರ್ಭಿಕ)