ಸಾರಾಂಶ
ಎಫ್ಎಲ್ಎನ್ ಕಾರ್ಯಕ್ರಮ ಅನುಷ್ಠಾನಗೊಳಿಸಲು ಈಗಾಗಲೇ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ತರಬೇತಿ ಪಡೆದ ಶಿಕ್ಷಕರು ಮಕ್ಕಳಲ್ಲಿನ ಕಲಿಕೆಯ ಪ್ರಮಾಣವನ್ನು ಹೆಚ್ಚಿಸಿ ನಂತರ ಪಾಠ, ಬೋಧನೆ ಮಾಡಬೇಕೆನ್ನುವ ಉದ್ದೇಶದಿಂದಲೇ ಎಫ್ಎಲ್ಎನ್ ತರಬೇತಿ ನಡೆಸಲಾಗಿದೆ.
ಕನಕಗಿರಿ:
ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ನಟೇಶ ಮಂಗಳವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಖ್ಯಶಿಕ್ಷಕರ ಸಂಗಮೇಶ ವಿರುದ್ಧ ದೂರು ಆಧರಿಸಿ ಶಾಲೆಗೆ ಭೇಟಿ ನೀಡಲಾಗಿದೆ. ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಚುನಾಯಿತ ಪ್ರತಿನಿಧಿಗಳ ಹಾಗೂ ಶಿಕ್ಷಕರೊಂದಿಗೆ ಸಮಾಲೋಚಿಸಲಾಗಿದೆ. ಜು. 7ರ ವರೆಗೆ ಶೈಕ್ಷಣಿಕ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸಂಪನ್ಮೂಲ ವ್ಯಕ್ತಿ ಹಾಗೂ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಶಾಲೆಯಲ್ಲಿ ಕಾರ್ಯಕ್ರಮ, ಸಭೆ ನಡೆಸಲು ಎಲ್ಲ ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಮುಖ್ಯಶಿಕ್ಷಕರಿಗೆ ಆದೇಶಿಸಲಾಗಿದೆ.
ಇದರ ಹೊರತಾಗಿಯೂ ಶಾಲೆಯಲ್ಲಿ ಮತ್ತೆ ಸಮಸ್ಯೆಯಾದರೆ ತಪ್ಪಿತಸ್ಥರ ಮೇಲೆ ಕ್ರಮಕೈಗೊಂಡು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗುವುದಾಗಿ ತಿಳಿಸಿದರು.ಅಲ್ಲದೇ ಎಫ್ಎಲ್ಎನ್ ಕಾರ್ಯಕ್ರಮ ಅನುಷ್ಠಾನಗೊಳಿಸಲು ಈಗಾಗಲೇ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ತರಬೇತಿ ಪಡೆದ ಶಿಕ್ಷಕರು ಮಕ್ಕಳಲ್ಲಿನ ಕಲಿಕೆಯ ಪ್ರಮಾಣವನ್ನು ಹೆಚ್ಚಿಸಿ ನಂತರ ಪಾಠ, ಬೋಧನೆ ಮಾಡಬೇಕೆನ್ನುವ ಉದ್ದೇಶದಿಂದಲೇ ಎಫ್ಎಲ್ಎನ್ ತರಬೇತಿ ನಡೆಸಲಾಗಿದೆ. ಹೀಗಾಗಿ ಈ ಶಾಲೆಯ ಶಿಕ್ಷಕರು ಮಕ್ಕಳ ಕಲಿಕೆಯ ಪ್ರಮಾಣ ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಖಡಕ್ ಸೂಚಿಸಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಥ ಚೂಡಾಮಣಿ, ಸದಸ್ಯರಾದ ರವಿ, ಹನುಮಂತರೆಡ್ಡಿ ಮಹಲಿನಮನಿ, ಪಪಂ ಸದಸ್ಯ ಶೇಷಪ್ಪ ಪೂಜಾರ, ಶಿಕ್ಷಣ ಸಂಯೋಜಕರಾದ ಆಂಜನೇಯಸ್ವಾಮಿ, ರಾಘವೇಂದ್ರ, ಸಂಪನ್ಮೂಲ ವ್ಯಕ್ತಿ ರಾಜೀವ್, ಪ್ರಮುಖರಾದ ಸಣ್ಣ ಕನಕಪ್ಪ ಸೇರಿದಂತೆ ಇತರರಿದ್ದರು.