ಸಾರಾಂಶ
ಬೆಂಗಳೂರು : ತಮ್ಮ ಮೊಬೈಲ್ ಕರೆಗಳ (ಸಿಡಿಆರ್) ಮಾಹಿತಿಯನ್ನು ಕಾನೂನುಬಾಹಿರವಾಗಿ ಪಡೆದಿದ್ದಾರೆ ಎಂದು ಆರೋಪಿಸಿ ನಿವೃತ್ತ ಐಪಿಎಸ್ ಅಧಿಕಾರಿ ಕುಟುಂಬ ಹಾಗೂ ಹೆಬ್ಬಗೋಡಿ ಠಾಣೆ ಇನ್‌ಸ್ಪೆಕ್ಟರ್ ವಿರುದ್ಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಆ ಅಧಿಕಾರಿಯ ಅಳಿಯ ದೂರು ನೀಡಿದ್ದಾರೆ.
ನಿವೃತ್ತ ಐಪಿಎಸ್ ಅಧಿಕಾರಿ ಟಿ.ಆರ್.ಸುರೇಶ್, ಅವರ ಪತ್ನಿ ಮತ್ತು ಮಕ್ಕಳ ಹಾಗೂ ಹೆಬ್ಬಗೋಡಿ ಠಾಣೆ ಇನ್‌ಸ್ಪೆಕ್ಟರ್ ಐಯ್ಯಣ್ಣ ರೆಡ್ಡಿ ವಿರುದ್ಧ ಆರೋಪ ಬಂದಿದ್ದು, ಈ ಸಂಬಂಧ ಸುರೇಶ್ ಅವರ ಅಳಿಯ ಮತ್ತು ಐಎಎಸ್ ಅಧಿಕಾರಿ ಆಕಾಶ್ ಅವರು ನೀಡಿದ ದೂರಿನ ಮೇರೆಗೆ ಬೆಂಗಳೂರು ಗ್ರಾಮಾಂತರ ಸಿಇಎನ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸುರೇಶ್ ಅವರ ಪುತ್ರಿ ವಂದನಾ ಅವರನ್ನು ಆಕಾಶ್ ವಿವಾಹವಾಗಿದ್ದರು. ಆದರೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ದಂಪತಿ ಪ್ರತ್ಯೇಕವಾಗಿದ್ದಾರೆ. ಈ ಕೌಟುಂಬಿಕ ಗಲಾಟೆ ವಿಚಾರವಾಗಿ ಹಲವು ಬಾರಿ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿ ದೂರುಗಳು ದಾಖಲಾಗಿದ್ದವು. ಈಗ ಮೊಬೈಲ್ ಕರೆಗಳ ವಿವರ ವಿವಾದ ಕೇಳಿ ಬಂದಿದೆ.
2022ರ ಜನವರಿಯಿಂದ 2023ರ ಜನವರಿ 31ರವರೆಗಿನ ಅವಧಿಯಲ್ಲಿ ನನ್ನ ವೈಯಕ್ತಿಕ ಮೊಬೈಲ್ ಸಂಖ್ಯೆ ಕರೆಗಳ ವಿವರವನ್ನು ಕಾನೂನುಬಾಹಿರವಾಗಿ ಸುರೇಶ್ ಕುಟುಂಬ ಹಾಗೂ ಹೆಬ್ಬಗೋಡಿ ಠಾಣೆ ಐಯ್ಯಣ್ಣ ರೆಡ್ಡಿ ಪಡೆದಿದ್ದಾರೆ. ಈ ಸಿಡಿಆರ್ ಪಡೆಯಲು ಅನುಮತಿ ಪಡೆಯದ ಆರೋಪಿತರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಕಾಶ್ ಆಗ್ರಹಿಸಿದ್ದಾರೆ.